ಮಂಗಳವಾರ, ನವೆಂಬರ್ 12, 2019
21 °C
ತಂದೆ ತಾಯಿಯ ಜಗಳಕ್ಕೆ ಬಲಿಯಾದ ಪುತ್ರಿ

ಪುತ್ರಿಯನ್ನು ಕೊಂದ ತಂದೆಗೆ ಜೀವಾವಧಿ ಶಿಕ್ಷೆ

Published:
Updated:

ಮೈಸೂರು: ಪುತ್ರಿಯನ್ನೇ ಕೊಂದ ತಂದೆಗೆ ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ತಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದ ಹೇಮಂತಕುಮಾರ್ (40) ಶಿಕ್ಷೆಗೆ ಒಳಗಾದವ. ಈತ ತನ್ನ ಪುತ್ರಿ ರಿತನ್ಯಾ (8)ಳನ್ನು ಇಲ್ಲಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬ್ಲೇಡಿನಿಂದ ಕೋಯ್ದು ಬರ್ಬರವಾಗಿ 2016ರ ನವೆಂಬರ್ 21ರಂದು ಕೊಲೆ ಮಾಡಿದ್ದ.

ಪ್ರಕರಣದ ವಿವರ:

ಹೇಮಂತಕುಮಾರ್ ಸಣ್ಣಪುಟ್ಟ ವಿಷಯಗಳಿಗೂ ಪತ್ನಿ ಪವಿತ್ರಾ ಜತೆ ಜಗಳವಾಡುತ್ತಿದ್ದ. 2016ರ ನವೆಂಬರ್ 21ರಂದು ಸಕಲೇಶಪುರದಲ್ಲಿ ನಡೆಯುತ್ತಿದ್ದ ಸಂಬಂಧಿಕರೊಬ್ಬರ ಮದುವೆಗಾಗಿ ಈತ ಪತ್ನಿ ಮತ್ತು ಮಕ್ಕಳ ಜತೆ ಹೋಗಿದ್ದ. ಆದರೆ, ಮದುವೆ ಮಂಟಪಕ್ಕೆ ಹೋಗದ ಈತ ಪುತ್ರಿ ರಿತನ್ಯಾಳನ್ನು ಕರೆದುಕೊಂಡು ಹೂಟಗಳ್ಳಿಯ ಕೈಗಾರಿಕಾ ಪ್ರದೇಶಕ್ಕೆ ಬಂದು, ‘ಇಬ್ಬರ ಸಾವಿಗೂ ಪತ್ನಿ ಪವಿತ್ರಾ ಅವರೇ ಕಾರಣ’ ಎಂದು ‘ಡೆತ್‌ನೋಟ್‌’ವೊಂದನ್ನು ಬರೆದು ರಿತನ್ಯಾಳ ಕೈಗೆ ಇಟ್ಟು, ಬ್ಲೇಡಿನಿಂದ  ಕುತ್ತಿಗೆ ಕೋಯ್ದು ಕೊಲೆ ಮಾಡಿದ. ನಂತರ, ತನ್ನ ಎರಡೂ ಕೈಗಳನ್ನು ಬ್ಲೇಡಿನಿಂದ ಕೋಯ್ದುಕೊಂಡು ಪರಾರಿಯಾದ.

ರಿತನ್ಯಾಳ ಮೃತದೇಹ ದೊರಕಿದ ನಂತರ ಕಾರ್ಯಪ್ರವೃತ್ತರಾದ ವಿಜಯನಗರ ಠಾಣೆ ಪೊಲೀಸರು ಹೇಮಂತಕುಮಾರ್‌ನನ್ನು ಬಂಧಿಸಿದರು. ವಿಚಾರಣೆ ವೇಳೆ ಮಗು ಮತ್ತು ತನ್ನ ಸಾವಿಗೆ ಪತ್ನಿಯೇ ಕಾರಣ ಎಂದು ಬಿಂಬಿಸಲು ಪುತ್ರಿಯನ್ನು ಕೊಲೆ ಮಾಡಿ, ತಾನು ಆತ್ಮಹತ್ಯೆ ಯತ್ನಿಸಿದ್ದಾಗಿ ತಿಳಿಸಿದ. ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಅವರು ಇದೊಂದು ಹೇಯ ಕೃತ್ಯ ಎಂದು ಪರಿಗಣಿಸಿ, ಆರೋಪಿ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್‌ ಆದ ಪಿ.ಬಿ.ಧರಣ್ಣೆವರ್ ಹಾಗೂ ಎಲ್.ನಾಗರಾಜ್ ವಾದ ಮಂಡಿಸಿದ್ದರು.

ಪ್ರತಿಕ್ರಿಯಿಸಿ (+)