ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶ್ರೀಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಒತ್ತಾಯ

Last Updated 1 ಸೆಪ್ಟೆಂಬರ್ 2022, 10:45 IST
ಅಕ್ಷರ ಗಾತ್ರ

ಮೈಸೂರು: ‘ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಬೇಕಾದರೆ, ಸಂತ್ರಸ್ತ ವಿದ್ಯಾರ್ಥಿನಿಯರಿದ್ದ ಹಾಸ್ಟೆಲ್‌ನ ವಾರ್ಡನ್‌ ಬಂಧಿಸಬೇಕು ಮತ್ತು ಆ ಮಠದಿಂದ ಶ್ರೀಗಳಾಗಿ ಹೊರಹೊಮ್ಮಿರುವವರೆಲ್ಲರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಬೇಕು’ ಎಂದು ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡ ‍ಪುರುಷೋತ್ತಮ್ ಒತ್ತಾಯಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಶ್ರೀಗಳು ತಪ್ಪು ಮಾಡಿಲ್ಲವಾದರೆ ತಾವಾಗಿಯೇ ಪೊಲೀಸರಿಗೆ ಶರಣಾಗಿ ವಿಚಾರಣೆಗೆ ಒಳಗಾಗಲಿ’ ಎಂದರು.

‘ನನ್ನ ವಿರುದ್ಧ 15 ವರ್ಷಗಳಿಂದಲೂ ಷಡ್ಯಂತ್ರ ನಡೆಯುತ್ತಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಹೀಗಿರುವಾಗ, ಅವರೇಕೆ ಕಾನೂನು ಕ್ರಮಕ್ಕೆ ಮುಂದಾಗಲಿಲ್ಲ ಎನ್ನುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ’ ಎಂದು ಹೇಳಿದರು.

‘ಪ್ರಕರಣದಲ್ಲಿ ಮಹಿಳಾ ಹಾಗೂ ಪ್ರಗತಿಪರ ಸಂಘಟನೆಗಳವರು ಧ್ವನಿ ಎತ್ತುತ್ತಿಲ್ಲವೇಕೆ? ಶ್ರೀಮಂತ ಅಥವಾ ಮೇಲ್ವರ್ಗದವರ ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ ಸುಮ್ಮನಿರುತ್ತಿದ್ದರೇ? ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿರಲಿಲ್ಲವೇ? ದಲಿತರು, ಹಿಂದುಳಿದ ವರ್ಗಗಳ ಬಾಲಕಿಯರ ಮೇಲಿನ ಶೋಷಣೆ ಸಹನೀಯವೇ?’ ಎಂದು ಕೇಳಿದರು.

‘ಆರೋಪಿಯನ್ನು ಬಂಧಿಸದೆ ಪೊಲೀಸ್ ಇಲಾಖೆಯು ವಿಫಲವಾಗಿದೆ. ಈ ಪ್ರಕರಣವನ್ನು ಸರ್ಕಾರವು ಸಂವೇದನೆಯಿಂದ ನೋಡಬೇಕಿತ್ತು. ಆದರೆ, ಈ ಕೆಲಸ ನಡೆದಿಲ್ಲ. ಇದೆಲ್ಲವನ್ನೂ ಸಹಿಸಲಾಗದು. ಆರೋಪಿಯನ್ನು ಬೆಂಬಲಿಸುವ ಸ್ವಾಮೀಜಿಗಳನ್ನು ನಾಟಕೀಯ ಸ್ವಾಮೀಜಿಗಳು ಎಂದು ಕರೆಯಬೇಕಾಗುತ್ತದೆ’ ಕಿಡಿಕಾರಿದರು.

‘ಮಠಗಳಲ್ಲಿ ಬಾಲಕಿಯರ ವಸತಿ ಶಿಕ್ಷಣಕ್ಕೆ ಸರ್ಕಾರವು ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಮುಖಂಡ ತುಂಬಲ ರಾಮಣ್ಣ ಮಾತನಾಡಿ, ‘ಶ್ರೀಗಳ ವಿರುದ್ಧದ ಪ್ರಕರಣದಲ್ಲಿ ಸರ್ಕಾರದ ನಡೆಯು ಅನುಮಾನಾಸ್ಪದವಾಗಿದೆ. ಆದ್ದರಿಂದ ನ್ಯಾಯಾಧೀಶೆ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಒಕ್ಕೂಟದ ದೇವಪ್ಪ ನಾಯಕ, ಸೋಮಯ್ಯ ಮಲೆಯೂರು, ನರಸಿಂಹಮೂರ್ತಿ, ಪ್ರಭಾಕರ ಹುಣಸೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT