ದಸರಾ ಸ್ವಾಗತಕ್ಕೆ ಹಸಿರೀಕರಣ

7

ದಸರಾ ಸ್ವಾಗತಕ್ಕೆ ಹಸಿರೀಕರಣ

Published:
Updated:
Deccan Herald

ದಸರಾ ಸಂಭ್ರಮದಲ್ಲಿ ಭಾಗಿಯಾಗಲು ಪ್ರತಿವರ್ಷ ಮೈಸೂರಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವರು. ಸಾಂಸ್ಕೃತಿಕ ನಗರಿಗೆ ಬರುವವರು ಇಲ್ಲಿನ ಸೌಂದರ್ಯಕ್ಕೆ ಮಾರುಹೋಗಬೇಕು ಎಂಬುದು ದಸರಾ ಉತ್ಸವದ ಸಂಘಟಕರ ಬಯಕೆ.

ಈ ಕಾರಣದಿಂದ ಪ್ರತಿ ದಸರಾ ವೇಳೆಯೂ ನಗರದ ಸೌಂದರ್ಯವನ್ನು ಹೆಚ್ಚಿಸಲು ಒತ್ತು ನೀಡಲಾಗುತ್ತದೆ. ಇತ್ತೀಚಿನ ಕೆಲ ವರ್ಷಗಳಿಂದ ಸೌಂದರ್ಯಪ್ರಜ್ಞೆಯೂ ಹೆಚ್ಚಿದೆ. ಪ್ರವಾಸಿ ತಾಣಗಳು, ರಸ್ತೆ, ಫುಟ್‌ಪಾತ್‌, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ... ಹೀಗೆ ಪ್ರವಾಸಿಗರು ಸಂಚರಿಸುವ ಸ್ಥಳಗಳನ್ನು ಸುಂದರ ಹಾಗೂ ಚೊಕ್ಕವಾಗಿಡಲು ಗಮನ ನೀಡಲಾಗುತ್ತದೆ.

ದಸರಾ ಬರುತ್ತಿದ್ದಂತೆಯೇ ಫುಟ್‌ಪಾತ್‌ಗಳ ದುರಸ್ತಿ ಕೆಲಸ ನಡೆಯುತ್ತದೆ. ಚರಂಡಿಗಳ ಕಲ್ಲುಚಪ್ಪಡಿಗಳು ಎದ್ದುಹೋಗಿದ್ದರೆ, ಅವುಗಳನ್ನು ಅಳವಡಿಸಲಾಗುತ್ತದೆ. ಗೋಡೆಗಳಿಗೆ ಬಣ್ಣ ಹಚ್ಚುವ ಕೆಲಸವೂ ನಡೆಯುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ಗೋಡೆಗಳಿದ್ದರೆ, ಚಿತ್ರಗಳಿಂದ ಅಲಂಕರಿಸಲಾಗುತ್ತದೆ. ಗೋಡೆಗಳಲ್ಲಿ ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರಾವಳಿಗಳು ಮೂಡುತ್ತವೆ.

ಈ ಸಲ ಇವೆಲ್ಲದರ ಜತೆ ಹಸಿರೀಕರಣದ ಮೂಲಕವೂ ಸೌಂದರ್ಯ ಹೆಚ್ಚಿಸಲು ತೀರ್ಮಾನಿಸಲಾಗಿದೆ. ನಗರದ ಪ್ರಮುಖ ರಸ್ತೆಗಳ ವಿಭಜಕದಲ್ಲಿ (ಮೀಡಿಯನ್‌) ಹೂವಿನ ಗಿಡಗಳನ್ನು ನೆಡುವ ಕೆಲಸ ಭರದಿಂದ ಸಾಗಿದೆ. ಮಹಾನಗರ ಪಾಲಿಕೆಯ ತೋಟಗಾರಿಕಾ ವಿಭಾಗದ ವತಿಯಿಂದ ಈ ಕೆಲಸ ನಡೆಯುತ್ತಿದೆ.

ದಸರಾ ಸಂದರ್ಭ ನಗರದ ಸೌಂದರ್ಯ ಹೆಚ್ಚಿಸುವ ವೇಳೆ ಈ ಹಿಂದಿನ ವರ್ಷಗಳಲ್ಲಿ ‘ಹಸಿರೀಕರಣಕ್ಕೆ’ ಪ್ರಾಧಾನ್ಯತೆ ಕಲ್ಪಿಸಿರಲಿಲ್ಲ. ಈ ಸಲ ಸೌಂದರ್ಯ ಅಂದರೆ ಕೇವಲ ಗೋಡೆಗಳಿಗೆ ಬಣ್ಣ ಬಳಿಯುವುದಕ್ಕೆ ಸೀಮಿತವಾಗಿಲ್ಲ. ಹಸಿರೀಕರಣವೂ ನಡೆಯಲಿದೆ ಎಂದು ಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌ ಅವರು ಹೇಳುತ್ತಾರೆ.

ವಿಭಜಕಗಳಲ್ಲಿ ಎಲ್ಲೆಲ್ಲಿ ಹೂವಿನ ಗಿಡ ನೆಡಲು ಅವಕಾಶಗಳಿವೆಯೋ ಅಲ್ಲೆಲ್ಲಾ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು. ರಾಜ್ಯ ಸರ್ಕಾರ ‘ಹಸಿರು ಕರ್ನಾಟಕ’ ಯೋಜನೆ ಜಾರಿಗೊಳಿಸಿದೆ. ಆದ್ದರಿಂದ ಈ ಬಾರಿಯ ದಸರಾಕ್ಕೆ ನಗರದ ಸೌಂದರ್ಯ ಹೆಚ್ಚಿಸಲು ‘ಹಸಿರೀಕರಣ’ಕ್ಕೂ ಒತ್ತು ನೀಡಲಾಗಿದೆ ಎನ್ನುತ್ತಾರೆ.

‘ದಸರಾ ಉತ್ಸವ ಮುಂದಿಟ್ಟುಕೊಂಡು ಹೂವಿನ ಗಿಡ ನೆಡುವ ಕಾರ್ಯಕ್ರಮ ಆರಂಭಿಸಿದ್ದೇವೆ. ಆದರೆ ನಗರವು ವರ್ಷವಿಡೀ ಹಸಿರಿನಿಂದ ಕಂಗೊಳಿಸುತ್ತಿರಬೇಕು ಎಂಬುದು ನಮ್ಮ ಬಯಕೆ. ಹಸಿರು ಹೆಚ್ಚಿದರೆ ಮಾಲಿನ್ಯದ ಪ್ರಮಾಣ ತಗ್ಗಲಿದೆ. ವಿಭಜಕಗಳಲ್ಲಿ ಗಿಡಗಳು ಬೆಳೆದರೆ ಪಾದಚಾರಿಗಳು ಎಲ್ಲೆಂದರಲ್ಲಿ ರಸ್ತೆ ದಾಟುವುದು ಕೂಡಾ ಕಡಿಮೆಯಾಗುತ್ತದೆ’ ಎಂದರು.

ಗಿಡಗಳನ್ನು ನೆಡುವ ಕೆಲಸ 10 ರಿಂದ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಆ ಬಳಿಕ ವಿಶೇಷ ಕಾಳಜಿವಹಿಸಿ ಆರೈಕೆ ಮಾಡಲಾಗುತ್ತದೆ. ದಸರಾ ವೇಳೆಗೆ ಎಲ್ಲ ವಿಭಜಕಗಳು ಹಸಿರು ಮತ್ತು ಹೂಗಳಿಂದ ನಳನಳಿಸಬೇಕು ಎಂಬುದೇ ನಮ್ಮ ಬಯಕೆ ಎಂದು ಹೇಳಿದರು.

ಪಾಲಿಕೆಯ ತೋಟಗಾರಿಕಾ ವಿಭಾಗದ ಹಲವು ಸಿಬ್ಬಂದಿ ಗಿಡನೆಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್‌. ಗೇಟ್‌ನಿಂದ ರಾಮಸ್ವಾಮಿ ವೃತ್ತದವರೆಗೆ ಗಿಡ ನೆಡುವ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಜೆಎಲ್‌ಬಿ ರಸ್ತೆ, ಕೆಆರ್‌ಎಸ್‌, ಮಾನಂದವಾಡಿ ರಸ್ತೆ, ಮಹದೇವಪುರ ಮುಖ್ಯರಸ್ತೆ, ಬನ್ನೂರು ಮುಖ್ಯರಸ್ತೆ, ತಿ.ನರಸೀಪುರ ಮುಖ್ಯ ರಸ್ತೆಯ ವಿಭಜಕಗಳಲ್ಲೂ ಇದೇ ರೀತಿ ಗಿಡಗಳನ್ನು ನೆಡಲಾಗುತ್ತದೆ. ನಗರವನ್ನು ಸಂಪರ್ಕಿಸುವ ಎಲ್ಲ ಪ್ರಮುಖ ರಸ್ತೆಗಳು ದಸರಾ ವೇಳೆಗೆ ಬಣ್ಣಬಣ್ಣದ ಹೂಗಳಿಂದ ಕಂಗೊಳಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !