ಮಂಗಳವಾರ, ಜೂನ್ 28, 2022
21 °C
ಜೂನ್‌ 11ಕ್ಕೆ ಚುನಾವಣೆ: ಸದಸ್ಯರು– ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನ ಸ್ಥಳೀಯ ಮುಖಂಡರಲ್ಲಿ ತಳಮಳ

ಮೈಸೂರು ಮಹಾನಗರ ಪಾಲಿಕೆ | ಚುನಾವಣೆಯೋ–ತಡೆಯಾಜ್ಞೆಯೋ: ಕೆರಳಿದ ಕುತೂಹಲ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಹೈಕೋರ್ಟ್‌ ತೀರ್ಪಿನನ್ವಯ ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ಅನರ್ಹಗೊಂಡ ಬೆನ್ನಿಗೆ; ಪ್ರಾದೇಶಿಕ ಆಯುಕ್ತರು ಹೊಸ ಮೇಯರ್‌ ಆಯ್ಕೆಗೆ ಚುನಾವಣೆ ಘೋಷಿಸಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ನಿಗದಿಯಂತೆ ಜೂನ್‌ 11ರಂದು ಮೇಯರ್‌ ಆಯ್ಕೆಯ ಚುನಾವಣೆ ನಡೆಯುತ್ತೋ? ಅಷ್ಟರೊಳಗೆ ರುಕ್ಮಿಣಿ ಮಾದೇಗೌಡ ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ತರಲಿದ್ದಾರೋ? ಎಂಬುದೇ ಇದೀಗ ಪಾಲಿಕೆ ಅಂಗಳವಷ್ಟೇ ಅಲ್ಲ; ಜಿಲ್ಲೆಯ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಪಾಲಿಕೆಯ ಸದಸ್ಯರಲ್ಲಿ ಹಾಗೂ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನ ಸ್ಥಳೀಯ ಮುಖಂಡರಲ್ಲೂ ತಳಮಳ ಸೃಷ್ಟಿಯಾಗಿದೆ. ಚುನಾವಣೆಗೆ ಸಜ್ಜಾಗಬೇಕೋ? ಬೇಡವೋ ಎಂಬುದು ಜಿಜ್ಞಾಸೆಯಾಗಿ ಕಾಡಲಾರಂಭಿಸಿದೆ.

ಜೆಡಿಎಸ್‌ನ ತಪ್ಪು ನಿರ್ಧಾರದಿಂದಲೇ ಇಂತಹ ಸನ್ನಿವೇಶ ಸೃಷ್ಟಿಯಾಗಿದೆ. ಪಾಲಿಕೆಯ ಶತಮಾನದ ಇತಿಹಾಸದಲ್ಲಿ ಕಪ್ಪುಚುಕ್ಕೆಯೊಂದು ದಾಖಲಾದಂತಾಗಿದೆ. ಈ ಹಿಂದೆ ಯಾವಾಗಲೂ ಮೇಯರ್‌ ಆಗಿದ್ದವರ ಸದಸ್ಯತ್ವ ರದ್ದಾಗಿರಲಿಲ್ಲ. ಇಬ್ಬರು ಅಥವಾ ಮೂವರು ಸದಸ್ಯರ ಸದಸ್ಯತ್ವ ವಿವಿಧ ಕಾರಣದಿಂದ ರದ್ದಾಗಿದೆ. ಇದೀಗ ಮೇಯರ್‌ ಸದಸ್ಯತ್ವವೇ ರದ್ದಾಗಿದ್ದು, ಮೈಸೂರಿನ ಘನತೆ, ಗೌರವಕ್ಕೂ ಧಕ್ಕೆ ಬಂದಂತಾಗಿದೆ ಎಂಬ ಮಾತು ಕೇಳಿ ಬಂದಿವೆ.

‘ಹೊಸ ಮೇಯರ್‌ ಆಯ್ಕೆಯಾದಾಗಿನಿಂದಲೂ ಏನೊಂದು ಕೆಲಸವೇ ಆಗಿಲ್ಲ. ಮೇಯರ್ ಆಯ್ಕೆಯ ಸಂದರ್ಭವೇ ರುಕ್ಮಿಣಿ ಅವರ ಸದಸ್ಯತ್ವ ಅನರ್ಹತೆಯ ಕುರಿತಂತೆ ಹೈಕೋರ್ಟ್‌ನಲ್ಲಿ ಪ್ರಕರಣವಿದೆ ಎಂಬುದನ್ನು ವರಿಷ್ಠರ ಗಮನಕ್ಕೂ ತಂದಿದ್ದೆವು. ಆಗ ಸುಪ್ರೀಂಕೋರ್ಟ್‌ಗೆ ಹೋದರಾಯಿತು. ಅಷ್ಟರೊಳಗೆ ಅವಧಿಯೇ ಮುಗಿಯಲಿದೆ ಎಂದಿದ್ದರು. ಈಗ ಮೈಸೂರಿನ ಗೌರವಕ್ಕೆ ಧಕ್ಕೆ ಬಂದಿತು’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಪಾಲಿಕೆಯ ಜೆಡಿಎಸ್ ಕಾರ್ಪೊರೇಟರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವಿದ್ಯಮಾನ ಮೈಸೂರಿನ ಗೌರವಕ್ಕಷ್ಟೇ ಪೆಟ್ಟು ಕೊಟ್ಟಿಲ್ಲ. ರಾಜಕೀಯವಾಗಿ ಜೆಡಿಎಸ್‌ಗೂ ಸಾಕಷ್ಟು ಹಿನ್ನಡೆ ಮಾಡಿದೆ. ನೀವು ಈ ಬಗ್ಗೆ ಮಹೇಶಣ್ಣನ್ನ ಕೇಳಿ (ಶಾಸಕ ಸಾ.ರಾ.ಮಹೇಶ್‌). ಸಮರ್ಥರಿದ್ದರೂ ಆಯ್ಕೆ ಮಾಡದಿದ್ದುದಕ್ಕೆ ಅವರೇ ಕಾರಣ ಹೇಳಬೇಕಿದೆ’ ಎಂದು ಅವರು ಹೇಳಿದರು.

ಪಾಲಿಕೆಯ ಬಿಜೆಪಿ, ಕಾಂಗ್ರೆಸ್‌ನ ಬಹುತೇಕ ಸದಸ್ಯರು ಸಹ ಈ ವಿದ್ಯಮಾನ ಮೈಸೂರಿನ ಘನತೆಗೆ ಚ್ಯುತಿ ಉಂಟು ಮಾಡಿದೆ. ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆ. ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಮುಂದೆ ಏನಾಗುತ್ತೆ ಎಂಬುದನ್ನು ಕಾದು ನೋಡುತ್ತೇವೆ ಎಂದಿದ್ದಾರೆ.

ಪ್ರತಿಷ್ಠೆಯಾಗಿತ್ತು: ಫೆಬ್ರುವರಿಯಲ್ಲಿ ನಡೆದಿದ್ದ ಮೇಯರ್‌ ಚುನಾವಣೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದರು.

ಇದರಲ್ಲಿ ಕುಮಾರಸ್ವಾಮಿ ಮೇಲುಗೈ ಸಾಧಿಸಿದ್ದರೆ, ಸಿದ್ದರಾಮಯ್ಯಗೆ ತವರಿನಲ್ಲೇ ಭಾರಿ ಮುಖಭಂಗವಾಗಿತ್ತು. ಈ ಸೋಲನ್ನು ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪಾಳೆಯದ ನಾಯಕರು ನಡೆಸಿದ ಎಲ್ಲ ಕಸರತ್ತು ವಿಫಲವಾಗಿ ಮುಖಭಂಗಕ್ಕೀಡಾಗಿದ್ದರು. ಈಗಿನ ಬೆಳವಣಿಗೆ ಜೆಡಿಎಸ್‌ಗೆ ಹಿನ್ನಡೆಯಾದಂತಾಗಿದೆ.

ರುಕ್ಮಿಣಿ ಸದಸ್ಯತ್ವ ರದ್ದು
ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ಹೈಕೋರ್ಟ್‌ ತೀರ್ಪಿನನ್ವಯ (ಮೇ 26) ರದ್ದುಗೊಂಡಿದೆ. ಹೈಕೋರ್ಟ್‌ ತೀರ್ಪಿನ ಪ್ರತಿ ಮಂಗಳವಾರ ರಾತ್ರಿ ಪಾಲಿಕೆ ಕಚೇರಿಗೆ ತಲುಪಿದೆ ಎಂಬುದು ಮೂಲಗಳಿಂದ ಖಚಿತ ಪಟ್ಟಿದೆ.

ತೀರ್ಪಿನ ಪ್ರತಿಯೊಂದಿಗೆ ಬುಧವಾರ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌ ಅವರನ್ನು ಭೇಟಿ ಮಾಡಿದ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್‌, ಯಾವ ಕ್ರಮ ತೆಗೆದುಕೊಳ್ಳಬೇಕು? ಎಂಬ ಕುರಿತಂತೆ ಚರ್ಚೆ ನಡೆಸಿ, ಸಲಹೆ ಪಡೆದರು ಎಂಬುದು ಗೊತ್ತಾಗಿದೆ.

ಚರ್ಚೆಯ ಬಳಿಕ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಶಿಲ್ಪಾನಾಗ್‌, ‘ಮೇಯರ್‌ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾಗಿದೆ. ಜೂನ್‌ 11ಕ್ಕೆ ಮೇಯರ್ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತರು ಘೋಷಿಸಿದ್ದಾರೆ. ಅಲ್ಲಿಯ ತನಕವೂ ಉಪ ಮೇಯರ್‌ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ’ ಎಂದು ಹೇಳಿದರು.

ಕೊನೆ ಕ್ಷಣದವರೆಗೂ ಅವಕಾಶ: ಪ್ರಾದೇಶಿಕ ಆಯುಕ್ತ
‘ಹೈಕೋರ್ಟ್‌ ತೀರ್ಪಿನನ್ವಯ ಮೇಯರ್‌ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ಅನರ್ಹಗೊಂಡಿದೆ. ನಿಯಮಾವಳಿಯಂತೆ ಕಾನೂನು ಕ್ರಮ ಜರುಗಿಸಲಾಗಿದೆ. ಉಪ ಮೇಯರ್‌ಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಿರುವೆ. ಜೂನ್‌ 11ಕ್ಕೆ ಮೇಯರ್‌ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದ್ದೇನೆ’ ಎಂದು ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚುನಾವಣೆ ನಡೆಯುವ ಕೊನೆ ಕ್ಷಣದವರೆಗೂ ಹೈಕೋರ್ಟ್‌ ತೀರ್ಪಿಗೆ ತಡೆಯಾಜ್ಞೆ ತರಲು ಅವಕಾಶವಿದೆ. ಸುಪ್ರೀಂಕೋರ್ಟ್‌ನ ಸೂಚನೆ, ಆದೇಶ, ತೀರ್ಪನ್ನು ಪಾಲಿಸಲೇಬೇಕು. ಒಂದು ವೇಳೆ ಹೊಸ ಮೇಯರ್‌ ಆಯ್ಕೆಯ ಘೋಷಣೆಗೂ ಮುನ್ನವೇ ಹೈಕೋರ್ಟ್‌ ತೀರ್ಪಿಗೆ ತಡೆಯಾಜ್ಞೆ ತಂದರೆ, ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವವೂ ಉಳಿಯಲಿದೆ. ಮೇಯರ್‌ ಸ್ಥಾನವೂ ಮುಂದುವರೆಯಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ತರಾತುರಿಯ ನಿರ್ಧಾರ: ಮಾದೇಗೌಡ
‘ಹೈಕೋರ್ಟ್‌ ತೀರ್ಪಿನ ಅಧಿಕೃತ ಪ್ರತಿ ಇನ್ನೂ ನನಗೆ ಸಿಕ್ಕಿಲ್ಲ. ತರಾತುರಿಯಲ್ಲಿ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ಈ ಸಂದರ್ಭ ಏನಾದರೂ ಮಾತನಾಡಿದರೆ, ಸರ್ಕಾರದ ವಿರುದ್ಧ, ಅಧಿಕಾರಿಗಳ ವಿರುದ್ಧ ಹರಿಹಾಯ್ದಂತಾಗುತ್ತದೆ’ ಎಂದು ರುಕ್ಮಿಣಿ ಮಾದೇಗೌಡ ಪತಿ, ಜಿಲ್ಲಾ ಪಂಚಾಯಿತಿಯ ನಿಕಟಪೂರ್ವ ಸದಸ್ಯ ಮಾದೇಗೌಡ ತಿಳಿಸಿದರು.

‘ತೀರ್ಪು ಪ್ರಕಟಗೊಂಡ ದಿನದಿಂದಲೂ ನಮ್ಮ ವಕೀಲರ ಜೊತೆ ಸಂಪರ್ಕದಲ್ಲಿರುವೆ. ಸುಪ್ರೀಂಕೋರ್ಟ್‌ನ ಮೊರೆಯೊಕ್ಕಲು ನಿರ್ಧರಿಸಿರುವೆ. ನೋಡೋಣ. ಯಾರನ್ನೂ ದೂರಲ್ಲ. ದೇವರು ಬರೆದ ರೀತಿ ಆಗುತ್ತೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

ಆಯ್ಕೆಯಿಂದ ಅನರ್ಹದವರೆಗೂ...

* ಪಾಲಿಕೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ರುಕ್ಮಿಣಿ ಮಾದೇಗೌಡ ನಗರದ ಯರಗನಹಳ್ಳಿ (36ನೇ) ವಾರ್ಡ್‌ನಿಂದ ಬಿಸಿಎಂ ‘ಎ’ ಮಹಿಳಾ ಮೀಸಲಾತಿಯಡಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ದಾಖಲಿಸಿದ್ದರು.

* ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ರಜಿನಿ ಅಣ್ಣಯ್ಯ ಫಲಿತಾಂಶ ಘೋಷಣೆ ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದರು. ರುಕ್ಮಿಣಿ ನಾಮಪತ್ರ ಸಲ್ಲಿಸುವಾಗ ಆದಾಯಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿ, ಚುನಾವಣಾ ತಕರಾರಿನ ಅರ್ಜಿ ಸಲ್ಲಿಸಿದ್ದರು.

* ಅರ್ಜಿ ಪುರಸ್ಕರಿಸಿದ್ದ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ರುಕ್ಮಿಣಿ ಅವರ ಸದಸ್ಯತ್ವ ರದ್ದುಪಡಿಸಿ 2020ರ ಡಿ.14ರಂದು ಆದೇಶಿಸಿತ್ತು.‌

* ಆದೇಶ ಪ್ರಶ್ನಿಸಿ ರುಕ್ಮಿಣಿ ಮಾದೇಗೌಡ ಡಿ.23ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ತಡೆಯಾಜ್ಞೆ ಸಿಕ್ಕಿತ್ತು.

* ಫೆ.24ರಂದು ರುಕ್ಮಿಣಿ ಮೇಯರ್‌ ಆಗಿ ಆಯ್ಕೆಯಾಗಿದ್ದರು. ಇದೇ ದಿನ ಪ್ರಕರಣದ ವಿಚಾರಣೆ ಆರಂಭವಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಪೀಠ, ಮೇ 26ರಂದು ಸದಸ್ಯತ್ವ ಅನರ್ಹಗೊಳಿಸುವ ಜೊತೆಗೆ, ವಾರ್ಡ್‌ನಲ್ಲಿ ಹೊಸದಾಗಿ ಚುನಾವಣೆ ನಡೆಸುವಂತೆ ತೀರ್ಪು ನೀಡಿತ್ತು.

* ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು