ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿ.ವಿ ಕುಲಪತಿ ಆಯ್ಕೆ ಸನ್ನಿಹಿತ

ನವೆಂಬರ್ 12ರಂದು ನಡೆಯಲಿದೆ ಶೋಧನಾ ಸಮಿತಿಯ ಮೊದಲ ಸಭೆ; ಅಂದೇ ಹೆಸರುಗಳ ಪಟ್ಟಿ ರಚನೆ
Last Updated 31 ಅಕ್ಟೋಬರ್ 2018, 8:54 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯಕ್ಕೆ ಕುಲಪತಿಯಿಲ್ಲದೆ 2 ವರ್ಷವಾಗುತ್ತಿದ್ದು, ನೇಮಕ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಹೊಸದಾಗಿ ರಚನೆಯಾಗಿರುವ ಕುಲಪತಿ ಶೋಧನಾ ಸಮಿತಿಯ ಮೊದಲ ಸಭೆ ನ. 12ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಕುಲಪತಿಯಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವಧಿ ಮುಗಿದ ಬಳಿಕ, 2017ರ ಜ. 10ರಿಂದ ವಿ.ವಿ ಕುಲಪತಿ ಹುದ್ದೆ ಖಾಲಿ ಇದೆ. ಈ ಅವಧಿಯಲ್ಲಿ 6 ಪ್ರಭಾರ ಕುಲಪತಿಗಳು ಕಾರ್ಯನಿರ್ವಹಿಸಿದ್ದಾರೆ. ಇದರಿಂದಾಗಿ ವಿ.ವಿ.ಯಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳು ಕ್ಷೀಣಿಸಿದ್ದು, ಕುಲಪತಿಯನ್ನು ಶೀಘ್ರವೇ ನೇಮಿಸಬೇಕು ಎಂಬ ಒತ್ತಡ ಸರ್ಕಾರದ ಮೇಲೂ ಇದೆ.

ಅರ್ಹಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ 60ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ ಮೂವರ ಪಟ್ಟಿಯನ್ನು ನ. 12ರಂದೇ ಅಂತಿಮಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸಮಿತಿ ಅಧ್ಯಕ್ಷರಾಗಿ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ ಅವರನ್ನು ನೇಮಿಸಲಾಗಿದೆ. ರಾಜ್ಯಪಾಲರ ಪ್ರತಿನಿಧಿಯಾಗಿ ಇಂದೋರ್ ದೇವಿ ಅಹಿಲ್ಯಾ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಬಿ.ಸಿ.ಚಪ್ಪರವಾಲ್, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪ್ರತಿನಿಧಿಯಾಗಿ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಜಗದೀಶ ಕುಮಾರ್, ಮೈಸೂರು ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಹೈದರಾಬಾದ್‌ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ.ಎಸ್.ಚಂದ್ರಶೇಖರ್ ಸದಸ್ಯರಾಗಿ ನೇಮಕ ಮಾಡಲಾಗಿದೆ.

‘ವಿ.ವಿ.ಗೆ ಅರ್ಹರು ಕುಲಪತಿಯಾಗಬೇಕು. ನೂರು ವರ್ಷ ಪೂರೈಸಿರುವ ವಿಶ್ವವಿದ್ಯಾಲಯವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುವಂತೆಕಾರ್ಯ ನಿರ್ವಹಿಸುವವರನ್ನು ಆಯ್ಕೆ ಮಾಡಬೇಕು ಎನ್ನುವುದು ಸಮಿತಿಯ ಆದ್ಯತೆಯಾಗಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆಯೂ ಇದೇ ಸೂಚನೆ ನೀಡಿದೆ. ಈಗಾಗಲೇ ಕುಲಪತಿ ಆಯ್ಕೆ ತಡವಾಗಿದೆ. ಹಾಗೆಂದು ಅವಸರ ಮಾಡಬಾರದು. ಅರ್ಹರ ಪಟ್ಟಿ ಸಿದ್ಧಪಡಿಸುವಂತೆ ತಿಳಿಸಲಾಗಿದೆ’ ಎಂದು ಮೂಲಗಳು ಖಚಿತಪಡಿಸಿವೆ.

ಸರಣಿ ಸಭೆಗಳು: ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರಭಾರ ಕುಲಪತಿಗಳೇ ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೋಧನಾ ಸಮಿತಿಗಳ ಸರಣಿ ಸಭೆಗಳು ನಡೆಯುತ್ತಿವೆ. ನ. 9ರಂದು ಮಂಗಳೂರು ವಿಶ್ವವಿದ್ಯಾಲಯ, ನ. 10ರಂದು ಕರ್ನಾಟಕ ರಾಜ್ಯ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಶೋಧನಾ ಸಮಿತಿಯು ಸಭೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT