2 ತಿಂಗಳಲ್ಲಿ ಮುನಿರತ್ನಗೆ ಸಚಿವ ಸ್ಥಾನ: ಎಸ್.ಟಿ.ಸೋಮಶೇಖರ್

ಮೈಸೂರು: ‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ರಾಜ್ಯ ಸುತ್ತುವುದನ್ನು ಬಿಟ್ಟು ಜ್ಯೋತಿಷ ಕಲಿಯುತ್ತಿರಬೇಕು. ಹೀಗಾಗಿ, ಪದೇಪದೇ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ಇಲ್ಲಿ ತಿರುಗೇಟು ನೀಡಿದರು.
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ತಮ್ಮ ನಡುವಿನ ಜಟಾಪಟಿ ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲಗಳತ್ತ ಗಮನ ಹರಿಸಲಿ. ನಮ್ಮ ಪಕ್ಷದ ಉಸಾಬರಿ ಏಕೆ? ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಅಗತ್ಯವಿಲ್ಲ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.
ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ, ‘ನಾಗೇಶ್ ಅವರ ರಾಜೀನಾಮೆಯಿಂದ ತೆರವಾದ ಒಂದು ಸ್ಥಾನ ಬಾಕಿ ಇದೆ. ಅದನ್ನು ಮುನಿರತ್ನ ಅವರಿಗೆ ಕೊಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. 10 ಸಚಿವರು ಭೇಟಿಯಾಗಿ ಈಗಾಗಲೇ ಮನವಿ ಮಾಡಿದ್ದೇವೆ. ಎರಡು ತಿಂಗಳಲ್ಲಿ ಸಚಿವ ಸ್ಥಾನ ಸಿಗಬಹುದು’ ಎಂದರು.
ಸಿ.ಡಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ‘ಬೆಂಗಳೂರು ಅಭಿವೃದ್ಧಿಗೆ ರೂಪುರೇಷೆ ನೀಡಿ ಅದಕ್ಕೆ ಸಂಬಂಧಿಸಿದ ಸಿ.ಡಿಯನ್ನು ನಮಗೆ ಕಳುಹಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಬೇರೆ ಯಾವುದೇ ಸಿ.ಡಿಯನ್ನು ನಾನು ನೋಡಿಲ್ಲ. ಹೀಗಾಗಿ, ಅದರ ಬಗ್ಗೆ ಮಾಹಿತಿ ಇಲ್ಲ’ ಎಂದು ನುಡಿದರು.
‘ಲೋಕೋಪಯೋಗಿ ಇಲಾಖೆಯಿಂದ ಪ್ರತಿ ಕ್ಷೇತ್ರಕ್ಕೆ ₹ 25 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಕೋವಿಡ್ ಸಂಕಟದಿಂದ ಹೊರಬರುತ್ತಿರುವಂತೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಂಡಿವೆ’ ಎಂದು ತಿಳಿಸಿದರು.
ಇದನ್ನೂ ಓದಿ: ಹೊಸ ಕೈಗಾರಿಕಾ ನೀತಿ ಬಿಡುಗಡೆ: 20 ಲಕ್ಷ ಉದ್ಯೋಗ ಸೃಷ್ಟಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.