ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ‘ಮರಳಿ ಬರುವೆವು ನಾವು’ ಎನ್ನುತ್ತಾ ಊರಿಗೆ ಹೊರಟ ವಲಸೆ ಕಾರ್ಮಿಕರು

ಸಾಂಸ್ಕೃತಿಕ ನಗರಯಿಂದ ತಾಯ್ನಾಡಿನತ್ತ ಹೊರಟ 1,520 ಮಂದಿ
Last Updated 17 ಮೇ 2020, 8:09 IST
ಅಕ್ಷರ ಗಾತ್ರ

ಮೈಸೂರು: ಮಣಭಾರದ ಬ್ಯಾಗುಗಳನ್ನು ಹೊತ್ತು ಬಿರುಬಿಸಿಲಿನಲ್ಲಿ ಬಸಳಿದರೂ ಸೈರಿಸಿಕೊಂಡು ಭಾರವಾದ ಹೃದಯದಿಂದ ಅವರು ರೈಲನ್ನೇರಿದರು. ಈ ವೇಳೆ ಮಾತಿಗಿಳಿದ ಹಲವರು ‘ಮರಳಿ ಬರುವೆವು ನಾವು’ ಎಂದು ನಗುತ್ತಲೇ ಕೈಬೀಸಿದರು. ಅನ್ನ ನೀಡಿದ ಮೈಸೂರಿನ ಮಣ್ಣಿಗೆ ಕೆಲವರು ಕೈಮುಗಿದರು.

ಈ ಎಲ್ಲ ಭಾವನಾತ್ಮಕ ದೃಶ್ಯಗಳು ಇಲ್ಲಿನ ಅಶೋಕಪುರಂ ರೈಲುನಿಲ್ದಾಣದಲ್ಲಿ ಶನಿವಾರ ಕಂಡುಬಂದವು. ಉತ್ತರಪ್ರದೇಶದಿಂದ ಬಂದು ಇಲ್ಲಿ ಕೆಲಸ ಮಾಡುತ್ತಿದ್ದ 1,520 ಮಂದಿ ವಲಸಿಗ ಕಾರ್ಮಿಕರು ₹ 895 ದರ ಪಾವತಿಸಿ ತಮ್ಮ ಊರಿನತ್ತ ಸ್ವಾಭಿಮಾನದಿಂದಲೇ ಹೆಜ್ಜೆ ಹಾಕಿದರು.

ಟಿಕೆಟ್ ದರ ದುಬಾರಿ ಅಲ್ಲವೇ ಎಂಬ ಪ್ರಶ್ನೆಗೆ ಬಹುತೇಕ ಮಂದಿ ಹೌದು ಎಂದರು. ‘ಸಂಕಷ್ಟ ಕಾಲದಲ್ಲಿ ಎಲ್ಲವನ್ನೂ ಉಚಿತ ಕೊಡಿ ಎಂದು ಹೇಗೆ ಕೇಳುವುದು ಸ್ವಾಮಿ, ತಿಂಗಳುಗಟ್ಟಲೆ ನಮಗೆ ಅನ್ನ ನೀಡಿದ್ದಾರೆ, ದಿನಸಿ ನೀಡಿದ್ದಾರೆ. ಹೀಗಿರುವಾಗ, ಉಚಿತವಾಗಿ ಅಲ್ಲಿಗೆ ಕಳುಹಿಸಿಕೊಡಿ ಎಂದು ಕೇಳುವುದು ಸರಿಯಲ್ಲ. ಸಾಲ ಮಾಡಿ ಹಣ ತಂದಿದ್ದೇನೆ. ಮರಳಿ ಬಂದು ಸಾಲ ತೀರಿಸುತ್ತೇನೆ. ಇಲ್ಲಿನ ಜನ ನನ್ನನ್ನು ನಂಬಿ ಸಾಲ ನೀಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು ರಾಮಲಾಲ್.

ಸಾಲು ಸಾಲು ಜನ: ನೋಂದಣಿ ಮಾಡಿಕೊಂಡಿದ್ದ ಕಾರ್ಮಿಕರನ್ನು ಜಿಲ್ಲಾಡಳಿತದ ವತಿಯಿಂದ ಬಸ್‌ಗಳಲ್ಲಿ ಕರೆ ತರಲಾಯಿತು. ಒಮ್ಮೆಗೆ ಎಲ್ಲ ಬಸ್‌ಗಳೂ ಬಂದಿದ್ದರಿಂದ ಜನದಟ್ಟಣೆ ಅಧಿಕವಾಯಿತು. ನಿರೀಕ್ಷಣಾ ಸ್ಥಳದಲ್ಲಿ ಪೆಂಡಾಲ್‌ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು.

ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಹಣ ಕೊಟ್ಟು ಟಿಕೆಟ್ ತೆಗೆದುಕೊಂಡರು. ಇವರಿಗೆ ಜಿಲ್ಲಾಡಳಿತ ಉಚಿತವಾಗಿ ಆಹಾರ ಮತ್ತು ನೀರನ್ನು ನೀಡಿತು. ತಮ್ಮ ತಮ್ಮ ಲಗೇಜುಗಳನ್ನು ತೆಗೆದುಕೊಂಡು ನಿಲ್ದಾಣ ಪ್ರವೇಶಿಸಿದ ಇವರನ್ನು ರೈಲ್ವೆ ಅಧಿಕಾರಿಗಳು ಶ್ರಮಿಕ್ ವಿಶೇಷ ರೈಲಿನಲ್ಲಿ ಕೂರಿಸಿದರು.

ರೈಲಿನಲ್ಲಿ 20 ಸ್ಲೀಪರ್ ಹಾಗೂ 2 ಸಾಮಾನ್ಯ ದರ್ಜೆ ಬೋಗಿಗಳು ಇದ್ದವು. ಪ್ರತಿ ಬೋಗಿಯಲ್ಲೂ 80 ಮಂದಿಯನ್ನು ಕೂರಿಸಲಾಗಿತ್ತು. ಸಾಬೂನು ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು.

‘ಚೇನ್‌’ ಎಳೆಯದಂತೆ ನಿಗಾ: ರೈಲು ಉತ್ತರ ಪ್ರದೇಶ ತಲುಪುತ್ತಿದ್ದಂತೆ ತಮ್ಮ ಊರು ಸಿಕ್ಕಿದ ಕೂಡಲೇ ಪ್ರಯಾಣಿಕರು ‘ಚೇನ್’ ಎಳೆದು ರೈಲನ್ನು ನಿಲ್ಲಿಸಿ, ತಮ್ಮ ಊರಿಗೆ ಹೊರಡುವ ಸಂಭವ ಹೆಚ್ಚಿದೆ. ಹಾಗಾಗಿ, ಪ್ರತಿ ಬೋಗಿಯಲ್ಲೂ ಇಬ್ಬರು ಪೊಲೀಸರನ್ನು ನಿಯೋಜಿಸಿ, ಎಲ್ಲ ಬಾಗಿಲುಗಳನ್ನು ಒಳಗಿಂದ ಲಾಕ್‌ ಮಾಡಿರಲಾಗುತ್ತದೆ. ಯಾರೂ ಸುಮ್ಮನೇ ಚೇನ್‌ ಎಳೆಯದಂತೆ ನಿಗಾ ವಹಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ರೈಲ್ವೆ ರಕ್ಷಣಾ ದಳದ ಸಿಬ್ಬಂದಿಯೊಬ್ಬರು ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಸಿಪಿ ಡಾ.ಪ್ರಕಾಶ್‌ಗೌಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT