ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿ.ವಿ: ಭವಿಷ್ಯ ನಿರ್ಮಾಣದ ಕೇಂದ್ರ

ವಿಶ್ವವಿದ್ಯಾಲಯದ 100ನೇ ವಾರ್ಷಿಕ ಘಟಿಕೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
Last Updated 20 ಅಕ್ಟೋಬರ್ 2020, 1:56 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ವಿಶ್ವವಿದ್ಯಾಲಯವು ಪ್ರಾಚೀನ ಭಾರತದ ಸಮೃದ್ಧ ಶಿಕ್ಷಣದ ಪ್ರಮುಖ ಕೇಂದ್ರ ಹಾಗೂ ಭಾರತದ ಭವಿಷ್ಯ ನಿರ್ಮಾಣದ ಸಾಮರ್ಥ್ಯ ಹೊಂದಿರುವ ಕೇಂದ್ರ ಕೂಡ’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿದ್ದ 100ನೇ ವಾರ್ಷಿಕ ಘಟಿಕೋತ್ಸವ
ದಲ್ಲಿ ಅವರು ವರ್ಚುಯಲ್‌ ವೇದಿಕೆಯಲ್ಲಿ ನವದೆಹಲಿಯಿಂದ ಮಾತನಾಡಿದರು.

‘ಯುವಕರಲ್ಲಿ ಹೆಚ್ಚು ಸ್ಪರ್ಧಾತ್ಮಕತೆ ಬೆಳೆಸಲು, ಬಹು ದೃಷ್ಟಿಕೋನದಲ್ಲಿ ಯೋಚಿಸುವಂತೆ ಮಾಡಲು ನೂತನ ಶಿಕ್ಷಣ ನೀತಿ ಸಹಕಾರಿ ಆಗಲಿದೆ. ಆದ್ದರಿಂದ ಮೈಸೂರು ವಿಶ್ವವಿದ್ಯಾಲಯವು ಮುಂಚೂಣಿಯಲ್ಲಿ ನಿಂತು ಈ ನೀತಿ ಅಳವಡಿಸಿ
ಕೊಳ್ಳಬೇಕು. ಇನ್‍ಕ್ಯುಬೇಷನ್ ಘಟಕ, ತಾಂತ್ರಿಕ ಶಿಕ್ಷಣದಲ್ಲಿ ಸುಧಾರಣೆ
ಮಾಡಿ ಜಾಗತಿಕ ವಿಷಯಗಳ ಜೊತೆ ಸ್ಥಳೀಯ ವಿಚಾರಗಳ ಸಂಶೋಧನೆಗೂ ಮಹತ್ವ ನೀಡಬೇಕು’ ಎಂದು ಸಲಹೆ ನೀಡಿದರು.

ನೂತನ ಶಿಕ್ಷಣ ನೀತಿ ಅನ್ವಯ ಮೈಸೂರು ವಿಶ್ವವಿದ್ಯಾಲಯ ಆರಂಭಿಸುತ್ತಿರುವ ಬಹುಶಿಸ್ತೀಯ ಅಧ್ಯಯನ ಕಾರ್ಯಕ್ರಮವನ್ನು ಶ್ಲಾಘಿಸಿದರು.

‘ಶಿಕ್ಷಣ ಹಾಗೂ ದೀಕ್ಷೆ ಯುವಕರ ಪ್ರಮುಖ ಎರಡು ಕಾಲಘಟ್ಟಗಳು. ದೀಕ್ಷೆ ಎಂಬುದು ಕೇವಲ ಪದವಿ ಪಡೆಯುವ ಅವಕಾಶ ಮಾತ್ರವಲ್ಲ; ಜೀವನದ ಮುಂದಿನ ಕಾಲಘಟ್ಟಕ್ಕೆ ತೆಗೆದುಕೊಳ್ಳುವ ಹೊಸ ನಿರ್ಣಯ ಕೂಡ’ ಎಂದು ಕಿವಿಮಾತು ಹೇಳಿದರು.

‘ಪದವಿ ಎಂಬುದು ಪ್ರತಿ ವಿದ್ಯಾರ್ಥಿಯ ಜೀವನದಲ್ಲೂ ಪ್ರಮುಖ ಘಟ್ಟ. ವಿಶ್ವವಿದ್ಯಾಲಯವು ಕೇವಲ ಪದವಿಯನ್ನಷ್ಟೇ ನೀಡುತ್ತಿಲ್ಲ. ಜವಾಬ್ದಾರಿಯನ್ನೂ ಹೆಗಲ ಮೇಲೆ ಹೊರಿಸಿದೆ.ಈಗ ಕಾಲೇಜಿನ ಕ್ಯಾಂಪಸ್ ದಾಟಿ ಜೀವನದ ಕ್ಯಾಂಪಸ್‍ಗೆ ಕಾಲಿಡುತ್ತಿದ್ದೀರಿ. ತಮ್ಮ ಜ್ಞಾನವನ್ನು ನಿಜ ಜೀವನದಲ್ಲಿ ವಿನಿಯೋಗಿಸಿದರೆ ಏನಾದರೂ ಸಾಧನೆ ಮಾಡಲು ಸಾಧ್ಯ. ಮಿತಿಯೊಳಗೆ ಸಿಲುಕಬೇಡಿ, ದೊಡ್ಡಮಟ್ಟದಲ್ಲಿ ಸಾಧನೆ ಮಾಡಲು ಮುಂದಾಗಿ’ ಎಂದು ಅವರು ಸಲಹೆ ನೀಡಿದರು.

ವೈದ್ಯಕೀಯ ಶಿಕ್ಷಣದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಯಾಗಿದೆ. ಹೋಮಿಯೋಪತಿ ಮತ್ತು ಭಾರತೀಯ ವೈದ್ಯ ಪದ್ಧತಿ ಕಲಿಸಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಈ ಬದಲಾವಣೆಗಳಿಂದ ಭವಿಷ್ಯದಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಓದುವ ಅವಕಾಶ ಲಭಿಸಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಈ ಘಟಿಕೋತ್ಸವದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪದವಿ ಮುಗಿಸಿರುವುದು ಖುಷಿಯ ವಿಚಾರ. ನಾಲ್ಕು ವರ್ಷಗಳ ಹಿಂದೆ ಐಐಟಿಗಳಲ್ಲಿ ಶೇ 8ರಷ್ಟು ಯುವತಿಯರಿದ್ದರು. ಈ ವರ್ಷ ಶೇ 20 ರಷ್ಟು ಆಗಿದೆ ಎಂದು ವಿದ್ಯಾರ್ಥಿನಿಯರ ಸಾಧನೆಯನ್ನು ಕೊಂಡಾಡಿದರು.

ಇದಕ್ಕೂ ಮೊದಲು ವಿಶ್ವವಿದ್ಯಾಲಯದ ಡಿಜಿಟಲ್‌ ಸೆಂಟರ್‌ ಹಾಗೂ ಡಿಜಿಟಲ್‌ ಸೈನ್‌ ಬೋರ್ಡ್‌, ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಚಾಲನೆ ನೀಡಲಾಯಿತು.

ರಾಜ್ಯಪಾಲ ವಜುಭಾಯಿ ವಾಲಾ (ವರ್ಚುವಲ್‌ ವೇದಿಕೆ), ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಕುಲಪತಿ ಪ್ರೊ.ಹೇಮಂತ್‌ ಕುಮಾರ್‌, ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.

ಅಂದು ನಾಲ್ವಡಿ, ಇಂದು ಮೋದಿ

ಮೈಸೂರು ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ 1918ರ ಅ. 19 ರಂದು ನಡೆದಿತ್ತು. ಮೊದಲ ಘಟಿಕೋತ್ಸವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಭಾಷಣ ಮಾಡಿದ್ದರು. ಇದೀಗ 100ನೇ ಘಟಿಕೋತ್ಸವ ಅಕ್ಟೋಬರ್‌ 19 ರಂದೇ ನಡೆದಿದ್ದು, ಪ್ರಧಾನಿ ಮೋದಿ ಭಾಷಣ ಮಾಡಿದರು. ಪ್ರಧಾನಿ ಕೂಡ ಈ ವಿಚಾರವನ್ನು ಪ್ರಸ್ತಾಪ ಮಾಡಿದರು.

ನಾಲ್ವಡಿ, ಗೊರೂರು, ಕುವೆಂಪು ಸ್ಮರಣೆ

ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಕೊಂಡಾಡಿದ ಮೋದಿ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯನ್ನು ಸ್ಮರಿಸಿದರು.

ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ‘ಶಿಕ್ಷಣವೇ ಬೆಳಕು’ ಎಂಬ ಉಕ್ತಿಯನ್ನು ಕನ್ನಡದಲ್ಲೇ ಉಲ್ಲೇಖಿಸಿದರು.

‘ಕುವೆಂಪು ಅವರು ಈ ಕ್ಯಾಂಪಸ್‍ಗೆ ಮಾನಸ ಗಂಗೋತ್ರಿ ಎಂದು ಹೆಸರಿಟ್ಟಿ ದ್ದಾರೆ. ಆ ಹೆಸರಿನಂತೆ ನಮ್ಮ ಮನಸ್ಸಿನ ಯೋಚನೆಗಳು ಸದಾ ಚಲನಶೀ ಲವಾಗಿರಬೇಕು’ ಎಂದು ಹೇಳಿದರು.

ಭಾಷಣದ ಆರಂಭದಲ್ಲಿ ಕನ್ನಡದಲ್ಲೇ ನಾಡಹಬ್ಬ ದಸರಾ ಶುಭಾಶಯ ಕೋರಿದರು. ಬಳಿಕ ಪದವಿ ಪ್ರಮಾಣ ಪತ್ರ ಪಡೆದವರಿಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದರು.

‘ಆರು ವರ್ಷಗಳ ಹಿಂದೆ, ಈಗ’

2014ಕ್ಕೆ ಮುನ್ನ ದೇಶದಲ್ಲಿದ್ದ ಐಐಎಂ, ಐಐಟಿ, ಎಐಐಎಂಎ ಸ್‌ಗಳ ಸಂಖ್ಯೆ, ಆರು ವರ್ಷಗಳಲ್ಲಿ ಹೆಚ್ಚಾಗಿರುವ ಅವುಗಳ ಸಂಖ್ಯೆ ಹೇಳುತ್ತಾ ಅಭಿವೃದ್ಧಿ ಗತಿಯನ್ನು ಪ್ರಧಾನಿ ವಿವರಿಸಿದರು.

ಹಿಂದೆ 13 ಐಐಎಂಗಳಿದ್ದರೆ ಕೇವಲ ಆರು ವರ್ಷಗಳಲ್ಲಿ ಹೊಸ ಏಳು ಐಐಎಂಗಳನ್ನು ಸ್ಥಾಪಿಸಲಾಗಿದೆ. ಏಳು ದಶಕಗಳಲ್ಲಿ ಏಳು ಎಐಐಎಂಎಸ್‌ಗಳಿದ್ದರೆ, ಆ ಸಂಖ್ಯೆ ಆರು ವರ್ಷಗಳಲ್ಲಿ 15 ಆಗಿದೆ. ಈ ಮೊದಲು 16 ಐಐಟಿಗಳು ಇದ್ದವು. ಆರು ವರ್ಷಗಳಿಂದ ಪ್ರತಿವರ್ಷ ಹೊಸ ಐಐಟಿ ಆರಂಭಿಸಲಾಗುತ್ತಿದೆ. ಅದರಲ್ಲಿ ಒಂದು ಧಾರವಾಡದಲ್ಲಿದ ಎಂದು ಹೇಳಿದರು.

ಕೋವಿಡ್‌ ಪರಿಸ್ಥಿತಿಯಲ್ಲಿ ಯುವಕರು ಆರಂಭಿಸಿದ ನವೋದ್ಯಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ‘ನವೋದ್ಯಮ ದೇಶದ ಶಕ್ತಿ. ತಮ್ಮ ಅಭಿವೃದ್ಧಿ ದೇಶದ ಅಭಿವೃದ್ಧಿ. ತಾವು ಆತ್ಮನಿರ್ಭರರಾದರೆ, ದೇಶವೂ ಆತ್ಮನಿರ್ಭರವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT