ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣುವರ್ಧನ್‌ ನೆನಪಿನೋತ್ಸವದಲ್ಲಿ ಸಂಗೀತ ಸುಧೆ

ಕೊರೊನಾ ವಾರಿಯರ್ಸ್‌ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
Last Updated 3 ಜನವರಿ 2021, 16:56 IST
ಅಕ್ಷರ ಗಾತ್ರ

ಮೈಸೂರು: ವಿಷ್ಣುವರ್ಧನ್‌ ನೆನಪಿನೋತ್ಸವದಲ್ಲಿ ಸಂಗೀತ ಲೋಕವೇ ಧರೆಗಿಳಿದಿತ್ತು. ಗಾಯಕರ ಕಂಠಸಿರಿಯಲ್ಲಿ ಹಳೆಯ ಕನ್ನಡ ಚಲನಚಿತ್ರ ಗೀತೆಗಳ ಗಾಯನ ತಾಸುಗಟ್ಟಲೇ ನಡೆಯಿತು.

ಭಕ್ತಿ ಗೀತೆ ಹೊರತುಪಡಿಸಿದರೆ, ಉಳಿದ ಗೀತೆಗಳು ವಿಷ್ಣುವರ್ಧನ್‌ ಅಭಿನಯಿಸಿರುವ ಸಿನಿಮಾದ ಚಲನಚಿತ್ರ ಗೀತೆಗಳೇ ಆಗಿದ್ದು ವಿಶೇಷವಾಗಿತ್ತು.

ಇಲ್ಲಿನ ರಾಮಕೃಷ್ಣ ನಗರದಲ್ಲಿನ ನೃಪತುಂಗ ಶಾಲೆ ಆವರಣದಲ್ಲಿರುವ ರಮಾಗೋವಿಂದ ರಂಗ ಮಂದಿರದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ನೆನಪಿನೋತ್ಸವ ಸಮಿತಿ, ಕನ್ನಡ ಜನ ಜಾಗೃತಿ ವೇದಿಕೆ, ಕರ್ನಾಟಕ ಕಾವಲು ಪಡೆ ವತಿಯಿಂದ ಭಾನುವಾರ ರಾತ್ರಿ ನಡೆದ ‘ಸಂಗೀತ ಸಂಜೆ’ ಮತ್ತು ಕೊರೊನಾ ವಾರಿಯರ್ಸ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಗಾಯಕರಾದ ಅರುಣಾಚಲಮ್, ಟಿವಿಎಸ್ ಕುಮಾರ್, ಮಮತಾ, ಎಂ.ವಿ.ಗೋವಿಂದರಾಜು ತಮ್ಮ ಸುಮಧುರ ಕಂಠದಿಂದ ಹೊರಹೊಮ್ಮಿಸಿದ ಒಂದೊಂದು ಹಾಡು ಸಹ ಸಂಗೀತ ಪ್ರಿಯರ ಮನಸ್ಸಿಗೆ ರಸದೌತಣ ಬಡಿಸಿದವು.

ಗಾಯಕ ಎಂ.ವಿ.ಗೋವಿಂದರಾಜು ಮೊದಲಿಗೆ ಗಣೇಶನ ಕುರಿತು ಹಾಡಿ ಭಕ್ತಿಯ ಪರಾಕಾಷ್ಠೆ ಮೆರೆದರು. ನಂತರ ನಾಗರಹಾವು ಚಿತ್ರದ ‘ಬಾರೆ ಬಾರೆ ಚೆಂದದ ಚೆಲುವಿನ ತಾರೆ’, ನಾನಿರುವುದೇ ನಿನಗಾಗಿ ಚಿತ್ರದ ‘ಕುಂಕುಮವಿರುವುದೇ ಹಣೆಗಾಗಿ’ ಹಾಡನ್ನು ಹಾಡಿದರೆ, ಗಾಯಕ ಟಿವಿಎಸ್ ಕುಮಾರ್ ಮಹಾಕ್ಷತ್ರಿಯ ಚಿತ್ರದ ‘ಈ ಭೂಮಿ ಬಣ್ಣದ ಬುಗುರಿ ಆ ಶಿವನೆ ಚಾಟಿ ಕಣೋ, ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ’ ಹಾಡನ್ನು ಮನಸ್ಸಿಗೆ ಮುಟ್ಟುವಂತೆ ಹಾಡಿದರು.

ಗಾಯಕ ಎಂ.ವಿ.ಗೋವಿಂದರಾಜು, ಗಾಯಕಿ ಮಮತಾ ಜೊತೆಗೂಡಿ ದೇವರಗುಡಿ ಚಿತ್ರದ ‘ಕಣ್ಣು ಕಣ್ಣು ಒಂದಾಯಿತು’, ಹೃದಯಗೀತೆ ಚಿತ್ರದ ‘ಹೃದಯ ಗೀತೆ ಹಾಡುತ್ತಿರೆ ಭೂಮಿ ಸ್ವರ್ಗವಾಗಿದೆ’... ಹಾಡಿದರೆ, ಅರುಣಾಚಲಮ್ ಕಳ್ಳಕುಳ್ಳ ಚಿತ್ರದ ‘ನಾ ಹಾಡಲು... ನೀವು ಹಾಡಬೇಕು’ ಗೀತೆಯನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಸಂಗೀತ ಸುಧೆಯ ನಡುವೆಯೇ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಅಮರ್‌ನಾಥ್, ಎಚ್.ಡಿ.ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಮತ್ತಿತರರನ್ನು ಸನ್ಮಾನಿಸಲಾಯಿತು.

ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಇತಿಹಾಸ ತಜ್ಞ ಪ್ರೊ.ಎಂ.ಎನ್.ನಂಜರಾಜೇ ಅರಸ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಸಾಹಸಸಿಂಹ ಡಾ.ವಿಷ್ಣುವರ್ಧನ್ ನೆನಪಿನೋತ್ಸವ ಸಮಿತಿಯ ಎಂ.ಮೋಹನ್‍ಕುಮಾರ್‌ಗೌಡ, ಗೌರವ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ, ಕಾರ್ಯಾಧ್ಯಕ್ಷ ಗ.ಶಾ.ಭೋಗನಂದೀಶ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ನಟ ಶಂಕರ್ ಅಶ್ವಥ್‌ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT