ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿನ ಸಾನ್ನಿಧ್ಯದಲ್ಲಿ ವಿದೇಶಿಗರ ಸಂಗೀತ ಕಲಿಕೆ

Last Updated 1 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ವಿಶಿಷ್ಟ ಸ್ಥಾನವಿದೆ. ಗುರುವಿನ ಬಳಿ ಹೋಗಿ ಅವರ ಪದತಲದಲ್ಲಿ ಕುಳಿತು ವಿದ್ಯಾರ್ಜನೆ ಮಾಡುವ ಈ ಪರಂಪರೆಗೆ ವಿದೇಶಿಗರೂ ಮಾರು ಹೋಗುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಬಗ್ಗೆ ಅಪರಿಮಿತ ಒಲವು ಹೊಂದಿರುವ, ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸ್ಟೀಫನ್ ರಷ್ ಅವರು ಕಳೆದ 11 ವರ್ಷಗಳಿಂದ ಮೈಸೂರಿಗೆ ಬಂದು ಗುರುಗಳ ಸಮ್ಮುಖದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ.

ಈ ವರ್ಷವೂ ಮೈಸೂರಿಗೆ ಬಂದಿದ್ದ ಅವರು, ತಮ್ಮೊಟ್ಟಿಗೆ ಮೂವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದರು. ಕೆಮರಾನ್ ವಿಲ್ಸನ್, ಜೋಆನಾ ಋಷಿ, ಜಂಗ್ ಯೂನ್ ವೀ ಎಂಬ ಸಂಗೀತಾಸಕ್ತ ವಿದ್ಯಾರ್ಥಿಗಳು, ಗುರು-ಶಿಷ್ಯ ಪರಂಪರೆಯ ನೈಜ ಅನುಭವವನ್ನು ತಮ್ಮದಾಗಿಸಿಕೊಂಡರು.

ಎರಡು ತಿಂಗಳ ರಜಾ ಅವಧಿಯಲ್ಲಿ ಭಾರತಕ್ಕೆ ಬಂದು ಸಂಗೀತ ಕಲಿಯುವುದು ಸ್ಟೀಫನ್ ರಷ್ ಅವರ ಅಭ್ಯಾಸ. ಈ ಸಂದರ್ಭದಲ್ಲಿ ಭಾರತೀಯ ಸಂಗೀತದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಪತ್ತೆ ಮಾಡುತ್ತಾರೆ. ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಆತಿಥ್ಯ ನೀಡುತ್ತಾರೆ. ಸ್ವತಃ ತಾವೇ ಅಡುಗೆ ಮಾಡಿ ಬಡಿಸುತ್ತಾರೆ. ಈ ವೇಳೆ, ವಿದ್ಯಾರ್ಥಿಗಳಿಗೆ ಸಂಗೀತದ ಆಸಕ್ತಿ ಇದೆಯೋ ಇಲ್ಲವೋ ಎಂಬುದನ್ನು ಅರಿಯುತ್ತಾರೆ. ಸಂಗೀತದಲ್ಲಿ ಗಾಯನ, ಮೃದಂಗ, ವೀಣೆ ನುಡಿಸುವುದು... ಹೀಗೆ ಯಾವುದರಲ್ಲಿ ಆಸಕ್ತಿ ಇದೆ ಎಂಬುದನ್ನು ಗಮನಿಸಿ ಅವರಿಗೆ ಅಗತ್ಯ ಮಾರ್ಗದರ್ಶನ ನೀಡಿ ಭಾರತಕ್ಕೆ ಕರೆದುಕೊಂಡು ಬರುತ್ತಾರೆ.

