ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಮುಡಾ ಅಧಿಕಾರಿಗಳ ಬೇಜವಾಬ್ದಾರಿ ನಡೆ; ನಿವೇಶನ ಮಾಲೀಕರಿಗೆ ಮಾನಸಿಕ ಹಿಂಸೆ

Last Updated 22 ಫೆಬ್ರುವರಿ 2022, 3:19 IST
ಅಕ್ಷರ ಗಾತ್ರ

ಮೈಸೂರು: ಮುಡಾ ಅಧಿಕಾರಿ ವರ್ಗದ ಬೇಜವಾಬ್ದಾರಿ ನಡವಳಿಕೆಯಿಂದ, ನಿವೇಶನದ ಮಾಲೀಕರೊಬ್ಬರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ತಮ್ಮದಲ್ಲದ ತಪ್ಪಿಗೆ ಆಗಾಗ್ಗೆ ದಾಖಲೆಗಳನ್ನು ಹೊತ್ತು ಕಚೇರಿಗೆ ಅಲೆಯುತ್ತಿದ್ದಾರೆ.

ನಗರದ ಸರಸ್ವತಿಪುರಂನ ಎಚ್‌.ಕೆ.ಶ್ರೀನಾಥ್‌ ದಶಕಗಳಿಂದಲೂ ಮುಡಾ ಅಧಿಕಾರಿಗಳು ಆಗಾಗ್ಗೆ ಎಸಗುವ ಪ್ರಮಾದಕ್ಕೆ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿರುವವರು.

ನಗರದ ತೊಣಚಿಕೊಪ್ಪಲಿನ ಮೂರನೇ ಹಂತದಲ್ಲಿನ 555 ಕ್ಯೂ ನಿವೇಶನಕ್ಕೆ ಸಂಬಂಧಿಸಿದಂತೆ 1996ರಲ್ಲೇ ಪ್ರಿನ್ಸಿಪಲ್‌ ಮೊದಲನೇ ಮುನ್ಸಿಫ್‌ ನ್ಯಾಯಾಲಯ ಆದೇಶ ಹೊರಡಿಸಿದೆ. ಮುಡಾ ಸಹ ಭೌತಿಕವಾಗಿ ಈ ನಿವೇಶನ ಲಭ್ಯವಿಲ್ಲ ಎಂಬುದನ್ನು ತನ್ನದೇ ಸಭೆಯಲ್ಲಿ ಪ್ರಸ್ತಾಪಿಸಿದೆ. ಆದರೂ ಇಲ್ಲದ ನಿವೇಶನವನ್ನು ಅಧಿಕಾರಿಗಳು ಹರಾಜಿಗೆ ನಿಗದಿಪಡಿಸುವುದು, ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಮಂಜೂರು ಮಾಡುತ್ತಿರುವುದರಿಂದ ಪಕ್ಕದ ನಿವೇಶನ 555 ಆರ್‌ನ ಮಾಲೀಕರಾದ ಶ್ರೀನಾಥ್‌ ತೊಂದರೆ ಎದುರಿಸಬೇಕಿದೆ.

ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಬೋಗಾದಿಯಲ್ಲಿ 17 ಗುಂಟೆ ಜಮೀನಿನಲ್ಲಿ ಮುಡಾ ರಸ್ತೆ ಅಭಿವೃದ್ಧಿ ಪಡಿಸಿದ್ದು, ಈ ಜಾಗದ ಮಾಲೀಕರಾದ ಶಿವಬೀರಯ್ಯ, ಪುಟ್ಟಜವರ, ಶಾಂತಲಕ್ಷ್ಮೀ ಅವರಿಗೆ ಇದಕ್ಕೆ ಪರ್ಯಾಯವಾಗಿ 2021ರಲ್ಲಿ 555 ಕ್ಯೂ ನಿವೇಶನವನ್ನು ಮಂಜೂರು ಮಾಡಿದೆ.

ಈ ಮೂವರು ತಮಗೆ ಮಂಜೂರಾದ ನಿವೇಶನಕ್ಕೆ ಎನ್‌.ಪ್ರಶಾಂತ್ ಎಂಬುವರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ. ಶ್ರೀನಾಥ್‌ ತಮ್ಮ ನಿವೇಶನದ ತಂತಿ ಬೇಲಿ ದುರಸ್ತಿಗೆ ಈಚೆಗೆ ಮುಂದಾದಾಗ 555 ಕ್ಯೂ ನಿವೇಶವನ್ನು ಮತ್ತೊಮ್ಮೆ ಬೇರೆಯವರಿಗೆ ಮಂಜೂರು ಮಾಡಿರುವುದು ಗೊತ್ತಾಗಿದೆ.

ತಂತಿ ಬೇಲಿ ದುರಸ್ತಿಗೂ ಜಿಪಿಎ ಪಡೆದವರಿಂದ ತಕರಾರು ಎದುರಾಗಿದೆ. ವಿಧಿಯಿಲ್ಲದೇ ಶ್ರೀನಾಥ್‌ ಮತ್ತೊಮ್ಮೆ ತಮ್ಮ ಮೂಲ ದಾಖಲೆಗಳೊಂದಿಗೆ ಮುಡಾ ಕಚೇರಿಗೆ ಎಡತಾಕಿದ್ದಾರೆ. ಸ್ಪಂದನೆ ಮಾತ್ರ ಎಂದಿನಂತೆ ಶೂನ್ಯವಾಗಿದೆ. ಕಚೇರಿಯಿಂದ ಕಚೇರಿಗೆ ಅಲೆಯುವುದು ತಪ್ಪದಾಗಿದೆ.

ಆರಂಭದಿಂದಲೂ ಬೆಂಬಿಡದ ಬೇತಾಳ!
ಮೈಸೂರು ನಗರ ವಿಶ್ವಸ್ಥ ಮಂಡಳಿ 1980ರ ಜ.11ರಂದು ಸರಸ್ವತಿಪುರಂನ ನಿವಾಸಿ ಸಾವಿತ್ರಮ್ಮನವರಿಗೆ ತೊಣಚಿಕೊಪ‍್ಪಲಿನ ಮೂರನೇ ಹಂತದಲ್ಲಿ 80*120 ಅಳತೆಯ 555 ಆರ್ ನಿವೇಶನ ಮಂಜೂರು ಮಾಡಿತ್ತು.

‘₹ 12,800 ಪಾವತಿಸಿ 2.2.1980ರಲ್ಲಿ ಸ್ವಾಧೀನಕ್ಕೆ ಪಡೆದೆವು. ಜೂನ್‌ನಲ್ಲೇ ಪಾಲಿಕೆಯಲ್ಲಿ ಖಾತೆ ಮಾಡಿಸಿಕೊಂಡಿದ್ದೆವು. 89ರಲ್ಲಿ ಮನೆ ಕಟ್ಟಲು ನಕ್ಷೆಗೆ ಅನುಮೋದನೆ ಪಡೆದಿದ್ದೆವು. ವಿವಿಧ ಕಾರಣಗಳಿಂದ ಮನೆ ಕಟ್ಟಲಾಗಿರಲಿಲ್ಲ’ ಎಂದು ಸಾವಿತ್ರಮ್ಮ ಅವರ ಮೊಮ್ಮಗ ಶ್ರೀನಾಥ್‌ ತಿಳಿಸಿದರು.

‘80ರಲ್ಲೇ ಎಂ.ಕೆ.ಸುರೇಶ್‌ ಎಂಬುವರಿಗೆ 555 ಕ್ಯೂ ನಿವೇಶನವನ್ನು ವಿಶ್ವಸ್ಥ ಮಂಡಳಿ ಮಂಜೂರು ಮಾಡಿತ್ತು. 1985ರಲ್ಲಿ ಆರ್‌.ಮೋಹನ್‌ ಎಂಬುವರಿಗೆ ಈ ನಿವೇಶನವನ್ನು ಮರು ಮಂಜೂರು ಮಾಡಿತು. ಭೌತಿಕವಾಗಿ 80*120 ಅಳತೆಯ ನಿವೇಶನ ಇಲ್ಲದಿರುವುದರಿಂದ ಅಕ್ಕಪಕ್ಕದ ನಿವೇಶನ ಮಾಲೀಕರು, ಮುಡಾ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ 1996ರಲ್ಲಿ ಈ ವಕಾಲತ್ತು ವಜಾಗೊಳಿಸಿತು’ ಎಂದರು.

‘1999ರಲ್ಲೇ ಮುಡಾ ವಿಜಯನಗರದಲ್ಲಿ ಮೋಹನ್‌ಗೆ ನಿವೇಶನ ಮಂಜೂರು ಮಾಡಿತು. ಇದಾದ 20 ವರ್ಷದ ಬಳಿಕ 555 ಕ್ಯೂ ನಿವೇಶನಕ್ಕೆ ಅಧಿಕಾರಿಗಳು ಮತ್ತೆ ಜೀವ ತುಂಬಿಕೊಂಡರು. 2020ರ ಜನವರಿ, ಜೂನ್‌ನಲ್ಲಿ ಬಹಿರಂಗ ಹರಾಜಿಗೆ ನಿಗದಿಗೊಳಿಸಿದರು. ತಗಾದೆ ತೆಗೆದಿದ್ದಕ್ಕೆ ಸುಮ್ಮನಾದರು. ಆದರೆ 2021ರಲ್ಲಿ ಮತ್ತೊಮ್ಮೆ ಮಂಜೂರು ಮಾಡಿದ್ದಾರೆ. ಇದರಿಂದ ನಮಗೆ ಕಿರಿಕಿರಿಯಾಗಿದೆ’ ಎಂದು ಶ್ರೀನಾಥ್‌ ಮುಡಾ ಅಧಿಕಾರಿಗಳ ಎಡವಟ್ಟನ್ನು ‘ಪ್ರಜಾವಾಣಿ’ಗೆ ಎಳೆಎಳೆಯಾಗಿ ಬಿಚ್ಚಿಟ್ಟರು.

*

96ರಲ್ಲೇ ಇತ್ಯರ್ಥಗೊಂಡಿದ್ದರೂ ಮತ್ತೆ ಮತ್ತೆ ಕಿರಿಕಿರಿ ಎದುರಾಗುತ್ತಿದೆ. ಸರ್ಕಾರಿ ಸಂಸ್ಥೆಯಲ್ಲೇ ಹಿಂಗಾದರೆ ಯಾರನ್ನು ನಂಬೋದು.
–ಎಚ್‌.ಕೆ.ಶ್ರೀನಾಥ್‌, ನಿವೇಶನ ಮಾಲೀಕ

*

555 ಆರ್‌ ನಿವೇಶನದ ಮಾಲೀಕರು ಭೂಮಿಯ ಮೂಲ ದಾಖಲೆಗಳನ್ನು ಮುಡಾಗೆ ಸಲ್ಲಿಸಿ, ತಮ್ಮ ಜಾಗ ಭದ್ರಪಡಿಸಿಕೊಳ್ಳಲಿ.
–ಡಿ.ಬಿ.ನಟೇಶ್‌, ಮುಡಾ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT