ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆಯತ್ತ ಮೈಸೂರು ಪ್ರವಾಸೋದ್ಯಮ

ಚಾಮುಂಡಿಬೆಟ್ಟ, ಅರಮನೆ ವೀಕ್ಷಣೆಗೆ ಮುಗಿಬಿದ್ದ ಪ್ರವಾಸಿಗರು
Last Updated 30 ಜುಲೈ 2021, 8:24 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ಲಾಕ್‌ಡೌನ್‌ ತೆರವಿನ ನಂತರ ಮೈಸೂರಿನಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದೆ. ಅರಮನೆ, ಮೃಗಾಲಯ ಹಾಗೂ ಚಾಮುಂಡಿಬೆಟ್ಟದಲ್ಲಿ ಪ್ರವಾಸಿಗರು ಹೆಚ್ಚು ಕಾಣಿಸುತ್ತಿದ್ದಾರೆ.

ಜುಲೈ 5ರಿಂದ ಅವಕಾಶ ನೀಡಿದ ನಂತರ ಅರಮನೆ ಆಕರ್ಷಣೆ ಹೆಚ್ಚಿದೆ. ದೀಪಾಲಂಕಾರ ಹಾಗೂ ಧ್ವನಿ–ಬೆಳಕು ಆರಂಭವಾಗಿರುವುದರಿಂದ ಪ್ರವಾಸೋದ್ಯಮ ಇನ್ನಷ್ಟು ಹೊಳೆಯಲಿದೆ.

ಹಿಂದಿನ ವರ್ಷದ ಲಾಕ್‌ಡೌನ್‌ ತೆರವಿನ ನಂತರ ಅರಮನೆಗೆ ಬರುವವರ ಸಂಖ್ಯೆ ಸಾವಿರ ದಾಟಲು ಒಂದು ತಿಂಗಳು ಬೇಕಾಗಿತ್ತು. ಆದರೆ, ಈ ಬಾರಿ ನಾಲ್ಕೇ ದಿನಕ್ಕೆ ಸಾವಿರ ದಾಟಿದೆ.

‘ಶನಿವಾರ, ಭಾನುವಾರ 3 ರಿಂದ 5 ಸಾವಿರ ಮಂದಿ ಬರುತ್ತಾರೆ. ಬೇರೆ ದಿನಗಳಲ್ಲಿ ಅಷ್ಟು ಸಂಖ್ಯೆ ಕಾಣುವುದಿಲ್ಲ. ಕೋವಿಡ್‌ ಸಂಕಷ್ಟಕ್ಕೂ ಮುಂಚೆ ವಾರಾಂತ್ಯದ ದಿನಗಳಲ್ಲಿ 10 ರಿಂದ 12 ಸಾವಿರ ಪ್ರವಾಸಿಗರು ಬರುತ್ತಿದ್ದರು. ಖುಷಿಯ ವಿಚಾರವೆಂದರೆ ಪರಿಸ್ಥಿತಿ ಈ ಬಾರಿ ಸುಧಾರಿಸಿದೆ. ಮೂರನೇ ಅಲೆ ಬರದಿದ್ದರೆ ಪ್ರವಾಸಿಗರು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ಗುರುವಾರ ಮಾಹಿತಿ ನೀಡಿದರು.

‘ಅರಮನೆಯಲ್ಲಿ ಮೂರು ಬಾರಿ ಸ್ಯಾನಿಟೈಸ್‌ ಮಾಡಲಾಗಿದೆ. ಉಚಿತ ಕೋವಿಡ್‌ ಪರೀಕ್ಷೆ ಮಾಡಲಾಗುತ್ತದೆ. ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ’ ಎಂದರು.

‘ಲಾಕ್‌ಡೌನ್‌ನಿಂದಾಗಿ ಎಲ್ಲಿಯೂ ಹೋಗಿರಲಿಲ್ಲ, ಸ್ನೇಹಿತರೊಂದಿಗೆಒಂದು ದಿನದ ಪ್ರವಾಸ ಬಂದಿದ್ದೇವೆ. ಅರಮನೆ, ಮೃಗಾಲಯ ಹಾಗೂ ಕೆಆರ್‌ಎಸ್‌ ನೋಡಿಕೊಂಡು ಹೋಗುತ್ತೇವೆ’ ಎಂದು ತುಮಕೂರಿನ ಮಾರುತಿ ಹೇಳಿದರು.

ಮೃಗಾಲಯ: ಚಾಮರಾಜೇಂದ್ರ ಮೃಗಾಲಯಕ್ಕೆ ನಿರೀಕ್ಷೆಯಂತೆ ಪ್ರವಾಸಿಗರು ಬರುತ್ತಿಲ್ಲ. ವಾರದ ದಿನಗಳಲ್ಲಿ ದಿನಕ್ಕೆ ಒಂದು ಸಾವಿರದಿಂದ ಒಂದೂವರೆ ಸಾವಿರದವರೆಗೆ ಬರುತ್ತಿದ್ದು, ವಾರಾಂತ್ಯದಲ್ಲಿ 3 ಸಾವಿರದಿಂದ ಮೂರೂವರೆ ಸಾವಿರ ಮಂದಿ ಬರುತ್ತಿದ್ದಾರೆ. ಲಾಕ್‌ಡೌನ್‌ಗೂ ಮುಂಚೆ ದಿನಕ್ಕೆ 10 ಸಾವಿರ ಪ್ರವಾಸಿಗರು ವೀಕ್ಷಿಸುತ್ತಿದ್ದರು.

‘ಕೋವಿಡ್‌ ಮಾರ್ಗಸೂಚಿ ಪಾಲನೆ ಕುರಿತು ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಪ್ರವಾಸಿಗರ ಜ್ವರ ತಪಾಸಣೆ ಮಾಡಲಾಗುವುದು. ಕಾಗದದ ಲೋಟಗಳನ್ನಷ್ಟೇ ಬಳಸಲಾಗುತ್ತಿದೆ. ಪರೀಕ್ಷೆ ಸಮಯ, ಮಳೆಗಾಲವಿರುವುದರಿಂದ ಪ್ರವಾಸಿಗರು ಬರುತ್ತಿಲ್ಲ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ತಿಳಿಸಿದರು.

‘ಸಾರ್ವಜನಿಕರು ಪ್ರಾಣಿಗಳನ್ನು ದತ್ತು ಪಡೆದಿರುವುದರಿಂದ ₹1.5 ಕೋಟಿ ನೆರವು ಸಿಕ್ಕಿದಂತಾಗಿದೆ’ ಎಂದು ಮಾಹಿತಿ ನೀಡಿದರು.

ಚಾಮುಂಡಿಬೆಟ್ಟದಲ್ಲಿ ದಾಸೋಹ ಶುರು: ಬೆಟ್ಟದಲ್ಲೂ ಭಕ್ತರ ಸಂಖ್ಯೆ ಹೆಚ್ಚಿದ್ದು, ಲಾಕ್‌ಡೌನ್‌ನಿಂದ ನಿಲ್ಲಿಸಿದ್ದ ದಾಸೋಹವನ್ನು ಮಂಗಳವಾರದಿಂದ (ಜು.27) ಆರಂಭಿಸಲಾಗಿದೆ. ಪ್ರತಿ ದಿನ 6 ಸಾವಿರ ಭಕ್ತರು ಬರುತ್ತಿದ್ದು, ಮಂಗಳವಾರ 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದರು.

‘ಲಾಕ್‌ಡೌನ್‌ನಿಂದಾಗಿ ದೇವಾಲಯಕ್ಕೆ ಸುಮಾರು ₹4 ಕೋಟಿ ಆದಾಯ ಕಡಿಮೆಯಾಗಿದೆ. ಅನ್‌ಲಾಕ್‌ ಆದ ಒಂದು ವಾರ ಕಡಿಮೆ ಭಕ್ತರು ಬಂದರು. ಬೆಂಗಳೂರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ’ ಎಂದು ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎನ್‌.ಯತಿರಾಜ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT