ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 395.73 ಕೋಟಿ ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣ ವಿಸ್ತರಣೆ

Last Updated 18 ಜೂನ್ 2022, 11:05 IST
ಅಕ್ಷರ ಗಾತ್ರ

ಮೈಸೂರು: ‘ನಗರದ ಕೇಂದ್ರ ರೈಲು ನಿಲ್ದಾಣವನ್ನು ₹ 395.73 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲು ಯೋಜಿಸಲಾಗಿದೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಇಲ್ಲಿನ ರೈಲ್ವೆ ಡಿಆರ್‌ಎಂ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ನಿಲ್ದಾಣದ ಮೇಲಿರುವ ಒತ್ತಡ ನಿವಾರಿಸಿ, ಮೇಲ್ದರ್ಜೆಗೇರಿಸಲು ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ 20ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ರೈಲು ನಿಲ್ದಾಣದ ವಿಸ್ತರಣೆ ಯೋಜನೆಗೂ ಚಾಲನೆ ನೀಡಲಿದ್ದಾರೆ’ ಎಂದರು.

‘ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ 65 ಎಕರೆ ಜಾಗದಲ್ಲಿರುವ ಕ್ವಾರ್ಟಸ್‌ಗಳನ್ನು ನೆಲಸಮ ಮಾಡಿ ನಿಲ್ದಾಣದ ವಿಸ್ತರಣೆ ಮಾಡಲಾಗುವುದು. ಹೆಚ್ಚುವರಿಯಾಗಿ 3 ಫ್ಲಾಟ್‌ಫಾರ್ಮ್ ಲೈನ್, 4 ಪಿಟ್ ಲೈನ್, 4 ಸ್ಥಿರ ಲೈನ್, 1 ಶಂಟಿಂಗ್ ನೆಕ್ ನಿರ್ಮಿಸಲು ಯೋಜಿಸಲಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧಗೊಂಡ ಬಳಿಕ ಕಾಮಗಾರಿ ಆರಂಭವಾಗಲಿದೆ’ ಎಂದು ತಿಳಿಸಿದರು.

‘ಮೈಸೂರಿಗೆ ಮೆಮು ರೈಲುಗಳು ಹೆಚ್ಚಾಗಿ ಬರುತ್ತಿವೆ. ಆದ್ದರಿಂದ ನಾಗನಹಳ್ಳಿಯಲ್ಲಿ ₹ 92.07 ಕೋಟಿ ವೆಚ್ಚದಲ್ಲಿ ಮೆಮು ಶೆಡ್ ನಿರ್ಮಿಸಲಾಗುವುದು. 1 ಹೆಚ್ಚುವರಿ ಫ್ಲಾಟ್‌ಫಾರ್ಮ್, 2 ಸ್ಟೇಬ್ಲಿಂಗ್ ಲೈನ್ ನಿರ್ಮಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೂ ಮೈಸೂರಿನಿಂದ ಸಂಪರ್ಕ ಇರುವುದರಿಂದಾಗಿ ಭವಿಷ್ಯದಲ್ಲಿ ನಾಗನಹಳ್ಳಿಯಲ್ಲಿ ಟರ್ಮಿನಲ್ ಅಭಿವೃದ್ಧಿಪಡಿಸಲಾಗುತ್ತದೆ. ಅಶೋಕಪುರಂನಲ್ಲಿ 2 ಫ್ಲಾಟ್‌ಫಾರ್ಮ್, ಫುಟ್‌ಓವರ್ ಬ್ರಿಡ್ಜ್ ನಿರ್ಮಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಬೆಂಗಳೂರು-ಮೈಸೂರು ದಶಪಥ ರಸ್ತೆ, ನಾಗನಹಳ್ಳಿ ರೈಲ್ವೆ ಟರ್ಮಿನಲ್ ನಿರ್ಮಾಣದ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಚುನಾವಣೆ ಪ್ರಚಾರದ ವೇಳೆ ಮಾಡಿದ್ದರು. ಭೂಸ್ವಾಧೀನ ವಿಳಂಬದ ಹಿನ್ನೆಲೆಯಲ್ಲಿ ನಾಗನಹಳ್ಳಿ ಟರ್ಮಿನಲ್ ನಿರ್ಮಾಣ ಸಾಧ್ಯವಾಗಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಡಿಆರ್‌ಎಂ ರಾಹುಲ್ ಅಗರ್‌ವಾಲ್‌, ಎಸ್‌ಡಿಆರ್‌ಎಂ ಮಂಜುನಾಥ್, ರವಿಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT