ಬುಧವಾರ, ಜೂನ್ 29, 2022
24 °C

ಆದಿವಾಸಿಗಳನ್ನು ಆರ್‌ಎಸ್‌ಎಸ್ ಸರಸಂಘಚಾಲಕರನ್ನಾಗಿ ನೇಮಿಸಲಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಮೈಸೂರಿಗೆ ಏನು ಕೊಡುಗೆ ಕೊಟ್ಟಿದೆ ಪಟ್ಟಿ ಕೊಡಲಿ ಎಂದು‌ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ತಾಲ್ಲೂಕಿನ ವರಕೋಡು ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, 'ಮೈಸೂರು ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯ ಬ್ಯಾಂಕ್ ಮಾಡಿದ್ದವರು ಯಾರು? ಅವುಗಳನ್ನು ವಿಲೀನಗೊಳಿಸಿದವರು ಯಾರು? ಬಿಜೆಪಿ ಸರ್ಕಾರ ಅಲ್ಲವೇ? ಇದು ಕನ್ನಡಿಗರಿಗೆ ಮಾಡಿದ ದ್ರೊಹವಲ್ಲವೇ? ಬ್ಯಾಂಕುಗಳ ವಿಲೀನದಿಂದ ಬಹಳ ಜನ ಕೆಲಸ ಕಳೆದುಕೊಂಡರು. ಅದರಲ್ಲಿ ಬಹಳಷ್ಟು ಮಂದಿ ಕನ್ನಡಿಗರೇ. ಇದು ದ್ರೋಹವಲ್ಲವೇ? ಇದೇನಾ ಡಬಲ್ ಎಂಜಿನ್ ಸರ್ಕಾರಗಳ ಸಾಧನೆ? ಎಂದು ಆಕ್ರೋಶದಿಂದ ಕೇಳಿದರು.

'ಕೋವಿಡ್ ಸಂದರ್ಭದಲ್ಲಿ ಇದೇ ಮೋದಿ ಕರ್ನಾಟಕಕ್ಕೆ ಆಮ್ಲಜನಕ ಕೊಟ್ಟಿರಲಿಲ್ಲ. ಕೋರ್ಟ್ ಆದೇಶಿಸಿದ ನಂತರ ಕೊಟ್ಟರು. ಯೋಗ ಮಾಡಲೆಂದು ಇಲ್ಲಿಗೆ ಮೋದಿ‌ ಬಂದಿದ್ದರು. ಕರ್ನಾಟಕದಲ್ಲಿ ಪ್ರವಾಹ ಬಂದಿದ್ದಾಗ ಬರಲಿಲ್ಲವೇಕೆ? ಸಂತ್ರಸ್ತರ ನೋವುಗಳಿಗೆ ಸ್ಪಂದಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಕರ್ನಾಟಕಕ್ಕೆ ಬಂದಿದ್ದ‌ ಮೋದಿ ಸುಳ್ಳು ಹೇಳಿ ಹೋದರು. ರಾಜ್ಯಕ್ಕೆ ಏನು ಮಾಡಿದ್ದೀನಿ? ಮುಂದೇನು ಕೊಡ್ತಿವಿ ಅಂತ ಹೇಳಬೇಕಿತ್ತಲ್ಲವೇ. ಇದ್ಯಾವುದನ್ನೂ ಮಾಡದೆ ಹೋಗಿದ್ದಾರೆ. ಅವರೇನೂ ಕೊಡುಗೆ ಕೊಡುವುದಿಲ್ಲ ಎಂಬುದನ್ನು ಅರಿತೇ ರಾಜ್ಯ ಸರ್ಕಾರವು ಮನವಿ ಸಲ್ಲಿಸುವುದಕ್ಕೂ ಹೋಗಿಲ್ಲ ಎಂದು ಟೀಕಿಸಿದರು.

ರಾಷ್ಟ್ರಪತಿ‌ ಚುನಾವಣೆ ಎನ್‌ಡಿಎ ಅಭ್ಯರ್ಥಿ ದ್ರೌಪಡಿ ಮುರ್ಮು ಬಿಜೆಪಿ ಪಕ್ಷದ ಕಾರ್ಯಕರ್ತೆ. ಈಗಾಗಲೇ ಅವರನ್ನು ರಾಜ್ಯಪಾಲರನ್ನಾಗಿ ಮಾಡಲಾಗಿತ್ತು. ಈಗ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಮಾಡಲಾಗಿದೆ. ಇದರಲ್ಲಿ ಬಿಜೆಪಿಯವರ ಬದ್ಧತೆ ಏನಿಲ್ಲ;ವಿಶೇಷವೂ‌‌ ಇಲ್ಲ. ರಾಷ್ಟ್ರಪತಿಯನ್ನಾಗಿ ನಾಮಕಾವಾಸ್ತೆ ಕೂರಿಸುತ್ತಾರೆ. ಈಗ ರಾಮನಾಥ್‌ ಕೋವಿಂದ್ ಅವರನ್ನು ‌ಕೂರಿಸಿರಲಿಲ್ಲವೇ? ಅದರಲ್ಲಿ ವಿಶೇಷವೇನಿಲ್ಲ. ಆರ್‌ಎಸ್‌ಎಸ್ ಸರ ಸಂಘಚಾಲಕರನ್ನಾಗಿ ದಲಿತರನ್ನೋ, ಅದಿವಾಸಿಗಳನ್ನೋ ನೇಮಿಸಲಿ. ಆಗ ಸಾಮಾಜಿಕ ನ್ಯಾಯ ನೀಡಿದಂತೆ ಆಗುತ್ತದೆ ಎಂದರು.

ಆದಿವಾಸಿಗಳ ಬಗ್ಗೆ ಬದ್ಧತೆ ಇಲ್ಲದೆ ಇರುವುದರಿಂದಾಗಿ ಅರಣ್ಯ ಹಕ್ಕುಗಳನ್ನು ಬಿಜೆಪಿ ಸರ್ಕಾರ ಕೊಡುತ್ತಿಲ್ಲ ಎಂದು ದೂರಿದರು.

ನ್ಯಾಷನಲ್ ಹೆರಾಲ್ಡ್ ‌ವಿಷಯದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ. ಬಂಧಿಸಲಾಗುತ್ತದೆ ಎಂಬ ಭಯ ಪಕ್ಷದವರಿಗೆ ಇಲ್ಲ. ಅದೊಂದು ಸುಳ್ಳು ಪ್ರಕರಣ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇಮೇಜ್ ಹಾಳು ಮಾಡಲು ಜಾರಿ ನಿರ್ದೇಶನಾಲಯ (ಇಡಿ)ವನ್ನು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿಯವರು ಎಲ್ಲರ ಮೇಲೂ ಜಾರಿ ನಿರ್ದೇಶನಾಲಯವನ್ನು ಛೂ ಬಿಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಟ್ಟು ನಂತರ ಜಿಲ್ಲಾ ಹಾಗೂ ತಾ.ಪಂ. ಚುನಾವಣೆ ನಡೆಸಲಿ ಎಂದರು.

ಅಗ್ನಿಪಥ ದೇಶದ ಯುವಜನರ ಭವಿಷ್ಯ ಹಾಳು ಮಾಡುವ ಕಾರ್ಯಕ್ರಮ ಎಂದು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು