ಮಂಗಳವಾರ, ನವೆಂಬರ್ 12, 2019
28 °C

ಮೈಸೂರಿನಲ್ಲಿ ಮುಂದುವರಿದ ಚಿತ್ತಾ ಮಳೆ

Published:
Updated:
Prajavani

ಮೈಸೂರು: ನಗರದಲ್ಲಿ ಶುಕ್ರವಾರ ರಾತ್ರಿ ಹಲವೆಡೆ ಧಾರಾಕಾರ ಮಳೆ ಸುರಿಯಿತು. ಒಮ್ಮೆಗೆ ಬಂದ ಮಳೆ ಅತಿ ಜೋರಾಯಿತ್ತು. ಕೆಲವೆಡೆ ರಸ್ತೆ ಕಾಣದಷ್ಟು ಹನಿಗಳು ದಟ್ಟವಾಗಿ ಬೀಳುತ್ತಿದ್ದವು.

ಕಳೆದೊಂದು ವಾರದಿಂದ ಬೀಳುತ್ತಿರುವ ಮಳೆಯಿಂದ ಈಗಾಗಲೇ ರೈತಾಪಿ ಸಮುದಾಯದಲ್ಲಿ ಸಮಾಧಾನ ಮೂಡಿಸಿದೆ. ಹಿಂಗಾರು ಬೆಳೆಗಳು ಉತ್ತಮವಾಗಿ ಇಳುವರಿ ನೀಡಬಹುದು ಎಂಬ ಆಶಾಭಾವನೆ ಮೂಡಿಸಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಅತ್ಯಧಿಕ ಮಳೆ 3.3 ಸೆಂಟಿಮೀಟರ್‌ನಷ್ಟು ಸುರಿದಿದೆ. ಇದನ್ನು ಬಿಟ್ಟರೆ ಮೈಸೂರಿನ ದೇವಲಾಪುರದ ಆಸುಪಾಸಿನಲ್ಲಿ 2.6 ಸೆ.ಮೀನಷ್ಟು ಮಳೆಯಾಗಿದೆ. ಉಳಿದ ಎಲ್ಲ ತಾಲ್ಲೂಕುಗಳಲ್ಲೂ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ನಗರದ ಸಿದ್ದಾರ್ಥ ಬಡಾವಣೆಯಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ಆತಂಕ ಸೃಷ್ಟಿಸಿತು. ಸ್ಥಳಕ್ಕೆ ಬಂದ ಸೆಸ್ಕ್‌ ತಂಡವು ಇದನ್ನು ತೆರವುಗೊಳಿಸಿತು. ಉಳಿದಂತೆ, ನಗರದ ಕೆಲವೆಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿತು. ರಸ್ತೆಗಳಲ್ಲಿ ಮೊಟಕಾಲುದ್ದ ನೀರು ಹರಿಯುತ್ತಿದ್ದುದ್ದರಿಂದ ವಾಹನ ಸವಾರರು ಪರದಾಡಿದರು.

ಪ್ರತಿಕ್ರಿಯಿಸಿ (+)