ಸ್ಟೀಫನ್ ರಷ್ ಹಾಗೂ ಅವರೊಟ್ಟಿಗೆ ಬರುವ ವಿದ್ಯಾರ್ಥಿಗಳಿಗೆ ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥೆಯು ಊಟ- ವಸತಿ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುತ್ತದೆ. ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಗಾಯನ, ವೀಣೆ, ಮೃದಂಗ ಹೀಗೆ... ಸಂಗೀತದ ಆಯಾ ಪ್ರಕಾರಗಳಲ್ಲಿ ಪರಿಣತಿ ಹೊಂದಿರುವ ಗುರುಗಳ ಮನೆಗೆ ಹೋಗಿ ಸಂಗೀತ ಕಲಿಯುತ್ತಾರೆ. ಕಲಿಕೆ ಪೂರ್ಣಗೊಳಿಸಿದ ಬಳಿಕ ಸಂಸ್ಥೆಯ ಸಭಾಂಗಣದಲ್ಲಿ ಸಂಗೀತ ಕಛೇರಿ ನೀಡಿ ತಮ್ಮ ತಾಯ್ನಾಡಿಗೆ ಮರಳುತ್ತಾರೆ. ಈ ಬಾರಿ ಬಂದಿರುವ ವಿದ್ಯಾರ್ಥಿಗಳೆಲ್ಲರೂ ಗಾಯನದಲ್ಲಿ ಆಸಕ್ತಿ ಹೊಂದಿದ್ದು, ವಿದುಷಿ ಜಿ.ಎಸ್. ರಾಜಲಕ್ಷ್ಮಿ ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದಾರೆ.

ಪ್ರತಿದಿನ ಬೆಳಿಗ್ಗೆ 10ರಿಂದ 11.30ರವರೆಗೆ ಕಿರಿಯ ವಿದ್ಯಾರ್ಥಿಗಳು, 11.30ರಿಂದ 1ರವರೆಗೆ ಸ್ಟೀಫನ್ ರಷ್ ಅವರು ಸಂಗೀತ ಅಭ್ಯಾಸ ಮಾಡಿದ್ದಾರೆ.

ಸ್ಟೀಫನ್ ರಷ್ ಅವರಿಗೆ ಭಾರತೀಯ ಸಂಗೀತದ ಬಗೆಗಿನ ಒಲವು 35 ವರ್ಷಗಳ ಹಿಂದಿನದ್ದು. 1984ರಲ್ಲಿ ವಿದ್ಯಾರ್ಥಿಯಾಗಿದ್ದಾಗ ಭಾರತದ ಸಂಗೀತ ವಿದ್ವಾಂಸರು ನೀಡಿದ್ದ ಸಂಗೀತ ಕಛೇರಿಯಲ್ಲಿ ವೀಣಾ, ಮೃದಂಗ ಬಾರಿಸುವುದನ್ನು ನೋಡಿ, ಕೇಳಿ ಕಣ್ಣೀರಿಟ್ಟಿದ್ದರಂತೆ. ಅಲ್ಲದೆ, ಪಂಡಿತ್‌ ರವಿಶಂಕರ್‌ ಅವರ ಸಂಗೀತ ಕಛೇರಿಗಳನ್ನೂ ಆಸ್ವಾದಿಸಿದ್ದರಂತೆ.

‘1992ರಲ್ಲಿ ಚೆನ್ನೈಗೆ ಬಂದಿದ್ದಾಗ ಶಾರದಾ ಕುಮಾರ್‌ ಅವರ ಪರಿಚಯವಾಯಿತು. ಅವರ ಮೂಲಕ ಸಂಗೀತ ಕಲಿಯಲು ಆರಂಭಿಸಿದೆ. 2008ರಿಂದ ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥೆಯ ಒಡನಾಟ ಬೆಳೆಯಿತು’ ಎನ್ನುತ್ತಾರೆ ಸ್ಟೀಫನ್ ರಷ್.

‘ಭಾರತೀಯ ಸಂಗೀತದಲ್ಲಿ ಭಾವ ಮುಖ್ಯವಾಗಿರುತ್ತದೆ. ಆದರೆ, ಪಾಶ್ಚಾತ್ಯ ಸಂಗೀತದಲ್ಲಿ ಭಾವ ಎನ್ನುವುದು ದೂರ ಸರಿದಿದೆ. ಹೀಗಾಗಿ, ನನಗೆ ಭಾರತೀಯ ಸಂಗೀತ ಇಷ್ಟ. ಭಕ್ತಿ, ಭಾವ, ರಸವನ್ನು ಇಲ್ಲಿ ಕಾಣುತ್ತೇವೆ. ವಿದೇಶದಲ್ಲಿ ಇದಕ್ಕೆ ಒತ್ತು ಕಡಿಮೆ’ ಎಂದು ವಿಶ್ಲೇಷಿಸುತ್ತಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಪುರಂದರ ದಾಸರ ಕುರಿತೂ ತಿಳಿದುಕೊಂಡಿದ್ದಾರೆ.

‘ಪುರಂದರ ದಾಸರು ಸಾಧಾರಣ ಕೃತಿಗಳಿಂದ ಕ್ಲಿಷ್ಟಕರ ಕೃತಿಗಳನ್ನು ರಚನೆ ಮಾಡಿದ್ದಾರೆ. ಅವರ ಅನೇಕ ಕೀರ್ತನೆಗಳನ್ನು ಹಾಡಿದ್ದೇನೆ. ಸಾಹಿತ್ಯದ ಅರ್ಥವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ. ಅವರ ಕೀರ್ತನೆಗಳು ಭಕ್ತಿ ಮಾರ್ಗದ ಮೂಲಕ ಸಮಾಜದ ಕಣ್ಣು ತೆರೆಸುತ್ತವೆ’ ಎನ್ನುತ್ತಾರೆ.

ಸಾಹಿತ್ಯವನ್ನು ಅರ್ಥ ತಿಳಿದುಕೊಂಡು ಹಾಡುವ ಸ್ಟೀಫನ್, ಶೃತಿ, ರಾಗ, ತಾಳ, ಆಲಾಪನೆ, ಸ್ವರ ಕಲ್ಪನೆ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ. ವರಲಕ್ಷ್ಮಿ ವ್ರತದ ದಿನ ಭಾಗ್ಯದ ಲಕ್ಷ್ಮಿ ಬಾರಮ್ಮ... ಗೀತೆಯನ್ನು ಹಾಡಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತಾರೆ.

‘ಬಹಳಷ್ಟು ಮಂದಿ ಹಣಕ್ಕಾಗಿ ಬೇರೆ ಬೇರೆ ಪ್ರಯೋಗಗಳನ್ನು ಮಾಡುತ್ತಾರೆ. ನಾನು ಆತ್ಮತೃಪ್ತಿಗಾಗಿ ಈ ಸಂಗೀತ ಕಲಿಯುತ್ತಿದ್ದೇನೆ’ ಎಂದು ಸ್ಟೀಫನ್ ಹೇಳುತ್ತಾರೆ.

ಕೆಮರಾನ್ ವಿಲ್ಸನ್ ಇಲ್ಲಿಗೆ ಬರುವ 3 ತಿಂಗಳ ಹಿಂದೆಯೇ ಭಗವದ್ಗೀತೆ ಓದುತ್ತಿದ್ದರಂತೆ. ಭಾರತಕ್ಕೆ ಬರಲು ಭಗವದ್ಗೀತೆಯ ಓದಿನ ಪ್ರೇರಣೆಯೇ ಕಾರಣವಂತೆ.

‘ಭಾರತೀಯ ಸಂಗೀತ ಬಗ್ಗೆ ಒಲವು ಇದ್ದರೂ ಇಲ್ಲಿಗೆ ಬಂದ ಬಳಿಕ, ಸಂಗೀತದ ಕುರಿತ ದೃಷ್ಟಿಕೋನ ಬದಲಾಗುತ್ತಿದೆ. ಮುಂದೆ, ಪಾಶ್ಚಾತ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಜೋಡಣೆ (ಫ್ಯೂಷನ್) ಮಾಡುವುದಕ್ಕೆ ಅನುಕೂಲವಾಗಲಿದೆ. ಗುರುಗಳ ಮನೆಯಲ್ಲಿ ಕಲಿಯುವ ಅನುಭವ ಎಲ್ಲೂ ಸಿಗುವುದಿಲ್ಲ’ ಎಂದು ಪುಳಕಿತಗೊಳ್ಳುತ್ತಾರೆ.

ಜೋಆನಾ ಋಷಿ, ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆಯು ಅದ್ಭುತ ಅನುಭವ ನೀಡಿದೆ. ಅದರಲ್ಲೂ ಗುರುವಿನ ಮನೆಗೇ ಹೋಗಿ ಕಲಿತದ್ದು ನನಗೆ ಭಿನ್ನ ಅನುಭವ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT