ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರದ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ 

Last Updated 3 ಡಿಸೆಂಬರ್ 2019, 10:11 IST
ಅಕ್ಷರ ಗಾತ್ರ

ಮೈಸೂರು: ಹೈದರಾಬಾದ್‌ನಲ್ಲಿ ಈಚೆಗೆ ನಡೆದ ಸಾಮೂಹಿಕ ಅತ್ಯಾಚಾರದ ವಿರುದ್ಧ ನಗರದಲ್ಲಿ ಮಂಗಳವಾರ ವ್ಯಾಪಕ ಪ್ರತಿಭಟನೆ ವ್ಯಕ್ತವಾಯಿತು.

ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ರಾಮಸ್ವಾಮಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರಚಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಪಿಯುಸಿಎಲ್, ಅಖಿಲ ಭಾರತ ಪ್ರಜಾ ರಂಗ, ಶಕ್ತಿಧಾಮ, ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್, ಸಮತಾ ಅಧ್ಯಯನ ಕೇಂದ್ರ, ಎಐಡಿಎಸ್‌ಒ, ಪ್ರಾಜೆಕ್ಟ್ ಪ್ರೇರೇಪಣಾ, ಧ್ವನಿ ಮಹಿಳಾ ಒಕ್ಕೂಟ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಸೇರಿದಂತೆ ಇನ್ನೂ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗೆ ಕೈಜೋಡಿಸಿದರು.

ಇದರ ಜತೆಗೆ, ಪ್ರಗತಿಪರ ಚಿಂತಕರು, ಸಾಹಿತಿಗಳು, ಸಮಾಜ ಸೇವಕರು, ಸ್ವಯಂಸೇವಕರು, ಲಕ್ಷ್ಮೀಪುರಂ ಕಾಲೇಜು ಹಾಗೂ ಇತರೆ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ತಮ್ಮ ದನಿಯನ್ನು ಸೇರಿಸುವ ಮೂಲಕ ಪ್ರತಿಭಟನೆಗೆ ಬಲ ತುಂಬಿದರು.

ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕಿ, ಅಶ್ಲೀಲ ಸಾಹಿತ್ಯ, ವಿಡಿಯೊವನ್ನು ಬೆಂಕಿ ಹಾಕಿ, ಮಹಿಳೆಗೆ ರಕ್ಷಣೆ ಕೊಡಿ ... ಹೀಗೆ ಅನೇಕ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರ ಹಾಕಿದರು.

ತ್ವರಿತಗತಿಯ ನ್ಯಾಯಾಲಯ ಸ್ಥಾಪಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಮತ್ತೆ ಇಂತಹ ಘಟನೆ ಮರುಕಳಿಸದಂತೆ ತಡೆಯಬೇಕು ಎಂದು ಆಗ್ರಹಿಸಿದರು.

ಎಐಡಿಐಒನ ರಾಜ್ಯ ಘಟಕದ ಅಧ್ಯಕ್ಷೆ ಉಮಾದೇವಿ, ಪಿಯುಸಿಎಲ್‌ ನ ಲಕ್ಷ್ಮೀನಾರಾಯಣ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಸರಸ್ವತಿ,ಎಐಡಿಎಸ್‌ಒನ ಚಂದ್ರಕಲಾ,ಧ್ವನಿ ಮಹಿಳಾ ಒಕ್ಕೂಟ ವಸಂತಾ, ಸಾಹಿತಿಗಳಾದ ಸಿ.ಎನ್.ಮುಕ್ತಾ, ಜಿ.ಪಿ.ಬಸವರಾಜು, ಪಂಡಿತಾರಾಧ್ಯ, ಸಿಪಿಎಂ ಕಾರ್ಯದರ್ಶಿ ಕೆ.ಬಸವರಾಜು, ಎಐಯುಟಿಯುಸಿಯ ಚಂದ್ರಶೇಖರಮೇಟಿ, ಮೌಲಾನ ಅಕ್ಮಲ್, ಪ್ರೊ.ಕಾಳಚನ್ನೇಗೌಡ, ಹಾಗೂ ಇತರರು ಇದ್ದರು.

ಕರ್ನಾಟಕ ಪಶು ವೈದ್ಯಕೀಯ ಸಂಘದ ನೇತೃತ್ವದಲ್ಲಿ ಪಶುವೈದ್ಯರು ನಗರದ ನಾರಾಯಣಶಾಸ್ತ್ರಿ ರಸ್ತೆ, ದೇವರಾಜಅರಸ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಜಾಥಾ ನಡೆಸಿದರು. ಗಂಧದಗುಡಿ ಫೌಂಡೇಷನ್‌ನ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT