ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿದಾಗಲಿದೆ ಶತಮಾನದ ಮೈಸೂರು ವಿ.ವಿ

ಕಡಿಮೆಯಾಗಲಿದೆ ಪದವಿ ಕಾಲೇಜುಗಳ ವ್ಯಾಪ್ತಿ, ವಿದ್ಯಾರ್ಥಿಗಳ ಸಂಖ್ಯೆ
Last Updated 29 ಆಗಸ್ಟ್ 2022, 4:53 IST
ಅಕ್ಷರ ಗಾತ್ರ

ಮೈಸೂರು: ನೆರೆಯ ಮಂಡ್ಯ, ಚಾಮರಾಜನಗರ ಮತ್ತು ಹಾಸನದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯಗಳು ಸ್ಥಾಪನೆ ಆಗುತ್ತಿರುವುದರಿಂದಾಗಿ, ಶತಮಾನದ ಇತಿಹಾಸವುಳ್ಳ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯು ಗಣನೀಯ ಪ್ರಮಾಣದಲ್ಲಿ ಕಿರಿದಾಗಲಿದೆ. ಕಾಲೇಜುಗಳು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಇಳಿಕೆಯಾಗಲಿದೆ.

ಭೌಗೋಳಿಕವಾಗಿ ನಾಲ್ಕು ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿದ್ದ ಮೈಸೂರು ವಿ.ವಿಯು ಮೈಸೂರು ಜಿಲ್ಲೆಗಷ್ಟೆ ಸೀಮಿತಗೊಳ್ಳಲಿದೆ. ಪದವಿ ಕಾಲೇಜುಗಳ ಸಂಖ್ಯೆಯು 80ಕ್ಕಿಂತಲೂ ಕಡಿಮೆ ಇರಲಿದೆ. ಹಳೆ ಮೈಸೂರು ಭಾಗದ ವಿದ್ಯಾರ್ಥಿ ಯುವಜನರ ಉನ್ನತ ಶಿಕ್ಷಣದ ಆಶಯಗಳನ್ನು ಪೂರೈಸುತ್ತಿದ್ದ ಹಾಗೂ ಆದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದ ವಿ.ವಿಯು ಸಂಖ್ಯಾತ್ಮಕ ದೃಷ್ಟಿಯಿಂದ ದೊಡ್ಡ ‍ಪ್ರಮಾಣದಲ್ಲಿ ಕುಗ್ಗಲಿದೆ.

ದಾಖಲಾತಿ ಶುರುವಾದರೆ:106 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಈ ವಿಶ್ವವಿದ್ಯಾಲಯವು ಪ್ರಸ್ತುತ 4 ಜಿಲ್ಲೆಗಳಲ್ಲಿ ಒಟ್ಟು 236 ಕಾಲೇಜುಗಳನ್ನು ಹೊಂದಿದೆ. 1.26 ಲಕ್ಷ ವಿದ್ಯಾರ್ಥಿ–ವಿದ್ಯಾರ್ಥಿನಿಯರಿದ್ದಾರೆ. ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳು ಆರಂಭಗೊಂಡು ಅಲ್ಲಿ ದಾಖಲಾತಿ ಪ್ರಕ್ರಿಯೆ ಶುರುವಾದರೆ ಇಲ್ಲಿಗೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಲಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾಲಯದಲ್ಲೇ ಮುಂದುವರಿಯುವುದರಿಂದಾಗಿ, ಮುಂದಿನ 3 ವರ್ಷಗಳ ನಂತರ ಪ್ರವೇಶಾತಿ ಪ್ರಮಾಣದಲ್ಲಿ ಇಳಿಕೆ ಕಂಡುಬರುವ ಸಾಧ್ಯತೆ ಇದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಆಯಾ ವಿ.ವಿಗಳಲ್ಲೇ ದಾಖಲಾಗಬಹುದಾಗಿದೆ.

‘ನೆರೆಯ ಜಿಲ್ಲೆಗಳಲ್ಲಿ ಪ್ರತ್ಯೇಕ ವಿ.ವಿಗಳು ಆರಂಭವಾಗುವುದರಿಂದ ಸಹಜವಾಗಿಯೇ ಆ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬಹುತೇಕರು ಅಲ್ಲಿಯೇ ಪ್ರವೇಶ ಪಡೆದರೆ ಮೈಸೂರು ವಿ.ವಿಯಲ್ಲಿ ದಾಖಲಾತಿ ಪ್ರಮಾಣದಲ್ಲಿ ಕುಸಿತ ಕಂಡುಬರಲಿದೆ. ಭೌಗೋಳಿಕ ವ್ಯಾಪ್ತಿಯೂ ಕಡಿಮೆಯಾಗುತ್ತದೆ. ಚಿಕ್ಕ ವಿಶ್ವವಿದ್ಯಾಲಯವಾಗಲಿದೆ’ ಎನ್ನುತ್ತಾರೆ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್.

ನೇಮಕವಾಗಲಿ:‘ನಮ್ಮಲ್ಲಿನ 50 ಬೋಧಕ ಸಿಬ್ಬಂದಿಯು ತಾಂತ್ರಿಕವಾಗಿ ಆ ವಿ.ವಿಗಳ ವ್ಯಾಪ್ತಿಗೇ ಸೇರಲಿದ್ದಾರೆ. ವ್ಯಾಪ್ತಿ ಕಿರಿದಾಗುವುದರಿಂದ, ಗುಣಮಟ್ಟದ ಸಂಶೋಧನೆಗೆ ಒತ್ತು ನೀಡಿದರೆ ವೈಭವವನ್ನು ಕಾಪಾಡಿಕೊಳ್ಳಬಹುದು. ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು’ ಎಂದು ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

‘ಕಾಲೇಜುಗಳು ಆಯಾ ಜಿಲ್ಲೆಯ ವಿ.ವಿಯ ವ್ಯಾಪ್ತಿಗೆ ಒಳಗೊಂಡ ನಂತರ ನಮಗೆ ವಿದ್ಯಾರ್ಥಿಗಳು ಕಡಿಮೆ ಆಗಬಹುದು. ಆದರೆ, ಅತ್ಯುತ್ತಮ ಕಲಿಕಾ ಸೌಲಭ್ಯ ಹೊಂದಿರುವ ಮಾನಸ ಗಂಗೋತ್ರಿಯಲ್ಲಿನ ಸಂಖ್ಯೆ ಇಳಿಕೆ ಆಗದಿರಬಹುದು’ ಎನ್ನುವ ಭರವಸೆ ಅವರದು.

ದಶಕಗಳೇ ಬೇಕು:‘ನೆರೆಯ ಜಿಲ್ಲೆಗಳಲ್ಲಿ ಪ್ರತ್ಯೇಕ ವಿ.ವಿ ಸ್ಥಾಪಿಸುತ್ತಿರುವುದು ಸ್ವಾಗತಾರ್ಹ. ಅವು ಮೈಸೂರು ವಿಶ್ವವಿದ್ಯಾಲಯದಲ್ಲಿನ ಗುಣಮಟ್ಟಕ್ಕೆ ಬರಬೇಕಾದರೆ ಹಲವು ದಶಕಗಳೇ ಬೇಕಾಗುತ್ತವೆ.ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟದ ಹಿತದೃಷ್ಟಿಯಿಂದ ಕಾಯಂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ನೇಮಿಸುವುದು ಬಹು ಮುಖ್ಯವಾಗುತ್ತದೆ’ ಎನ್ನುತ್ತಾರೆ ಬಿಜೆಪಿ ಮುಖಂಡರೂ ಆಗಿರುವ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ.

‘ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ಮಾಡುತ್ತಿರುವುದರಿಂದ ಧನಾತ್ಮಕ ಹಾಗೂ ಋಣಾತ್ಮಕವಾದ ಎರಡೂ ಪರಿಣಾಮಗಳಿವೆ. ಆ ಭಾಗದವರಿಗೆ ಸಮೀಪದಲ್ಲೇ ಉನ್ನತ ಶಿಕ್ಷಣದ ಅವಕಾಶ ಸಿಗುತ್ತದೆ. ಅಧಿಕಾರಶಾಹಿಗಳು ವಿ.ವಿಗಳ ಮೇಲೆ ರಾಜಕೀಯ ಪ್ರಭಾವ ಬೀರುವುದರಿಂದ ಶೈಕ್ಷಣಿಕವಾಗಿ ಅಭಿವೃದ್ಧಿಗೆ ಅಡ್ಡಿಯಾಗಬಹುದು ಎನ್ನುವ ಆತಂಕವಿದೆ’ ಎನ್ನುತ್ತಾರೆ ಮೈಸೂರಿನಲ್ಲಿ ಅತಿಥಿ ಉಪನ್ಯಾಸಕರಾಗಿರುವ ಹಾಸನದ ಡಾ.ದೇವರಾಜ್‌ ಎಸ್.ಎಸ್.

ಸೌಲಭ್ಯ ಕೊಡಲಿ
ಪ್ರತಿ ಜಿಲ್ಲೆಗಳಲ್ಲೂ ವಿ,ವಿ ಆರಂಭಿಸುತ್ತಿರುವುದು ಒಳ್ಳೆಯದೆ. ತಕ್ಕಂತೆ ಸೌಲಭ್ಯ ಕೊಡದಿದ್ದರೆ ಪ್ರಯೋಜನ ಆಗುವುದಿಲ್ಲ.
–ಡಾ.ದೇವರಾಜ್‌ ಎಸ್.ಎಸ್., ಹಾಸನದ ಅತಿಥಿ ಉಪನ್ಯಾಸಕ

ಸರ್ಕಾರ ಕೈಹಿಡಿಯಲಿ
ಮೈಸೂರು ವಿಶ್ವವಿದ್ಯಾಲಯದ ಆದಾಯವೂ ಕಡಿಮೆಯಾಗಲಿದೆ. ಸರ್ಕಾರವು ಆರ್ಥಿಕವಾಗಿ ಕೈಹಿಡಿಯಬೇಕಾಗುತ್ತದೆ.
–ಪ್ರೊ.ಜಿ.ಹೇಮಂತ್‌ಕುಮಾರ್, ಕುಲಪತಿ, ಮೈಸೂರು ವಿಶ್ವವಿದ್ಯಾಲಯ

ಕಾಯಂ ಸಿಬ್ಬಂದಿ ಒದಗಿಸಬೇಕು
ಹೊಸ ವಿ.ವಿಗಳಿಗೆ ₹ 2 ಕೋಟಿ ಸಾಲದು. ಹೆಚ್ಚಿನ ಅನುದಾನ, ಕಾಯಂ ಸಿಬ್ಬಂದಿ, ಸೌಲಭ್ಯ ಒದಗಿಸಿ ಆರಂಭಿಸಬೇಕು.
–ಡಾ.ಈ.ಸಿ.ನಿಂಗರಾಜೇಗೌಡ, ಸಿಂಡಿಕೇಟ್ ಸದಸ್ಯ, ಮೈಸೂರು ವಿ.ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT