ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಕುಸಿದ ಅಂಬಾವಿಲಾಸ ಚಾವಣಿ

ನಾಡಹಬ್ಬಕ್ಕೆ ದಿನಗಣನೆ, ಶೀಘ್ರ ದುರಸ್ತಿಗೆ ಜನರ ಆಗ್ರಹ
Last Updated 23 ಸೆಪ್ಟೆಂಬರ್ 2019, 20:14 IST
ಅಕ್ಷರ ಗಾತ್ರ

ಮೈಸೂರು: ನಗರದಾದ್ಯಂತ ಭಾನುವಾರ ರಾತ್ರಿಯಿಡೀ ಸುರಿದ ಮಳೆಗೆ ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಚಾವಣಿಯ ಒಂದು ಅಂಚು ಕುಸಿದಿದೆ. ನಾಡಹಬ್ಬಕ್ಕೆ ಕೆಲವೇ ದಿನಗಳಿದ್ದು ಬಿರುಸಿನ ಸಿದ್ಧತೆ ನಡೆಯುತ್ತಿರುವಾಗ ಹೀಗಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಸೋಮವಾರ ಬೆಳಿಗ್ಗೆ 9.30ರ ಅಂದಾಜಿಗೆ, ಸೆಸ್ಕ್‌ ಕಚೇರಿಯ ಹಿಂಬದಿ ಇರುವ ಶೌಚಾಲಯದ ಮೇಲಂತಸ್ತಿನ ಚಾವಣಿ ಕುಸಿದಿದ್ದು ಅರಮನೆಯ ಸಿಬ್ಬಂದಿ ಮಣ್ಣನ್ನು ತೆರವುಗೊಳಿಸಿದರು.

’ಅರಮನೆಯ ಚಾವಣಿ ಮತ್ತು ಗೋಡೆ ಕೆಲವೆಡೆ ಬಿರುಕು ಬಿಟ್ಟಿದ್ದು, ಅಲ್ಲೆಲ್ಲ ಪ್ಲಾಸ್ಟರ್‌ ಮಾಡಲಾಗಿದೆ. ಭಾನುವಾರ ಸುರಿದ ಮಳೆಯಿಂದಾಗಿ ಅರಮನೆಯ ಎಡಭಾಗದ ಚಾವಣಿಯಲ್ಲಿ ತ್ರಿಕೋನಾಕಾರದ ವಿನ್ಯಾಸ ಹೊಂದಿರುವಲ್ಲಿ ಒಂದು ಅಂಚು ಕುಸಿದಿದೆ‘ ಎಂದು ಅರಮನೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

’ನೂರು ವರ್ಷ ಹಳೆಯ ಕಟ್ಟಡ ಸುಮಾರು 147 ಅಡಿ ಎತ್ತರವಿದ್ದು, ದಿಢೀರನೆ ಮೇಲೆ ಹತ್ತಿ ದುರಸ್ತಿ ಕಾರ್ಯ ಮಾಡಲು ಸಾಧ್ಯವಿಲ್ಲ. ಕೆಲವು ತಿಂಗಳಿಂದ ಮಳೆ ಸುರಿಯುತ್ತಲೇ ಇರುವುದರಿಂದ ಕೆಲವೆಡೆ ಶೀತ ಹಿಡಿದಿರುತ್ತದೆ. ಏನಾದರೂ ಕಾಮಗಾರಿ ನಡೆಸಲು ಮುಂದಾದರೆ ಇನ್ನೂ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಅದ್ದರಿಂದ ತಜ್ಞರೊಂದಿಗೆ ಚರ್ಚಿಸಿ ಅಗತ್ಯ ರೂಪುರೇಷೆ ರಚಿಸಿ ಕ್ರಮಕೈಗೊಳ್ಳಬೇಕು‘ ಎಂದು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ತಿಳಿಸಿದರು.

’ಇಂಡೋ ಸಾರ್ಸೆನಿಕ್‌ ಶೈಲಿಯಲ್ಲಿ ಅಂಬಾವಿಲಾಸ ಅರಮನೆಯನ್ನು ಬಹು ವ್ಯವಸ್ಥಿತವಾಗಿ ಕಟ್ಟಲಾಗಿದೆ. ಚಾವಣಿಯ ಮೇಲೆ ಏರಿಳಿತದ ಮಾದರಿಯಲ್ಲಿ ಗಾರೆ ಹಾಕಲಾಗಿದೆ. ನೀರು ಸರಾಗವಾಗಿ ಹರಿದು ಹೋಗಲು ದೋಣಿಗಳನ್ನು ಅಳವಡಿಸಲಾಗಿದೆ. ಆದ್ದರಿಂದ ಸೋರಲು ಸಾಧ್ಯವೇ ಇಲ್ಲ. ಧಾರಾಕಾರ ಮಳೆಯಾಗಿ ದೋಣಿಯೂ ತುಂಬಿದಾಗ, ಹೆಚ್ಚುವರಿಯಾದ ನೀರು ಕಂಬಗಳ ಬಳಿ ಹೊರ ಹೋಗುವಂತೆ ವಿನ್ಯಾಸ ಮಾಡಲಾಗಿದೆ. ಅದನ್ನೇ ಕೆಲವರು ಸೋರುತ್ತಿದೆ ಎಂದು ಭಾವಿಸಿದ್ದಾರೆ‘ ಎಂದು ಅವರು ತಿಳಿಸಿದರು.

’ರಾಜವಂಶಸ್ಥರು ವಾಸ ಇರುವ ಭಾಗವೂ ಸೇರಿದಂತೆ ಅರಮನೆ ಮಂಡಳಿಗೆ ಸೇರಿದ ಭಾಗದಲ್ಲಿ ಪ್ರತಿವರ್ಷದ ಮಳೆಗಾಲದಲ್ಲೂ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗುತ್ತಿವೆ. ಅಂತಹ ಸಂದರ್ಭದಲ್ಲಿ ಇಬ್ಬರೂ ಸೇರಿ ಅಗತ್ಯ ಕ್ರಮಕೈಗೊಳ್ಳುತ್ತಲೇ ಇದ್ದೇವೆ. ಅರಮನೆ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಶಾಶ್ವತ ಕ್ರಮಕ್ಕೂ ಮುಂದಾಗುವಂತಿಲ್ಲ. ಗಂಭೀರ ಪ್ರಮಾಣದ ಸಮಸ್ಯೆಗಳು ಈವರೆಗೂ ಕಂಡುಬಂದಿಲ್ಲ‘ ಎಂದು ಸುಬ್ರಹ್ಮಣ್ಯ ತಿಳಿಸಿದರು.

’ಕೆಲ ವರ್ಷಗಳಿಂದ ಅರಮನೆಯ ದರ್ಬಾರ್‌ ಹಾಲ್‌ ಮತ್ತು ಕಲ್ಯಾಣ ಮಂಟಪದ ಗೋಪುರಗಳಿಂದ ಮಳೆ ನೀರು ಸೋರುತ್ತಿದೆ. ಗಾಜುಗಳು ಒಡೆದಿದ್ದು ಇನ್ನೂ ದುರಸ್ತಿಯಾಗಿಲ್ಲ. ಈ ನಡುವೆ ಚಾವಣಿಯೂ ಕುಸಿದಿದೆ. ಒಂದು ವೇಳೆ ಅರಮನೆಯ ಪ್ರಮುಖ ಭಾಗವೇ ಕುಸಿದರೆ ಯಾರು ಹೊಣೆ? ವಿವಾದ ನ್ಯಾಯಾಲಯದಲ್ಲಿದ್ದರೂ ದುರಸ್ತಿ ಮಾಡಬಾರದು ಎಂದು ಅದು ಹೇಳಿಲ್ಲ. ತಜ್ಞರ ಸಮಿತಿ ಕೇವಲ ಸಲಹೆಗಳನ್ನು ಕೊಡುತ್ತದೆಯೇ ಹೊರತು ದುರಸ್ತಿ ಮಾಡುವುದಿಲ್ಲ. ಆದ್ದರಿಂದ ಶೀಘ್ರವೇ ಅಗತ್ಯಕ್ರಮಕೈಗೊಳ್ಳಬೇಕು‘ ಎಂದು ಇತಿಹಾಸ ತಜ್ಞ ನಂಜರಾಜ ಅರಸ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT