ಭಾನುವಾರ, ಅಕ್ಟೋಬರ್ 17, 2021
23 °C
2 ವರ್ಷಗಳಿಂದ ಅನುದಾನವಿಲ್ಲ, 6 ತಿಂಗಳಿಂದ ನೌಕರರಿಗೆ ವೇತನವಿಲ್ಲ

ಮೈಸೂರು: ಅತಂತ್ರ ಸ್ಥಿತಿಯಲ್ಲಿ ಸಂಗೀತ ವಿಶ್ವವಿದ್ಯಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ 11 ವರ್ಷಗಳಿಂದ ಕಾಯಂ ಬೋಧಕರಿಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 2 ವರ್ಷಗಳಿಂದ ಅನುದಾನವಿಲ್ಲ. ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಗುತ್ತಿಗೆ ನೌಕರರಿಗೆ ಆರು ತಿಂಗಳಿಂದ ವೇತನವನ್ನೂ ನೀಡಿಲ್ಲ.

ತಾತ್ಕಾಲಿಕ 21 ಹಾಗೂ ಹೊರಗುತ್ತಿಗೆಯ 10 ಬೋಧಕೇತರ ನೌಕರರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ಉನ್ನತ ಶಿಕ್ಷಣ ಇಲಾಖೆ ಸೂಚಿಸಿದ್ದು, ವಿಶ್ವವಿದ್ಯಾಲಯಕ್ಕೆ ಈಗ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.

ಕುಲ‍ಪತಿ ಹಾಗೂ ಹಣಕಾಸು ಅಧಿಕಾರಿ ಹೊರತುಪಡಿಸಿದರೆ ಉಳಿದವರೆಲ್ಲಾ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ನೌಕರರು. ಸದ್ಯ 31 ಪೂರ್ಣಾವಧಿ ಅತಿಥಿ ಉಪನ್ಯಾಸಕರಿದ್ದಾರೆ. ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ರಂಗಾಯಣ ಡಿಪ್ಲೊಮಾ ವಿದ್ಯಾರ್ಥಿಗಳು ಸೇರಿ 244 ಮಂದಿ ಇದ್ದಾರೆ.

‘ವಿಶ್ವವಿದ್ಯಾಲಯಕ್ಕೆ ಪೂರ್ಣ ಮಾನ್ಯತೆ ಸಿಕ್ಕಿಲ್ಲ. ಸಿಬ್ಬಂದಿಗೆ ಯುಜಿಸಿ ವೇತನ, ಸೌಲಭ್ಯಗಳು ಸಿಗಬೇಕಾದರೆ ‘12 ಬಿ’ ಮಾನ್ಯತೆ ಅಗತ್ಯವಿದೆ. ಉತ್ತಮ ಸೌಲಭ್ಯ ನೀಡಿ, ಕಾಯಂ ಬೋಧಕರನ್ನು ನೇಮಿಸಿದರೆ ಅನುದಾನ ಪಡೆಯಬಹುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ವರ್ಷಗಳಿಂದ ಸರ್ಕಾರದಿಂದ ಅನುದಾನ ಬಂದಿಲ್ಲ. ಹಿಂದೆ ವಾರ್ಷಿಕ ₹ 3 ಕೋಟಿ ಲಭ್ಯವಾಗುತ್ತಿತ್ತು. ವೇತನಕ್ಕೆಂದೇ ₹ 2.5 ಕೋಟಿ ಖರ್ಚಾಗುತ್ತದೆ. ವಿಶ್ವವಿದ್ಯಾಲಯ ಬಳಿ ₹ 12 ಕೋಟಿ ನಿಶ್ಚಿತ ಠೇವಣಿ ಇದೆ. ಅದನ್ನು ಅಭಿವೃದ್ಧಿಗಷ್ಟೇ ಬಳಸಬೇಕು. ಹೀಗಾಗಿ, 6 ತಿಂಗಳಿಂದ ವೇತನ ಪಾವತಿಸಲು ಸಾಧ್ಯವಾಗಿಲ್ಲ. ತಾತ್ಕಾಲಿಕ ಹಾಗೂ ಹೊರ ಗುತ್ತಿಗೆ ನೌಕರರನ್ನು ಬಿಡುಗಡೆಗೊಳಿಸಲು ನಿರ್ದೇಶನ ಬಂದಿದೆ. ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಕ್ರಮ ವಹಿಸಲು ಸಿಂಡಿಕೇಟ್‌ ಸಭೆ ನಿರ್ಣಯಿಸಿದೆ’ ಎಂದರು.

‘2012ರಲ್ಲಿ 15 ಹುದ್ದೆಗಳು ಮಂಜೂರಾಗಿತ್ತು. ಹಿಂದಿನವರ ನಿರ್ಲಕ್ಷ್ಯದಿಂದ ನೇಮಕಾತಿ ಪ್ರಕ್ರಿಯೆ ನಡೆಯಲಿಲ್ಲ. ಈಗ ಪ್ರಯತ್ನಗಳು ನಡೆದಿವೆ’ ಎಂದರು.

ಶಾಲೆಯಲ್ಲೇ ವಿಶ್ವವಿದ್ಯಾಲಯ!

2009ರಲ್ಲಿ ಆರಂಭವಾದ ಸಂಗೀತ ವಿಶ್ವವಿದ್ಯಾಲಯಕ್ಕೆ ಸ್ವಂತ ಜಾಗ, ಕಟ್ಟಡವಿಲ್ಲ. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆದಿದೆ.

‘ಸಾರ್ವಜನಿಕ ಶಿಕ್ಷಣ ಇಲಾಖೆ ಸುಪರ್ದಿಯಲ್ಲಿರುವ ಜಾಗವನ್ನು ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು ಮನವಿ ಮಾಡಲಾಗಿದೆ. ಸಾತಗಳ್ಳಿ ಬಳಿ 8 ಎಕರೆ ಜಾಗವನ್ನು 2012ರಲ್ಲಿ ಸರ್ಕಾರ ಮಂಜೂರು ಮಾಡಿತ್ತು. ಆ ಜಾಗ ಸೂಕ್ತವಾಗಿಲ್ಲದ ಕಾರಣ ನಗರಾಭಿವೃದ್ಧಿ ಪ್ರಾಧಿಕಾರವು ಬದಲಿ ವ್ಯವಸ್ಥೆ ಮಾಡಿದ್ದು, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ನಗರದಲ್ಲಿ ಏಳು ಎಕರೆ ಜಾಗ ನೀಡಿದೆ’ ಎಂದು ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ತಿಳಿಸಿದರು.

***

ವಿಶ್ವವಿದ್ಯಾಲಯ ಮುಚ್ಚುವ ಸ್ಥಿತಿಯಲ್ಲಂತೂ ಇಲ್ಲ. ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರಿದ್ದರೆ ಸಾಕು, ವಿಶ್ವವಿದ್ಯಾಲಯವನ್ನು ನಡೆಸಬಹುದು.

-ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ಕುಲಪತಿ, ಸಂಗೀತ ವಿಶ್ವವಿದ್ಯಾಲಯ

***

ಯುಜಿಸಿ ನಿಯಮಗಳ ಪ್ರಕಾರ ಅತಿಥಿ ಶಿಕ್ಷಕರನ್ನು ನೇಮಿಸಿ ತರಗತಿ ನಡೆಸಬಹುದು. ವಿಶ್ವವಿದ್ಯಾಲಯ ಮುಚ್ಚುವ ವಿಚಾರವೇ ಉದ್ಭವಿಸದು ‌

-ಪ್ರೊ.ಡಿ.ಶಿವಲಿಂಗಯ್ಯ, ಸಿಂಡಿಕೇಟ್‌ ಸದಸ್ಯ, ಸಂಗೀತ ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು