ಭಾನುವಾರ, ಜನವರಿ 19, 2020
27 °C
ಸಾಲಮೇಳ ಇಂದಿನಿಂದ: ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಸ್‌.ಬಿ.ಎಂ. ಮಂಜು ಹೇಳಿಕೆ

ಶಾಖೆ, ಎಟಿಎಂ ಆರಂಭಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: 114 ವರ್ಷದ ಐತಿಹ್ಯ ಹೊಂದಿರುವ ಮೈಸೂರು ಕೋ ಆಪರೇಟಿವ್ ಬ್ಯಾಂಕ್‌ ಹೆಬ್ಬಾಳ, ರಾಜ್‌ಕುಮಾರ್ ರಸ್ತೆ ಹಾಗೂ ಶಾರದಾದೇವಿ ನಗರದಲ್ಲಿ ನೂತನ ಶಾಖೆ ಆರಂಭಿಸಲು ಕ್ರಮ ತೆಗೆದುಕೊಂಡಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎಸ್‌.ಬಿ.ಎಂ.ಮಂಜು ತಿಳಿಸಿದರು.

ಗಾಂಧಿಸ್ಕ್ವೇರ್‌, ಸಯ್ಯಾಜಿರಾವ್‌ ರಸ್ತೆಯ ಶಾಖೆಗಳ ಬಳಿ ಎಟಿಎಂ ಆರಂಭಿಸಲು ಸಿದ್ಧತೆ ನಡೆಸಿದ್ದು, ಫೆಬ್ರುವರಿಯೊಳಗೆ ಶಾಖೆ, ಎಟಿಎಂ ಕೇಂದ್ರಗಳು ಕಾರ್ಯಾಚರಿಸುವ ನಿರೀಕ್ಷೆಯಿದೆ ಎಂದು ಮಂಗಳವಾರ ಬ್ಯಾಂಕ್‌ನಲ್ಲೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಶಾಖೆ ಆರಂಭದ ಅನುಮತಿಗಾಗಿ ರಿಜರ್ವ್‌ ಬ್ಯಾಂಕ್‌ಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ. 30ಸಾವಿರ ಸದಸ್ಯ ಬಲದ ಬ್ಯಾಂಕ್‌ಗೆ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದ್ದು, ಅಷ್ಟರೊಳಗೆ ಅನುಮತಿ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

₹ 100 ಕೋಟಿ ಠೇವಣಿ: ಬ್ಯಾಂಕ್‌ಗೆ ₹ 100 ಕೋಟಿ ಠೇವಣಿ ಸಂಗ್ರಹವಾಗಿದೆ. ಸಾಲ ಮೇಳವನ್ನು ಡಿ.11ರಿಂದ ಆರಂಭಿಸುತ್ತಿದ್ದು, 10 ದಿನ ನಡೆಯುವ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಗ್ರಾಹಕರಲ್ಲಿ ಮನವಿ ಮಾಡಿದರು.

₹ 1 ಲಕ್ಷ ಮೊತ್ತದ ಚಿನ್ನದ ಸಾಲ ಪಡೆಯುವ ಗ್ರಾಹಕರಿಗೆ ಬ್ಯಾಂಕ್‌ನ ಸದಸ್ಯತ್ವ ಕೊಡಲಾಗುವುದು. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಂಜು ಕೋರಿದರು.

ಬ್ಯಾಂಕ್‌ ನಿರಂತರವಾಗಿ ಲಾಭ ಗಳಿಸುತ್ತಿದೆ. ಈಗಾಗಲೇ ₹ 70 ಲಕ್ಷ ಗಡಿ ದಾಟಿದ್ದು, ಮಾರ್ಚ್‌ ಅಂತ್ಯದೊಳಗೆ ಈ ಆರ್ಥಿಕ ವರ್ಷದಲ್ಲೂ ₹ 1 ಕೋಟಿ ಲಾಭ ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಆದಿಚುಂಚನಗಿರಿಯ ಮೈಸೂರು ಶಾಖಾ ಮಠದ ಸೋಮನಾಥಾನಂದ ಸ್ವಾಮೀಜಿ ಬ್ಯಾಂಕ್‌ನ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಬ್ಯಾಂಕ್‌ನ ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಭಾಗ್ಯ, ಮಂಚಪ್ಪ, ಸೋಮಣ್ಣ, ಪುಟ್ಟಸ್ವಾಮಿ, ರವಿಕುಮಾರ್, ಬಿ.ಕೆ.ಪ್ರಕಾಶ್, ರಮೇಶ್‌ಗೌಡ, ಕಾರ್ಯದರ್ಶಿ ಹರ್ಷಿತ್‌ಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು