ಗುರುವಾರ , ನವೆಂಬರ್ 21, 2019
20 °C
ರಾಜ್ಯದ 600ಕ್ಕೂ ವಿದ್ಯಾರ್ಥಿಗಳಿಂದ ನಡೆದ 2 ದಿನಗಳ ಗಾಯನಕ್ಕೆ ತೆರೆ

ದೇಶಭಕ್ತಿ ಗೀತ ಗಾಯನದಲ್ಲಿ ತೇಲಿದ ಮಕ್ಕಳು

Published:
Updated:
Prajavani

ಮೈಸೂರು: ‘ಮಿಲೇ ಸುರ್ ಮೇರಾ ತುಮ್ಹಾರಾ... ತೋ...ಸೂರ್ ಬನೆ ಹಮಾ...ರಾ’ ಎಂಬ ಹಾಡು ಬೆಂಗಳೂರಿನ ವಿಭಾ ಎಂಬ ಬಾಲಕಿ ಹಾಡುತ್ತಿದ್ದಂತೆ ಸಭಾಂಗಣ ನಿಶ್ಯಬ್ದಗೊಂಡಿತು.‌ ‘ನಿಂಡೆ ಸ್ವರಗುಂ ನ್ಯಂಗಳುಡೆ ಸ್ವರಮುಮ್ ಒತ್ತುಚೆರ್ನು ನಮುಡೆಯ ಸ್ವರಮಾಯ್’ ಎಂಬ ಮಲೆಯಾಳಂ ಸೇರಿದಂತೆ ಭಾರತದ ವಿವಿಧ ಭಾಷೆಗಳ ಸಾಲುಗಳನ್ನು ವಿಭಾ ಉಚ್ಚರಿಸುತ್ತಿದ್ದ ಪರಿಗೆ ಸಭಿಕರು ವಿಸ್ಮಿತಗೊಂಡರು.

ಈ ಎಲ್ಲ ದೃಶ್ಯಗಳು ಇಲ್ಲಿನ ವಿದ್ಯವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ‘ಹಾಡು ಹೊನಲು’ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಕಂಡು ಬಂತು.

ಒಟ್ಟು 650ಕ್ಕೂ ಹೆಚ್ಚು ಮಕ್ಕಳು ರಾಜ್ಯದ ಎಲ್ಲ ಜಿಲ್ಲೆಗಳಿಂದ ಇಲ್ಲಿಗೆ ಬಂದು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಒಟ್ಟು 20 ಸಾವಿರ ಮಂದಿ ವಿದ್ಯಾರ್ಥಿಗಳು ತಾಲ್ಲೂಕುಮಟ್ಟದಿಂದ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಬ್ಸ್, ಬುಲಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಹಂತದ ಮಕ್ಕಳಿಗೆ ಈ ಸ್ಪರ್ಧೆ ನಡೆಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಕ್ಷಯ್ ಮಾತನಾಡಿ, ‘ಈ ಸ್ಪರ್ಧೆಯು ನನಗೆ ಹೊಸತನ್ನು ಕಲಿಸಿತು. ಇಲ್ಲಿ ನಾನು ನನ್ನ ಕೆಲಸವನ್ನು ನಾನೇ ಮಾಡಿಕೊಂಡೆ. ಈ ಖುಷಿ ನನ್ನಲ್ಲಿದೆ’ ಎಂದು ಹೇಳಿದ.

‌ಆಫ್ರಿನ್ ಮಾತನಾಡಿ, ‘ಭವಿಷ್ಯಕ್ಕೆ ಇದು ಅನುಕೂಲವಾಗುತ್ತದೆ. ನನಗಿದ್ದ ಭಯ ಈಗ ಹೋಗಿದೆ. ಸ್ಪರ್ಧೆಯಿಂದ ತುಂಬಾ ಕಲಿತಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದಳು.

ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಇಲ್ಲಿ ಒಂದು ಮಿನಿ ಕರ್ನಾಟಕವೇ ಇದೆ ಎಂದು ಅನ್ನಿಸುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳನ್ನು ಪ್ರತಿನಿಧಿಸುವ ಮಕ್ಕಳು ಇಲ್ಲಿದ್ದಾರೆ. ವಿವಿಧತೆಯಲ್ಲಿ ಏಕತೆ ಎಂಬ ತತ್ವ ಸಾರ್ಥಕವಾಯಿತು’ ಎಂದು ತಿಳಿಸಿದರು.

ಇಲ್ಲಿ ಹಾಡಿದ ದೇಶಭಕ್ತಿಗೀತೆಗಳ ಗಾಯನವನ್ನು ಮರೆಯಬಾರದು. ಮನಸ್ಸಿನಲ್ಲಿ ದೇಶಭಕ್ತಿಯನ್ನು ತುಂಬಿಕೊಂಡು ಮುನ್ನಡೆಯಬೇಕು ಎಂದು ಅವರು ಕಿವಿಮಾತು ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಜಿಲ್ಲಾ ಘಟಕದ ಆಯುಕ್ತ ಶಿವರಾಮು, ಶಾಸಕ ಎಲ್.ನಾಗೇಂದ್ರ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಇದ್ದರು.

 

ಪ್ರತಿಕ್ರಿಯಿಸಿ (+)