ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಜಂಬೂಸವಾರಿ: ಸಾಂಸ್ಕೃತಿಕ ನಗರಿಗೆ ಬಂದ ಎಂಟು ಆನೆಗಳು

Last Updated 14 ಸೆಪ್ಟೆಂಬರ್ 2021, 5:39 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ಆತಂಕದ ನಡುವೆಯೇ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಎಂಟು ಆನೆಗಳನ್ನು ಸೋಮವಾರ ನಗರಕ್ಕೆ ಕರೆತರುವ ಮೂಲಕ ನಾಡಹಬ್ಬದ ಚಟುವಟಿಕೆಗಳಿಗೆ ಚಾಲನೆ ದೊರಕಿತು.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿ ಬಳಿ ಅರಣ್ಯ ಇಲಾಖೆಯು ಏರ್ಪಡಿಸಿದ್ದ ಸರಳ ಗಜಪಯಣ ಕಾರ್ಯಕ್ರಮದಲ್ಲಿ, ಅಂಬಾರಿ ಹೊರಲಿರುವ ಅಭಿಮನ್ಯು, ಅಶ್ವತ್ಥಾಮ, ಧನಂಜಯ, ಕಾವೇರಿ, ಚೈತ್ರಾ, ಲಕ್ಷ್ಮಿ ಮತ್ತು ಗೋ‍ಪಾಲಸ್ವಾಮಿ ಆನೆಗಳಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಪೂಜೆ ಸಲ್ಲಿಸಿದರು.

ವಿವಿಧ ಶಿಬಿರಗಳಿಂದ ಭಾನುವಾರ ವೀರನಹೊಸಹಳ್ಳಿಗೆ ಕರೆತಂದಿದ್ದ ಆನೆಗಳನ್ನು ಬಣ್ಣ, ಹೂವುಗಳಿಂದ ಸಿಂಗರಿಸಲಾಗಿತ್ತು. ಅರಮನೆಯ ಪುರೋ
ಹಿತ ಪ್ರಹ್ಲಾದ್‌ ರಾವ್ ನೇತೃತ್ವದಲ್ಲಿ ಬೆಳಿಗ್ಗೆ 9.30 ರಿಂದ 10.15ರ ವರೆಗೆ ಪೂಜಾ ಕಾರ್ಯಕ್ರಮಗಳು ನಡೆದವು. ಶಾಂತಚಿತ್ತವಾಗಿ ನಿಂತಿದ್ದ ಆನೆಗಳು ಸೊಂಡಿಲೆತ್ತಿ ಕಾಡಿಗೆ ತಾತ್ಕಾಲಿಕ ಗುಡ್‌ಬೈ ಹೇಳಿದವು.

ಕೋವಿಡ್‌ ಕಾರಣ ಈ ಬಾರಿ ಗಜಪಯಣ ಸರಳವಾಗಿ ನಡೆದರೂ, ಹಬ್ಬದ ವಾತಾವರಣವಿತ್ತು. ಕಾಡಂಚಿನ ನಿವಾಸಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಸಾರ್ವಜನಿಕರು ಆನೆಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡರು. ಫೋಟೊ ಕ್ಲಿಕ್ಕಿಸಿದರು. ಅರಣ್ಯದಿಂದ ಪುನರ್ವಸತಿಗೊಂಡ ಆದಿವಾಸಿಗಳ ಮಕ್ಕಳು ಆನೆ ನೋಡಲು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕೆಲಹೊತ್ತು ಜೋರು ಮಳೆ ಸುರಿಯಿತು. ಗೇಟ್ ಸಮೀಪದ ಆಂಜನೇಯಸ್ವಾಮಿ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಆನೆಗಳಿಗೆ ಫಲ ನೀಡಲಾಯಿತು. ಅರ್ಚಕರು ಆರತಿ ಬೆಳಗಿದರು. ಆನೆಗಳ ದೃಷ್ಟಿ ತೆಗೆದು ಈಡುಗಾಯಿ, ಕುಂಬಳಕಾಯಿ ಒಡೆಯಲಾಯಿತು. ಕಾಲಿನಿಂದ ನಿಂಬೆಹಣ್ಣು ಮೆಟ್ಟಿದ ಆನೆಗಳು ಮುಂದೆ ಹೆಜ್ಜೆ ಇಟ್ಟವು.

ಆರೋಗ್ಯದಿಂದಿವೆ: ‘ದಸರೆಗೆ ಆಯ್ಕೆಯಾಗಿರುವ ಎಂಟೂ ಆನೆಗಳು ಉತ್ತಮ ಆರೋಗ್ಯ ಹೊಂದಿವೆ. ಒಂದು ತಿಂಗಳಿನಿಂದ ಅವುಗಳ ಮೇಲೆ ನಿಗಾ ಇಟ್ಟಿದ್ದು, ಆರೋಗ್ಯದಲ್ಲಿ ಏರುಪೇರು ಉಂಟಾಗಿಲ್ಲ. ಜಿಲ್ಲಾಡಳಿತದ ವತಿಯಿಂದ ಆನೆಗಳು, ಮಾವುತರು ಹಾಗೂ ಕಾವಾಡಿಗಳಿಗೆ ವಿಮೆ ಮಾಡಿಸಿದ್ದೇವೆ’ ಎಂದು ಡಿಸಿಎಫ್‌ (ವನ್ಯಜೀವಿ) ವಿ.ಕರಿಕಾಳನ್ ತಿಳಿಸಿದರು.

‘ಆನೆಗಳಿಗೆ ಕೋವಿಡ್‌ ಪರೀಕ್ಷೆ ಮಾಡಬೇಕು ಎಂಬ ಸೂಚನೆ ಬಂದಿಲ್ಲ. ಕೆಲವು ಮೃಗಾಲಯಗಳಲ್ಲಿ ಹುಲಿ, ಸಿಂಹ
ಗಳಿಗೆ ಕೋವಿಡ್‌ ಸೋಂಕಿರುವ ವರದಿಯಾಗಿದೆ. ಆದರೆ ನಮ್ಮ ದೇಶದಲ್ಲಿ ಆನೆಗಳಿಗೆ ಕೋವಿಡ್‌ ಬಂದಿರುವುದು ಎಲ್ಲೂ ವರದಿಯಾಗಿಲ್ಲ. ದಸರಾ ಆನೆಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಿಲ್ಲ’ ಎಂದರು.

‘ಮಾವುತರು ಮತ್ತು ಕಾವಾಡಿಗಳಿಗೆ ಶೇ 99 ರಷ್ಟು ಕೋವಿಡ್‌ ಮೊದಲ ಲಸಿಕೆ ಆಗಿದೆ. ಕೆಲವರಿಗೆ ಎರಡೂ ಡೋಸ್‌ಗಳು ಆಗಿವೆ. ಮೊದಲ ಡೋಸ್‌ ಪಡೆದು 84 ದಿನಗಳು ಆದವರಿಗೆ ಅರಮನೆ ಆವರಣ
ದಲ್ಲೇ ಎರಡನೇ ಡೋಸ್ ನೀಡಲು ವ್ಯವಸ್ಥೆ ಮಾಡಲಾಗುವುದು’ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ, ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಚೇತನ್, ಡಿಸಿಎಫ್‌ ಕಮಲಾ ಕರಿಕಾಳನ್, ಮೇಯರ್ ಸುನಂದಾ ಫಾಲನೇತ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ, ಪಾಲಿಕೆ ಸದಸ್ಯರಾದ ಶಿವಕುಮಾರ್‌, ಸುಬ್ಬಯ್ಯ, ಶೋಭಾ ಸುನಿಲ್, ಪುಷ್ಪಲತಾ ಜಗನ್ನಾಥ್, ಶೋಭಾ, ನಮ್ರತಾ ಸುರೇಶ್‌ ಪಾಲ್ಗೊಂಡರು.

ಅರಣ್ಯ ಭವನದಲ್ಲಿ ವ್ಯವಸ್ಥೆ: ವೀರನಹೊಸಹಳ್ಳಿಯಿಂದ ಬಂದಿರುವ ಆನೆಗಳು ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ. ಸೆ.16ರವರೆಗೆ ಆನೆಗಳಿಗೆ ಅಲ್ಲೇ ತಂಗಲು ವ್ಯವಸ್ಥೆ ಮಾಡಲಾಗಿದೆ.

‘ಮಾವುತರು ಮತ್ತು ಕಾವಾಡಿಗಳು ಸೇರಿ 16 ಮಂದಿ ಇದ್ದಾರೆ. ಸಹಾಯಕರು, ಸ್ವಚ್ಛತೆ ಹಾಗೂ ಇತರ ಕೆಲಸ ನಿರ್ವಹಿಸುವ ಸಿಬ್ಬಂದಿ ಸೇರಿದಂತೆ ಒಟ್ಟು 50 ಮಂದಿ ಬಂದಿದ್ದಾರೆ. ಎಲ್ಲರೂ ಅರಣ್ಯ ಭವನದಲ್ಲಿ ತಂಗಲಿದ್ದಾರೆ. ಸೆ.16 ರಂದು ಬೆಳಿಗ್ಗೆ 6.30ಕ್ಕೆ ಆನೆಗಳಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗುವುದು. ಬೆಳಿಗ್ಗೆ 8.36ಕ್ಕೆ ಅರಮನೆಗೆ ಸ್ವಾಗತಿಸಲಾಗುತ್ತದೆ. ಕಾಲ್ನಡಿಗೆಯಲ್ಲೇ ಅರಮನೆ ಆವರಣಕ್ಕೆ ಕರೆತರಲಾಗುತ್ತದೆ’ ಎಂದು ಕರಿಕಾಳನ್‌ ತಿಳಿಸಿದರು.

ಅರಮನೆಯಲ್ಲಿ ಸಿದ್ಧತೆ: ಮಾವುತರು, ಕಾವಾಡಿಗರು ಹಾಗೂ ಗಜಪಡೆ ವಾಸ್ತವ್ಯಕ್ಕಾಗಿ ಅರಮನೆ ಆವರಣದಲ್ಲಿ ಶೆಡ್‌ ನಿರ್ಮಿಸುವುದು ಸೇರಿದಂತೆ ಅಗತ್ಯ ಸಿದ್ಧತೆ ನಡೆದಿದೆ.

ಹಿಂದಿನ ವರ್ಷದಂತೆ ಈ ಬಾರಿಯೂ ಪ್ರತಿ ಆನೆ ಜೊತೆ ಮಾವುತ, ಕಾವಾಡಿ ಹಾಗೂ ಸಹಾಯಕರು ಮಾತ್ರ ಬಂದಿದ್ದಾರೆ. ಕೋವಿಡ್‌ ಪರಿಸ್ಥಿತಿ ಕಾರಣ ಮಾವುತ–ಕಾವಾಡಿಗರ ಕುಟುಂಬದವರಿಗೆ ಅವಕಾಶ ನೀಡಿಲ್ಲ.

ಶಾಂತಚಿತ್ತ ಅಶ್ವತ್ಥಾಮ: ಅಂಬಾರಿ ಹೊರುವ ಅಭಿಮನ್ಯು ಜೊತೆಗೆ, ದಸರೆಯಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳಲಿರುವ ಅಶ್ವತ್ಥಾಮ ಕೂಡಾ ಎಲ್ಲರ ಕುತೂಹಲದ ಕೇಂದ್ರವಾಗಿತ್ತು.

ಗಜಪಯಣದ ಪೂಜೆಯಲ್ಲಿ ಭಾಗವಹಿಸಿದ ಅನುಭವವಿಲ್ಲದ್ದರಿಂದ, ವರ್ತನೆ ಹೇಗಿರಲಿದೆ ಎಂಬ ಆತಂಕವೂ ಹಲವರಲ್ಲಿತ್ತು. ಆದರೆ ಒಂದು ಗಂಟೆಗೂ ಹೆಚ್ಚು ಹೊತ್ತು ಶಾಂತಚಿತ್ತನಾಗಿ ನಿಂತು ಎಲ್ಲರ ಮೆಚ್ಚುಗೆಗೆ ಪಾತ್ರನಾದ.

‘ಆಶ್ವತ್ಥಾಮನಿಗೆ ಇನ್ನೂ ಚಿಕ್ಕ ವಯಸ್ಸು. ಈಗಾಗಲೇ 2.85 ಮೀಟರ್‌ ಎತ್ತರವಿದ್ದು, ಗಂಭೀರ ನಿಲುವಿದೆ. ಅದನ್ನು ಆನೆಯನ್ನು 2017 ರಲ್ಲಿ ಸಕಲೇಶಪುರದಲ್ಲಿ ಸೆರೆಹಿಡಿಯಲಾಗಿತ್ತು. ಇನ್ನಷ್ಟು ಪಳಗಿಸುವ ಉದ್ದೇಶದಿಂದ ಈ ಬಾರಿ ಆಯ್ಕೆ ಮಾಡಲಾಗಿದೆ. ಸೂಕ್ತ ತರಬೇತಿ ನೀಡಿ, ಪ್ರತಿವರ್ಷ ದಸರೆಗೆ ಕರೆತರಬೇಕು ಎಂಬುದು ಉದ್ದೇಶ’ ಎಂದು ವಿ.ಕರಿಕಾಳನ್ ತಿಳಿಸಿದರು.

ಪೂಜೆಯಲ್ಲಿ ಪಾಲ್ಗೊಳ್ಳದ ವಿಕ್ರಮ: ಮದ ಏರಿರುವ ಕಾರಣ ವಿಕ್ರಮ ಆನೆ ಪೂಜೆಯಲ್ಲಿ ಪಾಲ್ಗೊಳ್ಳಲಿಲ್ಲ. ಸಿಂಗರಿಸಲಾಗಿದ್ದರೂ, ಅದನ್ನು ಮರಕ್ಕೆ ಕಟ್ಟಿ ಹಾಕಲಾಗಿತ್ತು. ದೂರದಿಂದಲೇ ಪೂಜೆಯ ವಿಧಿವಿಧಾನಗಳನ್ನು ನೋಡಿ ಆತ ತೃಪ್ತನಾದ.

‘ವಿಕ್ರಮನಿಗೆ ಮದ ಏರಿರುವುದಿಂದ ಇತರ ಆನೆಗಳಿಂದ ಪ್ರತ್ಯೇಕವಾಗಿ ಇರಿಸಲಾಗಿತ್ತು. ಅರಣ್ಯ ಭವನದಲ್ಲೂ ಪ್ರತ್ಯೇಕವಾಗಿ ಇರಿಸಲಾಗಿದೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT