ಭಾನುವಾರ, ನವೆಂಬರ್ 17, 2019
24 °C

ಮೈಸೂರಿಗೆ ಕೀರ್ತಿ ತಂದ ವಸುಂಧರಾ

Published:
Updated:
Prajavani

ಮೈಸೂರು: ‘ನೃತ್ಯ ಜಗತ್ತಿನಲ್ಲಿ ಖ್ಯಾತಿ ಗಳಿಸುವ ಮೂಲಕ ವಸುಂಧರಾ ದೊರೆಸ್ವಾಮಿ ಮೈಸೂರಿನ ಕೀರ್ತಿ ಹೆಚ್ಚಿಸಿದ್ದಾರೆ’ ಎಂದು ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರ, ಗುರು–ಶಿಷ್ಯ ಪರಂಪರೆ ಟ್ರಸ್ಟ್ ವತಿಯಿಂದ, ನಗರದ ಕಲಾಮಂದಿರದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಡಾ.ವಸುಂಧರಾ ದೊರೆಸ್ವಾಮಿ 70ನೇ ಜನ್ಮದಿನೋತ್ಸವ ಹಾಗೂ ಅವರ ಜೀವನ ಚರಿತ್ರೆಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.

‘70 ವರ್ಷದ ಏಕವ್ಯಕ್ತಿ ಒಂದು ತಾಸು ಭರತನಾಟ್ಯ ಮಾಡಿದರು ಎಂದರೇ ಯಾರೂ ನಂಬುವುದಿಲ್ಲ. ಆದರೆ ಅದನ್ನು ವಸುಂಧರಾ ದೊರೆಸ್ವಾಮಿ ನಿಜವಾಗಿಸಿದ್ದಾರೆ. ಅನೇಕ ಪ್ರಶಸ್ತಿ, ಬಿರುದುಗಳು ಇವರಿಗೆ ಸಂದಿವೆ. ಈ ಎಲ್ಲವಕ್ಕೂ ಅರ್ಹರಾಗಿದ್ದಾರೆ. ಮೂಡುಬಿದಿರೆಯಿಂದ ಮೈಸೂರಿಗೆ ಬಂದು ನೆಲೆಸಿ, ನೃತ್ಯ ಕಲಿತು, ಅಸಂಖ್ಯಾ ವಿದ್ಯಾರ್ಥಿಗಳಿಗೆ ಗುರುವಾಗಿದ್ದಾರೆ’ ಎಂದು ಸ್ವಾಮೀಜಿ ಶ್ಲಾಘಿಸಿದರು.

ವಸುಂಧರಾ ದೊರೆಸ್ವಾಮಿ ಮಾತನಾಡಿ ‘ಹುಟ್ಟಿದ ಮೇಳೆ ಏನಾದರೂ ಸಾಧನೆ ಮಾಡಬೇಕು. ಸತ್ತ ನಂತರವೂ ಹೆಸರು ಉಳಿಯುವುದು ಶ್ರೇಷ್ಠತೆ. ಅದಕ್ಕೆ ಪೂರಕವಾಗಿ ನನ್ನ ಹೆಸರಿನಲ್ಲಿ ನೃತ್ಯ ಕೇಂದ್ರವನ್ನು ಸ್ಥಾಪಿಸಿರುವವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ವಸುಂಧರಾ ದೊರೆಸ್ವಾಮಿ ಅವರಿಂದ ಏಕವ್ಯಕ್ತಿ ನೃತ್ಯ, ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಕಲಾ ವಿಮರ್ಶಕ ಪ್ರೊ.ಜಾರ್ಜ್ ಎಸ್.ಪೌಲ್, ಕಲಾತಜ್ಞ ಆಶಿಷ್‌ ಖೋಕರ್, ಕೆ.ವಿ.ಮೂರ್ತಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)