ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈಸೂರು ಸಾಹಿತ್ಯ ಸಂಭ್ರಮ’ ನಂಟು

Last Updated 10 ಜೂನ್ 2019, 19:52 IST
ಅಕ್ಷರ ಗಾತ್ರ

ನಾನು ಗಿರೀಶ ಕಾರ್ನಾಡ ಅವರನ್ನು ಚಿಕ್ಕಂದಿನಿಂದಲೂ ಬಲ್ಲೆ. ನನ್ನ ಕುಟುಂಬವು ಸಾಹಿತ್ಯದೊಂದಿಗೆ ಬೆರೆತುಹೋಗಿದ್ದ ಕಾರಣದಿಂದ ಅವರೊಂದಿಗೆ ನನಗೆ ಒಡನಾಟ ಸಾಧ್ಯವಾಯಿತು.

ಅವರೊಂದಿಗೆ ನನಗೆ ಸಾಕಷ್ಟು ಭಾವನಾತ್ಮಕ ನೆನಪುಗಳು ಇವೆಯಾದರೂ, 2017ರಲ್ಲಿ ಆರಂಭಗೊಂಡ ‘ಮೈಸೂರು ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಆಯೋಜನೆಯ ಸಂದರ್ಭದ ಕೆಲವು ನೆನಪುಗಳನ್ನು ಇಲ್ಲಿ ಹೇಳಿಕೊಳ್ಳುತ್ತೇನೆ. ಅವರಿಗೆ ಆಗಲೂ ಅನಾರೋಗ್ಯವಿದ್ದ ಕಾರಣ, ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ನನಗೆ ಕೊಂಚಮುಜುಗರವೂ ಇತ್ತೆನ್ನಿ. ಹಾಗಾಗಿ, ಕಾರ್ನಾಡರಿಗೆ ಕರೆ ಮಾಡದೇ, ಅವರ ಪುತ್ರ, ನನ್ನ ಗೆಳೆಯ ರಘು ಕಾರ್ನಾಡ ಅವರಿಗೆ ಕರೆ ಮಾಡಿ, ಅವರನ್ನು ಕಾರ್ಯಕ್ರಮಕ್ಕೆ ಕರೆತರುವಿರಾ ಎಂದು ಕೇಳಿಕೊಂಡೆ. ಇದಾದ ಹತ್ತು ನಿಮಿಷಕ್ಕೇ ನನಗೆ ವಾ‍ಪಸು ಕರೆ ಮಾಡಿದ ರಘು, ‘ಅಪ್ಪ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ’ ಎಂದರು. ಬಳಿಕ ಕಾರ್ನಾಡರೊಂದಿಗೆ ಲ್ಯಾಂಡ್‌ಲೈನ್‌ನಲ್ಲಿ ಮಾತನಾಡಿದೆ. ಈ ಕ್ಷೇತ್ರದಲ್ಲಿ ನನ್ನಂತಹ ಅಂಬೆಗಾಲಿಡುವ ಹೆಣ್ಣುಮಗಳೊಂದಿಗೆ ಕಾಳಜಿ, ಅಕ್ಕರೆಯಿಂದ ಮಾತನಾಡಿದ್ದು ನನಗೆ ಸ್ಫೂರ್ತಿ ತುಂಬಿತು.

ಕಾರ್ನಾಡರೇ ನನಗೆ ವಿಷಯವನ್ನೂ ಸೂಚಿಸಿದರು. ಮೈಸೂರಿನವರೇ ಆದ ಎ.ಕೆ.ರಾಮಾನುಜಂ ಅವರ ‘ಅಡುಗೆ ಮನೆಯ ಅಜ್ಜಿಕತೆ, ಅರಮನೆಯ ಮಹಾಕಾವ್ಯ’ ಕುರಿತು ಮಾತನಾಡುವುದಾಗಿ ತಿಳಿಸಿದರು. ಈ ವಿಚಾರವನ್ನು ಕುರಿತು ಮಾತನಾಡಲು ಬೇಕಾದ ಹಲವು ಕೃತಿಗಳನ್ನು ಅವರೇ ಕೊಂಡುಕೊಂಡರು. ಸಾಹಿತ್ಯೋತ್ಸವಕ್ಕೆ ಬರುವುದು ಹೇಗೆ ಎಂದು ಕೇಳಿಕೊಂಡರು. 2017ರ ಜೂನ್‌ 4ರಂದು ಅವರ ಉಪನ್ಯಾಸ ಕಾರ್ಯಕ್ರಮ. ಅವರು ಒಂದು ದಿನ ಮುಂಚೆಯೇ, ತಾವೊಬ್ಬರೇ ಮೈಸೂರಿಗೆ ಬಂದರು. ಅವರ ಹೆಗಲಿನಲ್ಲಿ ಒಂದು ಇಳಿಬಿದ್ದ ಬ್ಯಾಗು; ಅದರಲ್ಲೊಂದು ಆಮ್ಲಜನಕ ತುಂಬಿದ ಕಿಟ್‌. ಅದರಿಂದ ಹೊರಬಂದ ಎರಡು ನಳಿಕೆಗಳು ಅವರ ಮೂಗಿಗೆ ಅಂಟಿಕೊಂಡಿದ್ದವು. ಹಾಗೆಂದು, ಅವರು ಬಳಲಿದ ನೋಟ ಹೊತ್ತಿರಲಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್ ಸಿದ್ಧವಾಗಿ ಇಟ್ಟುಕೊಂಡಿದ್ದೆವು. ವೈದ್ಯರನ್ನು ಅವರ ಬಳಿಯೇ ಕೂರಿಸಿದ್ದೆವು. ಹೆಚ್ಚುವರಿಯಾಗಿ ಇರಲಿ ಎಂದು ಆಮ್ಲಜನಕದ ಸಿಲಿಂಡರೂ ಇತ್ತು. ಆದರೆ, ಇದಾವುದೂ ಬಳಕೆಗೆ ಬರಲಿಲ್ಲ. ತಮ್ಮ ವಿಚಾರವನ್ನು ಮಂಡಿಸಿ ಸಾಹಿತ್ಯಾಸಕ್ತರೊಂದಿಗೆ ಒಂದೂವರೆ ಗಂಟೆಕಾಲ ಮಾತನಾಡಿ ನಮಗೆ ಅಚ್ಚರಿ ಮೂಡಿಸಿದ್ದರು.

ಇದೀಗ ‘ಮೈಸೂರು ಸಾಹಿತ್ಯ ಸಂಭ್ರಮ’ದ ಮೂರನೇ ವರ್ಷದ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಮತ್ತೆ ಕಾರ್ನಾಡರನ್ನು ಆಹ್ವಾನಿಸಲು ಈಚೆಗಷ್ಟೇ ಕರೆ ಮಾಡಿದ್ದೆ. ವಿಷಯದ ಬಗ್ಗೆ ಚಿಂತಿಸುವುದಾಗಿ ಹೇಳಿಕೊಂಡಿದ್ದರು. ಮುಂದಿನ ಮಂಗಳವಾರ ಅಥವಾ ಬುಧವಾರ ಅವರನ್ನು ಭೇಟಿಯಾಗುವುದಿತ್ತು. ಸಾಹಿತ್ಯೋತ್ಸವಕ್ಕೆ ಇನ್ನೂ ಕೆಲವರು ವಿದ್ವಾಂಸರ ಹೆಸರನ್ನು ಸೂಚಿಸುವುದಾಗಿಯೂ ತಿಳಿಸಿದ್ದರು. ಆದರೆ, ಈಗ ಅದು ಸಾಧ್ಯವಿಲ್ಲ. ಈಗ ಕಾರ್ನಾಡರೇ ನಮ್ಮೊಂದಿಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT