ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ಚಾತುರ್ಮಾಸ ಕಂಡ ಮೈಸೂರು

Last Updated 29 ಡಿಸೆಂಬರ್ 2019, 9:18 IST
ಅಕ್ಷರ ಗಾತ್ರ

ಮೈಸೂರು: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಮೈಸೂರಿನಲ್ಲಿ ಜುಲೈನಿಂದ ಸೆಪ್ಟೆಂಬರ್‌ವರೆಗೆ ನಡೆಸಿದ 81ನೇ ಚಾತುರ್ಮಾಸ್ಯವೇ ಅವರ ಜೀವನದ ಕೊನೆಯ ಚಾತುರ್ಮಾಸ್ಯವಾಯಿತು. ಸ್ವಾಮೀಜಿ ಅವರ ಒಟ್ಟು 4 ಚಾತುರ್ಮಾಸ್ಯಗಳನ್ನು ಕಂಡಿರುವ ನಗರಿ ಎಂಬ ಹೆಗ್ಗಳಿಕೆಗೆ ಸಾಂಸ್ಕೃತಿಕ ನಗರಿ ಪಾತ್ರವಾಗಿದೆ.

ಚಾತುರ್ಮಾಸ್ಯಗಳಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳನ್ನಷ್ಟೇ ನಡೆಸದ ಇವರು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮಾಜ ಸುಧಾರಣೆಯನ್ನೂ ಕೈಗೊಳ್ಳುತ್ತಿದ್ದುದ್ದು ವಿಶೇಷ. ಸೆ. 11ರಂದು ಇಲ್ಲಿನ ಮಂಜುನಾಥಪುರದ ಕೊಳಗೇರಿಯಲ್ಲಿ ಸಾಮರಸ್ಯ ಪಾದಯಾತ್ರೆ ಕೈಗೊಳ್ಳುವ ಮೂಲಕ ಸನಾತನವಾದಿ ಎಂಬ ತಮ್ಮ ವಿರುದ್ಧದ ಟೀಕೆಗೆ ಉತ್ತರ ನೀಡಿದ್ದರು.

ಇಲ್ಲಿನ ರಾಚಮ್ಮ–ಚೌಡಯ್ಯ ದಂಪತಿ ಮನೆಗೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿ ಆಶೀರ್ವದಿಸಿದ್ದರು. ಅನಾರೋಗ್ಯದ ಉಂಟಾಗಿ ಉಪ್ಪಿನಾಂಶ ಕಡಿಮೆಯಾಗಿತ್ತು. ವೈದ್ಯರು ಡ್ರಿಪ್ ಅಳವಡಿಸಿ ವಿಶ್ರಾಂತಿಗೆ ಸೂಚಿಸಿದ್ದರು. ಅರ್ಧ ಬಾಟಲಿ ಡ್ರಿಪ್ ಖಾಲಿಯಾಗುತ್ತಿದ್ದಂತೆ ‘ನಾನು ಈ ಮೊದಲೇ ದಲಿತರ ಮನೆಗೆ ಭೇಟಿ ನೀಡುವೆ ಎಂದು ಹೇಳಿದ್ದೆ. ಹೋಗಲೇಬೇಕು’ ಎಂದು ಹಠವಿಡಿದು, ಸುರಿಯುತ್ತಿದ್ದ ಮಳೆಯ ನಡುವೆ ಗಾಲಿಕುರ್ಚಿಯ ಸಹಾಯದಿಂದ ನಿಗದಿತ ಸಮಯಕ್ಕೆ ಇವರು ಪಾದಯಾತ್ರೆ ಕೈಗೊಂಡಿದ್ದು, ಕೊಳಗೇರಿ ನಿವಾಸಿಗಳಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.

ಈ ವೇಳೆ ಪ್ರತಿಕ್ರಿಯಿಸಿದ್ದ ಅವರು, ‘ದಲಿತರ ಏಳ್ಗೆಗಾಗಿ ಶ್ರಮಿಸುತ್ತಿರುವೆ. ನನ್ನ ಪ್ರಯತ್ನವನ್ನು ನಾನು ಮಾಡುವೆ’ ಎಂದಷ್ಟೇ ಹೇಳಿ ಪಾದಯಾತ್ರೆಯಲ್ಲಿ ಮುನ್ನಡೆದಿದ್ದರು.

ಮೈಸೂರಿನಲ್ಲಿ ಇವರು 1954ರಲ್ಲೇ ಮಾಧ್ವ ಹಾಸ್ಟೆಲ್‌ನ್ನು ತೆರೆಯುವ ಮೂಲಕ ಬ್ರಾಹ್ಮಣ ಸಮುದಾಯದವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಇಲ್ಲಿ 120 ಮಂದಿ ವಿದ್ಯಾರ್ಥಿಗಳು ಈಗ ಇದ್ದಾರೆ.

ನಂತರ, ಇವರು ಪೇಜಾವರ ಉಚಿತ ಸಾರ್ವಜನಿಕ ವಿದ್ಯಾರ್ಥಿ ನಿಲಯ ತೆರೆಯುವ ಮೂಲಕ ಸಮಾಜದ ಎಲ್ಲ ಹಿಂದುಳಿದ, ದಲಿತ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ತೆರೆದರು. ಇಲ್ಲಿ ಮೇಘಾಲಯ, ಜಾರ್ಖಾಂಡ್, ಮಣಿಪುರ ರಾಜ್ಯಗಳ 55 ಮಂದಿ ಬಡ ವಿದ್ಯಾರ್ಥಿಗಳೊಂದಿಗೆ ರಾಜ್ಯದ ವಿದ್ಯಾರ್ಥಿಗಳೂ ಇದ್ದಾರೆ. ಒಟ್ಟು 140 ಮಂದಿ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರಥಮ ಪಿಯುನಿಂದ ಶಿಕ್ಷಣ ಮುಗಿಸುವವರೆಗೂ ಉಚಿತ ಊಟ, ವಸತಿ ಸೌಕರ್ಯವನ್ನು ಕಲ್ಪಿಸಿಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT