ಭಾನುವಾರ, ಜೂನ್ 7, 2020
27 °C
ಜಿಲ್ಲಾಧಿಕಾರಿಗೆ ಅಭಿನಂದನೆ

ಕೊರೊನಾ ನಿಯಂತ್ರಣದಲ್ಲಿ ಮಾದರಿಯದ ಮೈಸೂರು: ಬಸವರಾಜ ಬೊಮ್ಮಾಯಿ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ಸೋಂಕು ಸಮುದಾಯಕ್ಕೆ ಹರಡುವುದನ್ನು ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಮೈಸೂರು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

ಇಲ್ಲಿನ ಸಾಮ್ರಾಟ್ ಕಲ್ಯಾಣಮಂಟಪದಲ್ಲಿ ಶುಕ್ರವಾರ ನಡೆದ ಕೆ.ಆರ್.ವಿಧಾನಸಭಾ ಕ್ಷೇತ್ರದ ಜನರಿಗೆ ಆಯುಷ್ ಇಲಾಖೆಯ ಸಹಯೋಗದೊಡನೆ ‘ಆಯುಷ್ ಕಿಟ್’ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರಂಭದಿಂದಲೂ ಇಲ್ಲಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಕೈಗೊಂಡ ಕ್ರಮಗಳನ್ನು ಗಮನಿಸುತ್ತಾ ಬಂದಿದ್ದೇನೆ. ನಿಜಕ್ಕೂ ಅತ್ಯುತ್ತಮ ಕ್ರಮಗಳನ್ನು ಜನರಿಗೆ ತೊಂದರೆಯಾಗದ ರೀತಿ ಕೈಗೊಂಡರು’ ಎಂದು ಅವರು ಜಿಲ್ಲಾಧಿಕಾರಿಯನ್ನು ಅಭಿನಂದಿಸಿದರು.

ಕೊರೊನಾ ಆಪತ್ತನ್ನು ಅವಕಾಶವನ್ನಾಗಿಸಿಕೊಳ್ಳಬೇಕು. ಭಾರತದ ಮೇಲೆ ಯಾವಾಗ ಆಪತ್ತು ಬಂದಿದೆಯೋ ಆವಾಗಲೆಲ್ಲ ಭಾರತ ಅವಕಾಶವನ್ನಾಗಿ ಬಳಸಿಕೊಂಡು ಪುಟಿದೆದ್ದಿದೆ ಎಂದು ಹೇಳಿದರು.

‘ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿದೆ. ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡ ಕ್ರಮಗಳು ಹಾಗೂ ನಮ್ಮ ದೇಶದ ಜನರ ರೋಗ ನಿರೋಧಕ ಶಕ್ತಿ ಕಾರಣ’ ಎಂದು ವಿಶ್ಲೇಷಿಸಿದರು.

ಆಯುಷ್ ಇಲಾಖೆಯ ಸೂಚನೆಗಳನ್ನು ಅನುಸರಿಸಿದರೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗಾಗಿ, ಶಾಸಕ ಎಸ್.ಎ.ರಾಮದಾಸ್ ಅವರು ಇಲಾಖೆಯ ಸಹಯೋಗ ಪಡೆದು ತಮ್ಮ ಕ್ಷೇತ್ರದ ಜನತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮುಂದಾಗಿರುವುದು ಮೆಚ್ಚುವಂತದ್ದು ಎಂದರು.

ಸಾಂಕೇತಿಕವಾಗಿ ಕೆಲವು ಮಂದಿಗೆ ಸಚಿವರು ಆಯುಷ್ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ 97 ವರ್ಷದ ಮಾರಕ್ಕ ಎಂಬುವವರು ವೇದಿಕೆಯನ್ನೇರಿ ಸ್ವೀಕರಿಸಿದ್ದು ವಿಶೇಷ ಎನಿಸಿತು.

₹ 1.18 ಕೋಟಿ ಹಣವನ್ನು ಕೆ.ಆರ್.ಕ್ಷೇತ್ರದ ವತಿಯಿಂದ ಪ್ರಧಾನಮಂತ್ರಿ ಕೋವಿಡ್ ಪರಿಹಾರ ನಿಧಿಗೆ ನೀಡಲಾಗಿದೆ ಎಂದರು.

ಸರ್ಕಾರದ ‘ಆಯುಷ್‌ ಕಿಟ್‌’ನ ವೆಚ್ಚ ಭರಿಸಲಿದೆ
ಶಾಸಕ ಎಸ್.ಎ.ರಾಮದಾಸ್ ಅವರು ನೀಡಿದ ಪ್ರಸ್ತಾವವನ್ನು ಒಪ್ಪಿದ ರಾಜ್ಯ ಸರ್ಕಾರ ಆಯುಷ್ ಕಿಟ್‌ 85 ಸಾವಿರ ಮಂದಿಗೆ ಆಯುಷ್ ಕಿಟ್ ವಿತರಿಸಲು ಸೂಚನೆ ನೀಡಿತು. ಇದರ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಆಯುಷ್ ಇಲಾಖೆಯ ಮೂಲಗಳು ತಿಳಿಸಿವೆ.

ಮೇಯರ್ ತಸ್ನಿಂ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ಡಿಸಿಪಿ ಡಾ.ಪ್ರಕಾಶ್‌ಗೌಡ, ಆಯುಷ್ ಇಲಾಖೆಯ ಉಪನಿರ್ದೇಶಕಿ ಡಾ.ಸೀತಾಲಕ್ಷ್ಮೀ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು