ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿಮಾನ ನಿಲ್ದಾಣದಲ್ಲೂ ಬಾಂಬ್‌ ನಿರೋಧಕ ಜಾಕೆಟ್‌

Last Updated 23 ಜನವರಿ 2020, 14:54 IST
ಅಕ್ಷರ ಗಾತ್ರ

ಮೈಸೂರು: ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣಕ್ಕೂ ಬಿಗಿ ಭದ್ರತೆ ಒದಗಿಸಲಾಗಿದ್ದು, ಬಾಂಬ್‌ ನಿಷ್ಕ್ರಿಯಗೊಳಿಸುವ ಸಿಬ್ಬಂದಿ ತೊಡುವ ಬಾಂಬ್‌ ನಿರೋಧಕ ಜಾಕೆಟ್‌ವೊಂದನ್ನು (ಬಾಂಬ್‌ ಸೂಟ್‌) ವಾರದ ಹಿಂದೆಯೇ ತರಿಸಲಾಗಿದೆ.

₹ 25 ಲಕ್ಷ ಮೌಲ್ಯದ ಅತ್ಯಾಧುನಿಕ ಜಾಕೆಟ್‌ ಇದಾಗಿದೆ. ಬಾಂಬ್‌ ಸ್ಫೋಟ ತಾಳಿಕೊಳ್ಳುವ ಸಾಮರ್ಥ್ಯ ಇದಕ್ಕಿದ್ದು, ತರಬೇತಿ ಪಡೆದ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಗೆ ಈ ಜಾಕೆಟ್‌ ತೊಡಿಸಿ ಕಾರ್ಯಾಚರಣೆಗೆ ಇಳಿಸಲಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಬಳಸಿಕೊಳ್ಳಲು ಇದನ್ನು ಒದಗಿಸಲಾಗಿದೆ.

ಐದು ಕೆ.ಜಿ.ತೂಕವಿರುವ ಹೆಲ್ಮೆಟ್‌ನಲ್ಲಿ ದೂರದರ್ಶಕ ಉಪಕರಣ ಅಳವಡಿಸಲಾಗಿದೆ. ರಿಮೋಟ್‌ ಕಂಟ್ರೋಲ್‌ ಮೂಲಕ, ನಿಲ್ದಾಣದ ಕೊಠಡಿಯಲ್ಲಿ ಕುಳಿತು ಜಾಕೆಟ್‌ ಧರಿಸಿದ ವ್ಯಕ್ತಿಗೆ ಮಾರ್ಗದರ್ಶನ ನೀಡಬಹುದಾದ ಅಥವಾ ಸಲಹೆ ಪಡೆಯಬಹುದಾದ ವ್ಯವಸ್ಥೆಯೂ ಇದರಲ್ಲಿದೆ.

‘ಬಾಂಬ್‌ ಪತ್ತೆಯಾದರೆ ಈ ಜಾಕೆಟ್‌ ಧರಿಸಿ 10 ಅಡಿ ದೂರದಿಂದಲೇ ನಿಷ್ಕ್ರಿಯಗೊಳಿಸಬಹುದು. ಸುರಕ್ಷಿತ ಸ್ಥಳಕ್ಕೆ ಸಾಗಿಸಬಹುದು. ಬಾಂಬ್‌ ಸ್ಫೋಟಿಸಿದರೂ ಧರಿಸಿದ ವ್ಯಕ್ತಿಗೆ ಯಾವುದೇ ಅಪಾಯ ಇಲ್ಲ’ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಆರ್‌.ಮಂಜುನಾಥ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೆಎಸ್‌ಐಎಸ್‌ಎಫ್‌ ನಿಯೋಜನೆ:

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು (ಕೆಎಸ್‌ಐಎಸ್‌ಎಫ್‌) ಮೈಸೂರಿನ ವಿಮಾನ ನಿಲ್ದಾಣಕ್ಕೆ ನಿಯೋಜಿಸಲಾಗುತ್ತಿದೆ. ನಿಲ್ದಾಣಕ್ಕೆ ಸದಾ ಭದ್ರತೆ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಮೈಸೂರಿನ ಈ ನಿಲ್ದಾಣದಿಂದ ನಿತ್ಯ ಎಂಟು ವಿಮಾನಗಳು, 16 ಟ್ರಿಪ್‌ಗಳಲ್ಲಿ ಹಾರಾಟ ನಡೆಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ನಗರ ಪೊಲೀಸ್‌ ಕಮಿಷನರ್‌ ಕೆ.ಟಿ.ಬಾಲಕೃಷ್ಣ ಕೂಡ ನಿಲ್ದಾಣದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೇ, ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲೂ ನಿಗಾ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT