ಮೈಸೂರು–ಕೊಡಗು: ಶೇ 66.87 ಮತದಾನ

ಸೋಮವಾರ, ಮೇ 27, 2019
27 °C
ಬೆಳಿಗ್ಗೆ ಮಂದಗತಿ; ಮಧ್ಯಾಹ್ನದ ವೇಳೆಗೆ ಚುರುಕು–ನಗರದಲ್ಲಿ ನೀರಸ

ಮೈಸೂರು–ಕೊಡಗು: ಶೇ 66.87 ಮತದಾನ

Published:
Updated:

ಮೈಸೂರು: ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ, ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಸೇರಿದಂತೆ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ 22 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ.

ಆರಂಭದಲ್ಲಿ ನಿರುತ್ಸಾಹ ತೋರಿದರೂ ಕ್ಷೇತ್ರದಲ್ಲಿ ಶೇ 66.87 ಮತದಾನವಾಗಿದೆ. ಕಳೆದ ಬಾರಿ ಹೋಲಿಸಿದರೆ ಇದು ಕಡಿಮೆ. 2014ರಲ್ಲಿ ಶೇ 67.30 ಮತದಾನವಾಗಿತ್ತು.

ಪಿರಿಯಾಪಟ್ಟಣ (ಶೇ 78.6) ಅತ್ಯಧಿಕ ಮತದಾನವಾಗಿದ್ದರೆ, ಚಾಮರಾಜ (ಶೇ 55.99) ಹಾಗೂ ನರಸಿಂಹರಾಜ (ಶೇ 56.55) ಅತಿ ಕಡಿಮೆ ಮತದಾನವಾಗಿದೆ.

ಮತಯಂತ್ರ ಸಮಸ್ಯೆಯಿಂದಾಗಿ ಅಡಚಣೆ, ವಿಳಂಬದಂಥ ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ಕ್ಷೇತ್ರದಲ್ಲಿ ಬಹುತೇಕ ಕಡೆ ಶಾಂತಿಯುತ ಮತದಾನವಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮಹಿಳಾ ಮತದಾರರು, ಗರ್ಭಿಣಿಯರು, ಬಾಣಂತಿಯರು, ವೃದ್ಧರು, ಅಂಗವಿಕಲರು, ನವ ಮತದಾರರು ಹಕ್ಕು ಚಲಾಯಿಸಿದರು. ಅಂಗವಿಕಲರಿಗಾಗಿ ಗಾಲಿ ಕುರ್ಚಿ, ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತಗಟ್ಟೆಗಳ ಬಳಿ ಬಿಗಿ ಭದ್ರತೆಗಾಗಿ ಸುಮಾರು ಆರು ಸಾವಿರ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.

ಈ ಕ್ಷೇತ್ರದಲ್ಲಿ ಪ್ರತಾಪಸಿಂಹ ಹಾಗೂ ಸಿ.ಎಚ್‌.ವಿಜಯಶಂಕರ್‌ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ 2,187 ಮತಗಟ್ಟೆಗಳಿದ್ದು, 18.95 ಲಕ್ಷ ಮತದಾರರಿದ್ದಾರೆ. 22 ಕಡೆ ಸಖಿ ಮತಗಟ್ಟೆ, 11 ಬುಡಕಟ್ಟು ಮತಗಟ್ಟೆ, 7 ಅಂಗವಿಕಲರ ಮತಗಟ್ಟೆ ಸ್ಥಾಪಿಸಲಾಗಿತ್ತು.

ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿರು ಬಿಸಿಲಿನ ನಡುವೆ ಮತದಾರರು ಸರತಿ ಸಾಲಿನಲ್ಲಿ ನಿಂತು ಬಿರುಸಿನಿಂದ ಮತದಾನ ಮಾಡಿದರು.

ಬೆಳಿಗ್ಗೆ ಮತದಾನ ಮಂದಗತಿಯಲ್ಲಿ ಸಾಗಿತು. ಮೈಸೂರು ನಗರದ ಹೆಚ್ಚಿನ ಮತಗಟ್ಟೆಗಳು ‌ಮತದಾರರು ಇಲ್ಲದೆ ಬಣಗುಡುತ್ತಿದ್ದವು. ಮಧ್ಯಾಹ್ನದ ವೇಳೆಗೆ ಚುರುಕು ಪಡೆದುಕೊಂಡಿತು. ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದರು.

ಕೊಡಗಿನಲ್ಲಿ ಬೆಳಿಗ್ಗೆ 7 ರಿಂದಲೇ ಬಿರುಸಿನ ಮತದಾನ ನಡೆಯಿತು. ಜಿಲ್ಲೆಯ ಮಡಿಕೇರಿ (ಶೇ 75), ವಿರಾಜಪೇಟೆ (ಶೇ 70) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರು ಉತ್ಸಾಹದಿಂದ ಹಕ್ಕು ಚಲಾಯಿಸಿದರು.

ಮತ ಖಾತರಿ ಸೌಲಭ್ಯದ ವಿವಿ ಪ್ಯಾಟ್‌ ಹಾಗೂ ವಿದ್ಯುನ್ಮಾನ ಮತಯಂತ್ರ ಕೈಕೊಟ್ಟ ಕಾರಣ ಕೆಲವೆಡೆ ಮತದಾನ ವಿಳಂಬವಾಯಿತು.

ಕೆಲ ಗ್ರಾಮಗಳಲ್ಲಿ ಹಾಗೂ ಮತಗಟ್ಟೆಯ ಅನತಿ ದೂರದಲ್ಲಿ ಕಾರ್ಯಕರ್ತರು ಗುಂಪು ಕಟ್ಟಿಕೊಂಡು ಮತದಾರರನ್ನು ಓಲೈಸಲು ಕಸರತ್ತು ನಡೆಸುತ್ತಿದ್ದ ದೃಶ್ಯ ಕಂಡುಬಂತು.

ಕೊಡಗಿ‌ನ ಮುಕ್ಕೋಡ್ಲು ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿಯೊಬ್ಬರು ಮತದಾರರ ಮಧ್ಯ ಬೆರಳಿಗೆ ಶಾಯಿ ಹಾಕಿ ಲೋಪ ಎಸಗಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !