ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ, ವನ್ಯಜೀವಿ: ಎಚ್ಚರಿಕೆ ನಡೆ ಅಗತ್ಯ

‘ಸಂರಕ್ಷಣಾ ಉಪನ್ಯಾಸ’ದಲ್ಲಿ ಲಕ್ಷ್ಮಣ್‌ ಅಭಿಪ್ರಾಯ
Last Updated 16 ಅಕ್ಟೋಬರ್ 2019, 20:23 IST
ಅಕ್ಷರ ಗಾತ್ರ

ಮೈಸೂರು: ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ಇಂದಿರಾ ಗಾಂಧಿ ಅವರು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದರು. ಆದರೆ ಅವರ ಮೊಮ್ಮಗ ರಾಹುಲ್‌ ಗಾಂಧಿ ಅವರು ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಹೇರಿರುವ ನಿಷೇಧ ತೆರವಿಗೆ ಒತ್ತಾಯಿಸುತ್ತಿರುವುದು ವಿಪರ್ಯಾಸ ಎಂದು ನಿವೃತ್ತ ಐಎಫ್‌ಎಸ್‌ ಅಧಿಕಾರಿ ಎ.ಸಿ.ಲಕ್ಷ್ಮಣ್ ಹೇಳಿದರು.

ಚಾಮರಾಜೇಂದ್ರ ಮೃಗಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘22ನೇ ಸಂರಕ್ಷಣಾ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಹೇರಿರುವ ನಿಷೇಧವನ್ನು ತೆಗೆಯಲು ಕೇರಳ ಸರ್ಕಾರ ಲಾಬಿ ನಡೆಸುತ್ತಿದೆ. ರಾತ್ರಿ ಸಂಚಾರ ಆರಂಭವಾದರೆ ಕಳ್ಳಸಾಗಣೆ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಅದೇ ಉದ್ದೇಶದಿಂದ ನಿಷೇಧ ತೆರವಿಗೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗುಂಡ್ಲುಪೇಟೆಯಲ್ಲಿ ಇತ್ತೀಚೆಗೆ ನರಭಕ್ಷಕ ಹುಲಿಯನ್ನು ಸೆರೆಹಿಡಿಯಲಾಗಿದೆ. ಹುಲಿಯನ್ನು ಕೊಲ್ಲುವಂತೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಆದರೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಇಂತಹ ಒತ್ತಡಗಳ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕುತ್ತಾರೆ. ಅರಣ್ಯ ಮತ್ತು ವನ್ಯಜೀವಿಗಳ ವಿಷಯದಲ್ಲಿ ಯಾರೇ ಆಗಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದರು.

‘ಹಲವು ದಶಕಗಳಿಂದ ಮರಗಳನ್ನು ಕಡಿದು ಕಾಡು ನಾಶ ಮಾಡಿದ್ದೇವೆ. ನಾವು ನಾಶ ಮಾಡಿರುವುದರಲ್ಲಿ ಇದುವರೆಗೆ ಶೇ 12 ರಷ್ಟು ಕಾಡನ್ನು ಮಾತ್ರ ಮತ್ತೆ ಬೆಳೆಸಿದ್ದೇವೆ. ಮನುಷ್ಯನಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಕಾಡು ಬೆಳೆಸುವ ಕೆಲಸವನ್ನು ಪ್ರಕೃತಿಯೇ ಮಾಡಬೇಕು’ ಎಂದರು.

ವನ್ಯಜೀವಿ ತಜ್ಞ ಸೇನಾನಿ ಮಾತನಾಡಿ, ಗುಂಡ್ಲುಪೇಟೆಯಲ್ಲಿ ನರಭಕ್ಷಕ ಹುಲಿ ಕಾಣಿಸಿಕೊಂಡ ಬಳಿಕ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದರು. ಸಂಜೆ 5ರ ಬಳಿಕ ಯಾರೂ ಮನೆಯಿಂದ ಹೊರ ಬರುತ್ತಿರಲಿಲ್ಲ. ಹುಲಿಯನ್ನು ಕೊಲ್ಲಬೇಕೇ, ಬೇಡವೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ–ವಿರೋಧ ಚರ್ಚೆ ನಡೆಸುವುದು ಸುಲಭ. ಆದರೆ ವಾಸ್ತವ ಪರಿಸ್ಥಿತಿ ಭಿನ್ನವಾಗಿರುತ್ತದೆ. ಕಾಡು ಮತ್ತು ಹುಲಿಗಳನ್ನು ರಕ್ಷಿಸುವ ಕೆಲಸಕ್ಕೆ ಜನರ ಸಹಕಾರವೂ ಬೇಕು ಎಂದು ತಿಳಿಸಿದರು.

‘ಕಾಳ್ಗಿಚ್ಚು: ಹಿಂದಿನ ಮತ್ತು ಪ್ರಸ್ತುತ ಸನ್ನಿವೇಶ’ ವಿಷಯದ ಬಗ್ಗೆ ಅಮೇಯ ಗೋಡೆ ಉಪನ್ಯಾಸ ನೀಡಿದರು. ಸೇಂಟ್‌ ಜೋಸೆಫ್ಸ್‌ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಎಸ್‌.ವರ್ಷಿಣಿ ಅವರು ಪಕ್ಷಿಗಳ ಕುರಿತು ಮಾತನಾಡಿದರು.

ವನ್ಯಜೀವಿ ತಜ್ಞ ಕೃಪಾಕರ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಬಿ.ಪಿ. ರವಿ, ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT