ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತದೇಹ ಸಿಗುವ ಮುಂಚೆಯೇ ಆರೋಪಿಗಳ ಬಂಧನ

ಕುವೆಂಪುನಗರ ಮತ್ತು ಲಕ್ಷ್ಮೀಪುರಂ ಠಾಣೆಯ ಪೊಲೀಸರ ಭರ್ಜರಿ ಕಾರ್ಯಚರಣೆ
Last Updated 14 ಅಕ್ಟೋಬರ್ 2019, 20:47 IST
ಅಕ್ಷರ ಗಾತ್ರ

ಮೈಸೂರು: ಮೃತದೇಹ ಸಿಗುವ ಮುಂಚೆಯೇ ಕೊಲೆ ಪ್ರಕರಣವೊಂದನ್ನು ಇಲ್ಲಿನ ಕುವೆಂಪುನಗರ ಹಾಗೂ ಲಕ್ಷ್ಮೀಪುರಂ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ, ಮೃತದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಇಲ್ಲಿನ ನಿವಾಸಿಗಳಾದ ಸಂಜಯ್ (22), ಶಾಂತರಾಜು (21) ಹಾಗೂ ಅಬ್ಬಾಸ್‌ ಅಲಿ (22) ಬಂಧಿತರು. ಕುವೆಂಪುನಗರದ ನಿವಾಸಿ ರಾಹುಲ್ (27) ಅ. 3ರಿಂದ ನಾಪತ್ತೆಯಾಗಿರುವ ಯುವಕ.

ಏನಿದು ಘಟನೆ?
ಅ. 3ರಂದು ಯುವದಸರೆ ನೋಡಲೆಂದು ಸ್ನೇಹಿತರೊಂದಿಗೆ ಹೊರಟ ಕುವೆಂಪುನಗರದ ನಿವಾಸಿ ರಾಹುಲ್ (27) ಎಂಬುವವರು ನಾಪತ್ತೆಯಾದರು. ಅ. 5ರಂದು ಇವರ ಪೋಷಕರು ನಾಪತ್ತೆಯಾದ ಕುರಿತು ಕುವೆಂಪುನಗರ ಪೊಲೀಸರಿಗೆ ದೂರು ನೀಡಿದರು.

ಸಾಮಾನ್ಯ ನಾಪತ್ತೆ ಪ್ರಕರಣ ಎಂಬಂತೆ ನೋಡದ ಕುವೆಂಪುನಗರ ಠಾಣೆಯ ಇನ್‌ಸ್ಪೆಕ್ಟರ್ ರಾಜು, ರಾಹುಲ್‌ ಅವರ ಮೊಬೈಲ್ ಕರೆಗಳನ್ನು ಕಲೆ ಹಾಕಿದರು. ಜತೆಯಲ್ಲಿ ಹೋದ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಪ್ರಕರಣ ನಡೆದ ಸ್ಥಳದ ವ್ಯಾಪ್ತಿಗೆ ಬರುವ ಲಕ್ಷ್ಮೀಪುರಂ ಠಾಣೆಗೆ ಪ್ರಕರಣ ವರ್ಗಾಯಿಸಿದರು.

ಲಕ್ಷ್ಮೀಪುರಂ ಠಾಣೆಯ ಇನ್‌ಸ್ಪೆಕ್ಟರ್ ಗಂಗಾಧರ್ ಅವರು ರಾಹುಲ್ ಸ್ನೇಹಿತರನ್ನು ತೀವ್ರತರವಾಗಿ ವಿಚಾರಣೆ ನಡೆಸಿದರು. ಈ ವೇಳೆ ಆರೋಪಿಗಳು ರಾಹುಲ್‌ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ್ದು ಹೇಗೆ?
ರಾಹುಲ್‌ ಅವರನ್ನು ಮಹಾರಾಜ ಕಾಲೇಜು ಮೈದಾನದಿಂದ ಓವೆಲ್‌ ಮೈದಾನಕ್ಕೆ ಕರೆದುಕೊಂಡು ಬಂದು ಕ್ಲೋರೋಂಫಾರಂ ಇರುವ ಕರವಸ್ತ್ರವನ್ನು ಮುಖಕ್ಕೆ ಒತ್ತಿ ಹಿಡಿದಿದ್ದಾರೆ. ಇದರಿಂದ ಪ್ರಜ್ಞೆ ತಪ್ಪಿದ ರಾಹುಲ್ ಕೆಲವೇ ನಿಮಿಷಗಳಲ್ಲಿ ಉಸಿರುಗಟ್ಟಿ ಸತ್ತಿದ್ದಾರೆ. ಮೃತದೇಹವನ್ನು ದ್ವಿಚಕ್ರವಾಹನದಲ್ಲಿ ಮಧ್ಯದಲ್ಲಿ ಕೂರಿಸಿಕೊಂಡು ತಿ.ನರಸೀಪುರದ ರಸ್ತೆಯಲ್ಲಿ ವರುಣಾ ನಾಲೆಗೆ ಎಸೆದಿದ್ದಾರೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಕೊಲೆಗೆ ಕಾರಣ ಏನು?
ಪ್ರಮುಖ ಆರೋಪಿ ಸಂಜಯ್ ಬಳಿ ಇದ್ದ ಚಿನ್ನದ ಸರವನ್ನು ರಾಹುಲ್ ಪಡೆದುಕೊಂಡು ವಾಪಸ್ ಕೊಡದೇ ಸತಾಯಿಸುತ್ತಿದ್ದ. ವಾಪಸ್ ಕೊಡಲೇಬೇಕು ಎಂದು ಪಟ್ಟು ಹಿಡಿದ ಸಂಜಯ್ ಓವೆಲ್ ಮೈದಾನದಲ್ಲಿ ಜಗಳ ತೆಗೆದಿದ್ದಾನೆ. ಕ್ಲೋರೋಫಾರಂ ಇರುವ ಕರವಸ್ತ್ರವನ್ನು ಮೂಗಿಗೆ ಹಿಡಿದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರು ಇದುವರೆಗೂ 16 ಮೃತದೇಹಗಳನ್ನು ಪರಿಶೀಲಿಸಿದ್ದಾರೆ. ಆದರೆ, ರಾಹುಲ್‌ ಅವರ ಹೋಲಿಕೆ ಇರುವ ಯಾವುದೇ ಮೃತದೇಹ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT