ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು | ಪತ್ನಿಯನ್ನು ಕೊಚ್ಚಿ, ನೇಣಿಗೆ ಶರಣಾದ ಪತಿ

ಘಟನೆಗೆ ಬೆಚ್ಚಿಬಿದ್ದ ನಂಜನಗೂಡು ತಾಲ್ಲೂಕಿನ ಮಡಹಳ್ಳಿ ಗ್ರಾಮಸ್ಥರು
Last Updated 19 ಫೆಬ್ರುವರಿ 2020, 11:57 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಮಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಹಾಕಿದ ಪತಿ, ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಡಹಳ್ಳಿ ಗ್ರಾಮದ ಪುಟ್ಟಮಾದಪ್ಪ ಎಂಬುವರ ಮಗ ಶಾಂತಮೂರ್ತಿ (40), ತನ್ನ ಪತ್ನಿ ಪುಟ್ಟಮಣಿ(38)ಯನ್ನು ಕೊಲೆ ಮಾಡಿ, ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.

ತಿ.ನರಸೀಪುರ ತಾಲ್ಲೂಕಿನ ಕಿರಸಗೂರು ಗ್ರಾಮದ ಪುಟ್ಟಣ್ಣ ಎಂಬುವರ ಮಗಳು ಪುಟ್ಟಮಣಿಯನ್ನು 15 ವರ್ಷಗಳ ಹಿಂದೆ, ಮಡಹಳ್ಳಿಯ ಶಾಂತಮೂರ್ತಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಈ ದಂಪತಿಗೆ ಅಭಿ (12), ಪಲ್ಲವಿ (7) ಎಂಬ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಮಂಗಳವಾರ ಸಂಜೆ ಪತ್ನಿಯನ್ನು ತನ್ನ ಜಮೀನಿಗೆ ಕರೆದೊಯ್ದ ಶಾಂತಮೂರ್ತಿ, ಆಕೆಯನ್ನು ಮಚ್ಚಿನಿಂದ ಕೊಚ್ಚಿದ್ದಾನೆ. ನಂತರ ಗ್ರಾಮದ ತನ್ನ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದಲ್ಲಿ ನಡೆದ ಈ ಘಟನೆಯಿಂದ ಜನರು ಭಯಭೀತರಾಗಿದ್ದಾರೆ.

ಘಟನೆ ಸ್ಥಳಕ್ಕೆ ಡಿವೈಎಸ್‌ಪಿ ಪ್ರಭಾಕರ್ ರಾವ್ ಶಿಂದೆ, ಸಿಪಿಐ ಶೇಖರ್, ಬಿಳಿಗೆರೆ ಪೊಲೀಸ್ ಠಾಣೆಯ ಪಿಎಸ್ಐ ಯಶವಂತ್ ಕುಮಾರ್ ಭೇಟಿ ನೀಡಿ, ಮಹಜರು ನಡೆಸಿದ್ದಾರೆ.

‘ಘಟನೆಯಲ್ಲಿ ದಂಪತಿ ಮರಣ ಹೊಂದಿರುವುದರಿಂದ, ತನಿಖೆಯ ನಂತರ ಕೊಲೆಗೆ ಕಾರಣ ಏನು ಎಂಬುದು ತಿಳಿಯಲಿದೆ’ ಎಂದು ಡಿವೈಎಸ್‌ಪಿ ಪ್ರಭಾಕರ್‌ರಾವ್‌ ಶಿಂದೆ ಸುದ್ದಿಗಾರರಿಗೆ ತಿಳಿಸಿದರು.

ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

ಪಿರಿಯಾಪಟ್ಟಣ: ತಾಲ್ಲೂಕಿನ ಕಂಪಲಾಪುರ ಗ್ರಾಮದಲ್ಲಿ ಫೆ.10ರ ಸೋಮವಾರ ರಾತ್ರಿ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾರಾಯಣಮೂರ್ತಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ಕಂಪಲಾಪುರದ ರಾಜು ಎಂಬಾತ ಸಹೋದರರಾದ ಕಾಂತರಾಜ್, ನಾರಾಯಣ ಮೂರ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ವೇಳೆ ರಾಜು ಸಹೋದರ ಸಂತೋಷ್ ಎಂಬಾತ ಹಲ್ಲೆ ನಡೆಸಲು ಸಹಕಾರ ನೀಡಿದ್ದ.

ಕಾಂತರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು. ಹಲ್ಲೆಗೊಳಗಾಗಿದ್ದ ನಾರಾಯಣಮೂರ್ತಿ ಅವರನ್ನು ಚಿಕಿತ್ಸೆಗೆಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಗಳಾದ ರಾಜು, ಸಂತೋಷ್‌ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಾರಾಯಣಮೂರ್ತಿ ಮೃತಪಟ್ಟಿದ್ದರಿಂದ ಕಂಪಲಾಪುರದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಗಾಯಗೊಂಡ ವಿದ್ಯಾರ್ಥಿ

ಸಾಲಿಗ್ರಾಮ: ಇಲ್ಲಿಗೆ ಸಮೀಪದ ಎಲೆಮುದ್ದನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬಸ್‌ನಿಂದ ಇಳಿದು, ಸರ್ಕಾರಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿ ಬಾಚಹಳ್ಳಿ ಗ್ರಾಮದ ಆನಂದ (11) ಕಾಲಿನ ಮೇಲೆ ಬಸ್ ಚಕ್ರ ಹರಿದು ಗಾಯಗೊಂಡಿದ್ದಾನೆ.

ಎಲೆಮುದ್ದನಹಳ್ಳಿ ಗ್ರಾಮದಲ್ಲಿ ಬಸ್ ನಿಂತ ವೇಳೆ ಬಸ್‌ನಿಂದ ಇಳಿಯುವ ವೇಳೆ ಈ ಘಟನೆ ನಡೆದಿದೆ ಎಂದು ಶಾಲೆ ಮುಖ್ಯಸ್ಥರು ಸಾಲಿಗ್ರಾಮ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಆನಂದನ ಕಾಲು ಸಂಪೂರ್ಣ ಜಖಂಗೊಂಡಿದ್ದು, ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಯೇಜ್ ಫಾರ್ಮ್: ಕಸದ ಗುಡ್ಡಕ್ಕೆ ಬೆಂಕಿ

ಮೈಸೂರು: ನಗರದ ವಿದ್ಯಾರಣ್ಯಪುರಂನಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಕಸಕ್ಕೆ ಮಂಗಳವಾರ ಮಧ್ಯಾಹ್ನ ಬೆಂಕಿ ತಗುಲಿದೆ.

ಬಯಲಲ್ಲಿರುವ ಕಸದ ಗುಡ್ಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂರರಿಂದ–ನಾಲ್ಕು ಎಕರೆ ವ್ಯಾಪ್ತಿಯಲ್ಲಿನ ಕಸ ಬೆಂಕಿಗೆ ಸುಟ್ಟುಹೋಗಿದೆ. ಬೆಂಕಿಯ ಕೆನ್ನಾಲಿಗೆ ಇತರೆಡೆ ಪಸರಿಸದಂತೆ ಮಹಾನಗರ ಪಾಲಿಕೆ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.

‘ಕಸದ ಗುಡ್ಡೆಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪಾಲಿಕೆ ಸಿಬ್ಬಂದಿ ಇತರೆಡೆ ಹರಡದಂತೆ ನೋಡಿಕೊಂಡರು. ಅಗ್ನಿಶಾಮಕ ದಳದ ಮೂರ್ನಾಲ್ಕು ವಾಹನಗಳು ಘಟಕ ಪ್ರವೇಶಿಸಿ ಬೆಂಕಿ ನಂದಿಸಿದವು. ಕಸದ ಮಿಶ್ರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೂ ಇದ್ದು, ಯಾವಾಗ ಬೇಕಾದರೂ ಮತ್ತೆ ಬೆಂಕಿ ಕಾಣಿಸಿಕೊಳ್ಳಬಹುದು. ಮೂರ್ನಾಲ್ಕು ದಿನ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಿದ್ದೇವೆ’ ಎಂದು ಘಟಕದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರೇಳು ವರ್ಷದ ಹಿಂದೆ ಸಹ ಈ ಪ್ರಮಾಣದ ಬೆಂಕಿ ಕಸದ ಗುಡ್ಡೆಗಳಲ್ಲಿ ಕಾಣಿಸಿಕೊಂಡಿತ್ತು ಎಂದು ಅವರು ಹೇಳಿದರು.

ಕಳ್ಳತನ: ಆರೋಪಿ ಬಂಧನ

ಸಂಬಂಧಿಕರ ಮನೆಯಲ್ಲೇ ಕಳ್ಳತನ ಮಾಡಿದ್ದ ಆರೋಪಿಯನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದ ಅಭಿಷೇಕ್‌ಗೌಡ (29) ಬಂಧಿತ ಆರೋಪಿ. ಈತನಿಂದ ₹ 2.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈತ ಆಲನಹಳ್ಳಿಯ ಗುರುಮಲ್ಲೇಶ್ವರ ಬಡಾವಣೆಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗೋಕುಲಂ: ಮನೆಯಲ್ಲಿ ಕಳವು

ಮೈಸೂರಿನ ಗೋಕುಲಂನ ರವಿ ಎಂಬುವವರ ನಿವಾಸದಲ್ಲಿ ಕಳವು ನಡೆದಿದೆ.

ರವಿ ತಮ್ಮ ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಕುಟುಂಬ ಸಮೇತರಾಗಿ ಕೆಲಸದ ನಿಮಿತ್ತ ಹೋಗಿದ್ದಾರೆ. ಇದನ್ನು ಅರಿತ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ, ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ರವಿ ಸ್ನೇಹಿತ ಟಿ.ಕೆ.ಪ್ರಶಾಂತ್ ದೂರು ಸಲ್ಲಿಸಿದ್ದಾರೆ ಎಂದು ವಿ.ವಿ.ಪುರಂ ಠಾಣೆ ಪೊಲೀಸರು ಮಾಹಿತಿ ನೀಡಿದರು.

ರವಿ ಬಂದ ಬಳಿಕ ಪರಿಶೀಲನೆ ನಡೆಸಿ, ಯಾವ್ಯಾವ ವಸ್ತು, ಎಷ್ಟು ಮೌಲ್ಯದ ಚಿನ್ನಾಭರಣ ಕಳವಾಗಿವೆ ಎಂಬ ಪಟ್ಟಿ ಕೊಡಲಿದ್ದೇವೆ ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಹುಣಸೂರು: ಪೌರಾಯುಕ್ತ ಶಿವಪ್ಪನಾಯಕ ಅಮಾನತು

ಹುಣಸೂರು: ಹುಣಸೂರು ನಗರಸಭೆಯಲ್ಲಿ ಪೌರಾಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಎಸ್‌.ಶಿವಪ್ಪನಾಯಕ ಅವರನ್ನು ಅಮಾನತು ಮಾಡಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎ.ವಿಜಯಕುಮಾರ್‌ ಆದೇಶ ಹೊರಡಿಸಿದ್ದಾರೆ.

ಹುಣಸೂರು ನಗರದ ನಿವಾಸಿ ಎಚ್‌.ಆರ್‌.ಚಿದಾನಂದ ಚುನಾವಣಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಪೌರಾಯುಕ್ತರು 2019ರ ವಿಧಾನಸಭಾ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ರಾಜಕಾರಣಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ದೂರು ಸಲ್ಲಿಸಿದ್ದರು.

ಈ ಸಂಬಂಧ ಚುನಾವಣಾ ಆಯೋಗ ವಿಚಾರಣೆ ನಡೆಸಿತ್ತು. ಪ್ರಜಾಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 134 (ಎ) ಮತ್ತು ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಿದೆ.

ನಗರಸಭೆಯಲ್ಲಿ ಪೌರಾಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಪ್ಪನಾಯಕ ಮೂರನೇ ಬಾರಿಗೆ ಅಮಾನತುಗೊಂಡಿದ್ದಾರೆ. ಈ ಹಿಂದೆ ಎರಡು ಬಾರಿ ನಗರಸಭೆ ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸದ ಕಾರಣ ಸಾರ್ವಜನಿಕರು ಹೂಡಿದ್ದ ದೂರಿಗೆ ಈ ಶಿಕ್ಷೆ ಎದುರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT