ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಕ್ಕಳಿಗೆ ನಾಡಿನ ಹಕ್ಕಿ ಪರಿಚಯಿಸುವ ‘ಮ್ಯಾನ್‌’

Last Updated 23 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಮೈಸೂರು: ಮೂರು ದಶಕಗಳಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಕನ್ನಡ ನಾಡಿನ ಹಕ್ಕಿಗಳ ವೀಕ್ಷಣೆ ಶಿಬಿರಗಳನ್ನು ಏರ್ಪಡಿಸುತ್ತಿರುವ ಮೈಸೂರು ಅಮೆಚೂರ್ ನ್ಯಾಚುರಲಿಸ್ಟ್ಸ್ಸಂಸ್ಥೆಯು (man) ಮಕ್ಕಳ ಸ್ನೇಹಿ ಪರಿಸರದ ಭಾಷೆಯನ್ನೇ ಜೀವಾಳ ಮಾಡಿಕೊಂಡಿದೆ.

‘ಮ್ಯಾನ್‌’ ಬೆಳಕಿನಲ್ಲಿ ಅರಳಿದ ನೂರಾರು ಚಿಣ್ಣರು, ಈಗ ಪರಿಸರ ಸೇನಾನಿಗಳು. ವಿಜ್ಞಾನ, ಪರಿಸರ ವಿಜ್ಞಾನ, ಅರಣ್ಯಶಾಸ್ತ್ರದಂಥ ಜ್ಞಾನ ಶಾಖೆಗಳ ಗಂಭೀರ ಅಧ್ಯಯನಕಾರರು. ಕನ್ನಡದ ಮೂಲಕವೇ ಅವರ ಗ್ರಹಿಕೆ ವಿಸ್ತರಣೆಗೊಂಡಿದೆ.

‌ಶಾಲೆ ಮಕ್ಕಳು, ವಿಜ್ಞಾನ ಶಿಕ್ಷಕರಿಗೆ ಪಠ್ಯಕ್ಕೆ ಪೂರಕವಾಗಿ ಸ್ಥಳೀಯ ಪರಿಸರವನ್ನು ಪರಿಚಯಿಸಲು 2 ಸಾವಿರಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿರುವ ಸಂಸ್ಥೆ ಸಾಕ್ಷ್ಯಚಿತ್ರ ಪ್ರದರ್ಶನ, ಸಂವಾದ, ವಿಚಾರ ಸಂಕಿರಣ, ಅಧ್ಯಯನ ಚಾರಣದಲ್ಲಿ ನಿರಂತರ ತೊಡಗಿಸಿಕೊಂಡಿದೆ.

ಮ್ಯಾನ್‌ನ ಈ ಎಲ್ಲ ಕಾರ್ಯಕ್ರಮಗಳ ರೂವಾರಿ ಕೆ.ಮನು. ಕೊಕ್ಕರೆ ಬೆಳ್ಳೂರಿನಲ್ಲಿ ಅಳಿವಿನಂಚಿನ ಹೆಜ್ಜಾರ್ಲೆ ಪಕ್ಷಿ ಉಳಿವು ಕಾರ್ಯಕ್ರಮಕ್ಕಾಗಿ 2005ರಲ್ಲಿ ಅವರಿಗೆ ‘ಸ್ಯಾಂಕ್ಚುರಿ ಏಷ್ಯಾ’ ನಿಯತಕಾಲಿಕೆ ‘ಅರ್ಥ್‌ ಹೀರೋಸ್‌’ ಪುರಸ್ಕಾರ ನೀಡಿದೆ. ಇಂಗ್ಲೆಂಡ್‌ನ ಓರಿಯಂಟಲ್‌ ಬರ್ಡ್‌ ಕ್ಲಬ್‌– ಸ್ಕಾಲರ್‌ಶಿಪ್‌, ಕಿರ್ಲೋಸ್ಕರ್‌ ವಸುಂಧರಾ – ಪರಿಸರ ಮಿತ್ರ ಪ್ರಶಸ್ತಿ ನೀಡಿವೆ.

ವಿಶ್ವ ವನ್ಯಜೀವಿ ನಿಧಿಯಡಿ (ಡಬ್ಲುಡಬ್ಲುಎಫ್) ಮೈಸೂರಿನ ಶಿಕ್ಷಕರಿಗೆ ಸಂಸ್ಥೆಯು ತರಬೇತಿಯನ್ನು ನೀಡಿತ್ತು. ನಂತರ ಮಡಿಕೇರಿ, ಸುಳ್ಯ, ಮಂಗಳೂರಿನ ಅರ್ಬನ್‌ ರೀಸರ್ಚ್‌ ಸೆಂಟರ್‌, 10 ವರ್ಷಗಳ ಕಾಲ ಕೊಕ್ಕರೆ ಬೆಳ್ಳೂರಿನಲ್ಲಿ ಹೆಜ್ಜಾರ್ಲೆ ಉಳಿಸುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು ಅಪೂರ್ವ ದಾಖಲೆ. ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್‌ನ ಕಾರ್ಯಗಳಿಗೆ ‘ಮ್ಯಾನ್‌’ ಹೆಗಲು ನೀಡಿತ್ತು.

2013ರಿಂದ ಅನಿಶಾ ಸಂಸ್ಥೆಯೊಂದಿಗೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ಶಾಲಾ ಮಕ್ಕಳಿಗೆ ಕೈತೋಟ, ಬೀಜ ಸಂರಕ್ಷಣೆ, ಕೃಷಿ ಅರಿವು ಮೂಡಿಸುತ್ತಿರುವ ಸಂಸ್ಥೆಯು, ಕೈತೋಟ ಕೃಷಿಯ ಸ್ಪರ್ಧೆಗಳನ್ನು ನಡೆಸಿದೆ. ಹನೂರಿನ 16 ಶಾಲೆಗಳ ಮಕ್ಕಳು ಕೈ ತೋಟದಲ್ಲಿ 1.6 ಟನ್‌ ತರಕಾರಿ ಬೆಳೆದಿದ್ದಾರೆ!

ಕೋವಿಡ್‌ ಲಾಕ್‌ಡೌನ್‌ ಹಾಗೂ ನಂತರದಲ್ಲಿ ಪರಿಸರ ಸಂರಕ್ಷಣೆ ಕುರಿತ ಪ್ರಖ್ಯಾತ ಸಾಕ್ಷ್ಯಚಿತ್ರಗಳ ಕುರಿತ ಚರ್ಚೆ ಪ್ರತಿ ಶನಿವಾರ, ಭಾನುವಾರ ಸಂಜೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನಡೆಯುತ್ತಿರುವ ಸಂವಾದ ಯುವ ಮನಸ್ಸುಗಳನ್ನು ಸೆಳೆದಿದೆ.

‘ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಪರಿಸರಾಸಕ್ತಿ ರೂಢಿಸಿಕೊಂಡು ಪರಿಸರ ಉಳಿಸುವ ಕೆಲಸ ಮಾಡುವುದು ಕಡಿಮೆ. ಹೀಗಾಗಿಯೇ ಸರ್ಕಾರಿ ಶಾಲೆ ಮಕ್ಕಳು, ಶಿಕ್ಷಕರಿಗೆ ಪಕ್ಷಿ ವೀಕ್ಷಣೆ ಸೇರಿದಂತೆ ಶಿಬಿರಗಳನ್ನು ನಡೆಸಲಾಗಿದೆ. ದಶಕಗಳ ಹಿಂದೆ ರಾಜ್ಯದಲ್ಲಿ ಪಕ್ಷಿ ವೀಕ್ಷಕರು ಕಡಿಮೆ ಇದ್ದರು. ಈಗ ಅಂಥ ಸನ್ನಿವೇಶವಿಲ್ಲ’ ಎಂದು ಮನು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT