ಕುಣಿದು ಕುಪ್ಪಳಿಸಿದ ಮೈಸೂರು

7
ಯುವ ಹೃದಯಗಳಿಗೆ ಲಗ್ಗೆ ಇಟ್ಟ ಬಾದಷಾ, ಲಗೋರಿ ತಂಡ

ಕುಣಿದು ಕುಪ್ಪಳಿಸಿದ ಮೈಸೂರು

Published:
Updated:
Deccan Herald

ಮೈಸೂರು: ಬಣ್ಣದ ಬೆಳಕಿನಲ್ಲಿ ಒಡಮೂಡಿದ ವೈಯ್ಯಾರಕ್ಕೆ ಗಾನಸುಧೆಯ ಮೆರುಗು. ಜಗಮಗಿಸುವ ವೇದಿಕೆ ಮೇಲೆ ಗಾಯಕರು ‘ಕಮಾನ್‌ ಮೈಸೂರು’ ಎಂದಾಗ ಸಭಾಂಗಣದಲ್ಲಿ ನಿಂತಲ್ಲೇ ಕುಣಿದು ಕುಪ್ಪಳಿಸುತ್ತಿದ್ದ ಯುವಸಮೂಹ.

ಈ ಬೆಡಗು, ಭಿನ್ನಾಣಕ್ಕೆ ವೇದಿಕೆಯಾಗಿದ್ದು ಯುವ ದಸರಾ. ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ಅಕ್ಷರಶಃ ಜನಸಾಗರ ನಿರ್ಮಾಣವಾಗಿತ್ತು.

ಬಾಲಿವುಡ್‌ ಹಾಗೂ ಪಾಪ್‌ ಗಾಯಕ ಬಾದಷಾ ವೇದಿಕೆ ಮೇಲೆ ಬರುತ್ತಿದ್ದಂತೆ ಪ್ರೇಕ್ಷಕರು ಎದ್ದು ನಿಂತರು. ಆ ಬಳಿಕ ಕೂರಲೇ ಇಲ್ಲ. ಹಿಂಬದಿ ಇದ್ದ ಪ್ರೇಕ್ಷಕರು ವೇದಿಕೆ ಕಾಣುತ್ತಿರಲಿಲ್ಲ. ಆದರೆ, ಎಲ್‌ಇಡಿ ಬೃಹತ್‌ ಪರದೆ ಮೇಲೆ ಮೂಡಿ ಬರುತ್ತಿದ್ದ ಪ್ರದರ್ಶನವನ್ನು ಸವಿಯುತ್ತಾ ನಿಂತಲ್ಲೇ ದೂಳೆಬ್ಬಿಸಿದರು. ‘ಅರೆ ಲಡ್ಕಿ ಬ್ಯೂಟಿಫುಲ್‌ ಕರ್‌ ಗಯಿ ಚಲ್‌’, ‘ಚಮ್ಮಾ ಚಮ್ಮಾ ದೇ ದೇ’ ಗೀತೆ ಮೂಲಕ ಮೋಡಿ ಮಾಡಿದರು.

ವರ್ಣರಂಜಿತ ವೇದಿಕೆ ಮೇಲೆ ಲಗೋರಿ ತಂಡ ಪ್ರದರ್ಶನ ನೀಡುತ್ತಿದ್ದರೆ ಇತ್ತ ಎಲ್ಲ ದಿಕ್ಕುಗಳಿಂದ ಹುಮ್ಮಸ್ಸಿನ ಕೂಗಾಟ, ಪ್ರೀತಿಯ ಚಪ್ಪಾಳೆ.

ಈ ತಂಡದವವರು ‘ಎದ್ದೇಳು ಮೈಸೂರು’ ಎಂದು ಪ್ರೇಕ್ಷಕರನ್ನು ಮೇಲೆ ಏಳಿಸುತ್ತಲೇ ರಾಗ ಲಹರಿ ಹರಿಸಿದರು. ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರಿದೆ ಬಾರಿಸದಿರು ತಂಬೂರಿ’, ‘ಹೇಳ್ಕೊಳ್ಳಕ್‌ ಒಂದೂರು ತಲೆ ಮ್ಯಾಲೆ ಒಂದ್ಸೂರು’, ‘ಮಾರಿ ಕಣ್ಣು ಹೋರಿ ಮ್ಯಾಗೆ, ಕಡುಕನ ಕಣ್ಣು ಕುರಿ ಮ್ಯಾಗೆ’, `ಬ್ರಹ್ಮ ನಿಂಗೆ ಜೋಡಸ್ತೀನಿ ಹೆಂಡ ಮುಟ್ಟಿದ್ ಕೈನಾ' ಎಂಬ ಹಾಡು ಹಾಡುತ್ತಿದ್ದರೆ ಪ್ರೇಕ್ಷಕರ ಎದೆಯಲ್ಲಿ ತಕಧಿಮಿತ.

‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ’ ಹಾಡಿಗೆ ಸಭಾಂಗಣದಲ್ಲಿ ಮಿಂಚಿನ ಸಂಚಾರ. ಕೈ ಮೇಲೆತ್ತಿ ಮತ್ತೆ ಕುಣಿದು ಕುಪ್ಪಳಿಸಿದರು. ಕೊನೆಯಲ್ಲಿ ಲಗೋರಿ ತಂಡದವರು ಪ್ರೇಕ್ಷಕರತ್ತ ಸ್ಪಂಜಿನ ಚೆಂಡು ಎಸೆಯುವ ಮೂಲಕ ‘ಲಗೋರಿ’ ಆಡಿದರು.

‘ಡಿವೈನ್‌ ಡಾನ್ಸ್‌ ಅಕಾಡಮಿ’ ತಂಡದವರು ನವಶಕ್ತಿ ವೈಭವದ ನೃತ್ಯರೂಪಕ ಪ್ರಸ್ತುತಪಡಿಸಿದರು. ಏಕವ್ಯಕ್ತಿ ಪ್ರದರ್ಶಿಸಿದ ಲೇಸರ್‌ ನೃತ್ಯ ಮನಸೂರೆಗೊಂಡಿತು. ಅಂಬಾರಿ ಡಾನ್ಸ್‌ ಸ್ಟುಡಿಯೊ ತಂಡದ ಪ್ರದರ್ಶನ ಸೊಬಗು ತುಂಬಿತು. ಯುವ ಸಂಭ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾಗಿದ್ದ ಕಾಲೇಜು ತಂಡಗಳು ಕನ್ನಡ ಸಂಸ್ಕೃತಿಯನ್ನು ಅನಾವರಣಗೊಳಿಸಿದವು.

‘ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌’ಗೆಂದು ಸೇರಿದ್ದ ಜನರು ಯುವ ದಸರೆಯನ್ನೂ ಕಣ್ತುಂಬಿಕೊಂಡರು. ಹೀಗಾಗಿ, ಪ್ರೇಕ್ಷಕರ ಸಂಖ್ಯೆ ನಿರೀಕ್ಷೆಗಿಂತ ಹೆಚ್ಚಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !