ಭಾನುವಾರ, ಜುಲೈ 25, 2021
25 °C

ಭೂ– ವಿವಾದ: ಅಣ್ಣನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: 6 ಎಕರೆ ಭೂಮಿಗಾಗಿ ಅಣ್ಣ ತಮ್ಮಂದಿರ ನಡುವೆ ನಡೆದ ವಿವಾದ ತಾರಕಕ್ಕೇರಿ ಅಣ್ಣನ ಕೊಲೆ ಮಾಡಿ ಆತನ ಮಗನಿಗೆ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ಹೈರಿಗೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ಮಹದೇವೇಗೌಡ (53) ಕೊಲೆಯಾಗಿದ್ದು, ಮೃತನ ಮಗ ಶ್ರೀಕಾಂತ್‌ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರು ಮಕ್ಕಳಿರುವ ಈ ಕುಟುಂಬಕ್ಕೆ ಸುಮಾರು 150ಕ್ಕೂ ಹೆಚ್ಚು ಎಕರೆ ಜಮೀನಿದ್ದರೂ ಕೇವಲ 6 ಎಕರೆ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಜಗಳ ನಡೆದು, ನ್ಯಾಯ ಪಂಚಾಯಿತಿಗಳು ನಡೆಯುತ್ತಿದ್ದವು. ಮೃತ ಮಹದೇವೇಗೌಡರ ಹೆಸರಿನಲ್ಲಿದ್ದ ಆರು ಎಕರೆ ಜಮೀನು ಉಳುಮೆ ಮಾಡುವ ವಿಚಾರದಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಘಟನೆ: ಶನಿವಾರ ಜಮೀನಿನಲ್ಲಿ ಮಹದೇವೇಗೌಡ ಮಗನೊಂದಿಗೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಆಗ ಇವರ ತಮ್ಮ ಗಂಗಾಧರ ಬಂದು ಉಳುಮೆ ಮಾಡದಂತೆ ಅಡ್ಡಿಪಡಿಸಿದ್ದಾನೆ. ಈ ಸಮಯದಲ್ಲಿ ಮಾತಿಗೆ ಮಾತು ನಡೆದು ಘರ್ಷಣೆಗೆ ತಿರುಗಿದೆ. ಆಗ ಗಂಗಾಧರ ತನ್ನೊಂದಿಗೆ ತಂದಿದ್ದ ಚಾಕುವಿನಿಂದ ಇಬ್ಬರಿಗೂ ಇರಿದಿದ್ದಾನೆ, ಅಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಅಕ್ಕಪಕ್ಕದ ಗ್ರಾಮಸ್ಥರು ಇವರ ಗಲಾಟೆಯನ್ನು ಬಿಡಿಸಲು ಬಂದಾಗ, ಕೊಲೆ ಮಾಡಿದ ಗಂಗಾಧರ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯಲ್ಲಿ ಆರೋಪಿ ಗಂಗಾಧರನಿಗೂ ತೀವ್ರಗಾಯಗಳಾಗಿದ್ದರಿಂದ ಪೊಲೀಸರು ವಶಕ್ಕೆ ಪಡೆದ ನಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ನಾಯಕ್‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು