ಗುರುವಾರ , ಅಕ್ಟೋಬರ್ 17, 2019
21 °C
ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಅರಮನೆ ಮುಂಭಾಗ ಸಂಗೀತ ಕಲರವ

ಜಯಚಾಮರಾಜರಿಗೆ ಸಂಗೀತ–ನೃತ್ಯ ಗೌರವ

Published:
Updated:
Prajavani

ಮೈಸೂರು: ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರಿಗೆ, ನಾಡಹಬ್ಬ ದಸರಾ ಮಹೋತ್ಸವ ಸಮಿತಿ ಭಾನುವಾರ ವಿಶೇಷ ನಮನ ಅರ್ಪಿಸಿತು.

ಜಯಚಾಮರಾಜರ ಜನ್ಮಶತಮಾನೋತ್ಸವದ ಅಂಗವಾಗಿ ಅರಮನೆ ಮುಂಭಾಗ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ, ನಿರಂತರವಾಗಿ ಸಂಗೀತ–ನೃತ್ಯ ಕಾರ್ಯಕ್ರಮ ನಡೆಸಿ ಗೌರವ ಸಲ್ಲಿಸಿತು.

ಆರಂಭದಿಂದ ಅಂತ್ಯದವರೆಗೂ ಜಯಚಾಮರಾಜರ ಕುರಿತಂತೆಯೇ ಸಂಗೀತ–ನೃತ್ಯ ನಡೆದವು. ಬಹುತೇಕವು ಒಡೆಯರಿಂದ ರಚಿಸಲ್ಪಟ್ಟ ಕೃತಿಯಿಂದ ಆಯ್ಕೆಯಾದವೇ ಆಗಿದ್ದವು. ನೂರಾರು ಕಲಾವಿದರು ಭಾಗಿಯಾಗಿ, ಮಹಾರಾಜರಿಗೆ ತಮ್ಮ ಕಲೆಯ ಮೂಲಕವೇ ಗೌರವ ನಮನ ಸಲ್ಲಿಸಿದರು.

ಮಹಾರಾಜರ ಅಭಿಮಾನಿ ಬಳಗ, ಸಂಗೀತಾಸಕ್ತರು, ಕಲಾರಾಧಕರು ಜಯಚಾಮರಾಜರ ಜನ್ಮಶತಮಾನೋತ್ಸವದ ಅಂಗವಾಗಿಯೇ ಆಯೋಜಿಸಿದ್ದ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಕಣ್ತುಂಬಿಕೊಂಡು, ಸಂಗೀತ ಆಲಿಸಿ ಕರ್ಣಾನಂದಪಟ್ಟರು. ಅರಮನೆ, ದಸರಾ ವೀಕ್ಷಣೆಗಾಗಿ ಬಂದಿರುವ ವಿದೇಶಿಗರೂ ಸಮಾರಂಭಕ್ಕೆ ಹಾಜರಾಗಿ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸಂಗೀತ–ನೃತ್ಯವನ್ನು ಸೆರೆ ಹಿಡಿದಿದ್ದು ವಿಶೇಷವಾಗಿತ್ತು.

ಖ್ಯಾತನಾಮರ ಕಾರ್ಯಕ್ರಮ: ಮೈಸೂರಿಗರೇ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮ ನೀಡಿದರು. ಬಹುತೇಕರು ಖ್ಯಾತನಾಮರೂ ಆಗಿದ್ದರು. ಮಹಾರಾಜರ ಹೆಸರಿನಲ್ಲಿ ಅರಮನೆ ಮುಂಭಾಗ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದವರೇ ಹಲವರಿದ್ದರು.

ಶಾರದಾ ಕಲಾ ಕೇಂದ್ರದ ರೇಖಾ ವೆಂಕಟೇಶ್‌ ತಂಡದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಕೊಡಿಯಾಲ ಕೃಷ್ಣಮೂರ್ತಿ ತಂಡ ನಾಗಸ್ವರ ವಾದನ ನುಡಿಸಿದರೆ, ಭೀಮಾಶಂಕರ್‌ ಬಿದನೂರು ತಂಡ ತಬಲ ತರಂಗ ಸೃಷ್ಟಿಸಿತು. ಹರೀಶ್‌ ಪಾಂಡವ ಸ್ಯಾಕ್ಸೊಫೋನ್ ನುಡಿಸಿದರೆ, ಡಾ.ಕೃಪಾ ಫಡ್ಕೆ ತಂಡ ಭರತನಾಟ್ಯ ಪ್ರದರ್ಶಿಸಿತು.

ತುಮಕೂರಿನ ಯಶಸ್ವಿ ತಂಡ ವಾದ್ಯ ಗೋಷ್ಠಿ ನಡೆಸಿದರೆ, ಶೀಲಾ ಶ್ರೀಧರ್ ನೃತ್ಯ ರೂಪಕ ಪ್ರದರ್ಶಿಸಿದರು. ಕೋವಿಲಡಿ ಆರ್.ಕಲಾ ತಂಡ ವೃಂದ ಗಾಯನ ಹಾಡಿದರೆ, ಡಾ.ತುಳಸಿ ರಾಮಚಂದ್ರ ತಂಡ ಭರತನಾಟ್ಯ ಪ್ರದರ್ಶಿಸಿತು. ಎಚ್‌.ಕೆ.ನರಸಿಂಹಮೂರ್ತಿ ತಂಡ ವಯೊಲಿನ್‌ ನುಡಿಸಿದರೆ, ಸ್ಮಿತಾ ಕಿರಣ್ ತಂಡ ಕೊಳಲು ನುಡಿಸಿತು.

ಆರ್‌.ಕೆ.ಪದ್ಮನಾಭ ತಂಡ ವೀಣಾ ವಾದನ ನಡೆಸಿದರೆ, ರಮ್ಯಾ ನೃತ್ಯ ರೂಪಕ ಪ್ರದರ್ಶಿಸಿದರು. ತುಮಕೂರು ಬಿ.ರವಿಶಂಕರ್ ತಾಳವಾದ್ಯ ಪ್ರಸ್ತುತಪಡಿಸಿದರು. ಡಿ.ವಿ.ಪ್ರಹ್ಲಾದರಾವ್ ನಾದ–ವೇದ ನಡೆಸಿಕೊಟ್ಟರೆ, ಬಳ್ಳಾರಿ ರಾಘವೇಂದ್ರ ವೃಂದಗಾನ ಪ್ರಸ್ತುತಪಡಿಸಿದರು.

Post Comments (+)