ಜಿ.ಪಂ: ಕಾಂಗ್ರೆಸ್‌–ಜೆಡಿಎಸ್‌ ದೋಸ್ತಿ ಸಾಧ್ಯತೆ

7
ಧ್ರುವನಾರಾಯಣ ನೇತೃತ್ವದಲ್ಲಿ ಕಾಂಗ್ರೆಸ್‌ ಸದಸ್ಯರ ಸಭೆ

ಜಿ.ಪಂ: ಕಾಂಗ್ರೆಸ್‌–ಜೆಡಿಎಸ್‌ ದೋಸ್ತಿ ಸಾಧ್ಯತೆ

Published:
Updated:

ಮೈಸೂರು: ರಾಜ್ಯದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರವಿರುವುದರಿಂದ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲೂ ಇವೆರಡು ಪಕ್ಷಗಳು ಜತೆಯಾಗಿ ಆಡಳಿತ ನಡೆಸುವ ಸಾಧ್ಯತೆಗಳು ಹೆಚ್ಚಿವೆ.

ಸಂಸದ ಧ್ರುವನಾರಾಯಣ ನೇತೃತ್ವದಲ್ಲಿ ಮೈಸೂರಿನಲ್ಲಿ ಶನಿವಾರ ಕಾಂಗ್ರೆಸ್‌ನ ಜಿಲ್ಲಾ ಪಂಚಾಯಿತಿ ಸದಸ್ಯರ ಸಭೆ ನಡೆಯಿತು. ಸದಸ್ಯರ ಅಭಿಪ್ರಾಯ ಪಡೆದುಕೊಳ್ಳಲು ಮತ್ತು ಮೈತ್ರಿಯ ಬಗ್ಗೆ ತಂತ್ರಗಳನ್ನು ರೂಪಿಸಲು ಸಭೆ ಏರ್ಪಡಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಬೆಳಿಗ್ಗೆ 11ಕ್ಕೆ ಸಭೆ ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಕಾಂಗ್ರೆಸ್‌ ಸದಸ್ಯರ ಸಭೆ ನಡೆಸಲಾಗಿದೆ.

ಸದಸ್ಯಬಲದ ಕೊರತೆಯಿಂದ ಸ್ಥಾಯಿ ಸಮಿತಿ ಚುನಾವಣೆಯನ್ನು ಮುಂದೂಡಲಾಗಿದೆ. ಕಾಂಗ್ರೆಸ್–ಜೆಡಿಎಸ್‌ ದೋಸ್ತಿ ಖಚಿತವಾದ ಬಳಿಕ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯಲಿ ಎಂಬ ಕಾರಣ ಶನಿವಾರದ ಸಭೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ.

‘ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಶುಕ್ರವಾರ ನನಗೆ ದೂರವಾಣಿ ಕರೆಮಾಡಿ, ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್‌–ಕಾಂಗ್ರೆಸ್ ಮೈತ್ರಿಯ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದ್ದರು. ಅದರಂತೆ ಸದಸ್ಯರ ಅಭಿಪ್ರಾಯ ಪಡೆಯಲು ಸಭೆ ಕರೆಯಲಾಗಿತ್ತು’ ಎಂದು ಧ್ರುವನಾರಾಯಣ ಅವರು ಸಭೆಯ ಬಳಿಕ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಪಕ್ಷವೇ ಅತಿ ದೊಡ್ಡ ಪಕ್ಷವಾಗಿದೆ. ಆದರೆ ಜೆಡಿಎಸ್‌–ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದೆ. ಜಿ.ಪಂನಲ್ಲಿ ಸದ್ಯ ಜೆಡಿಎಸ್‌ನ ನಯೀಮಾ ಸುಲ್ತಾನ ಅಧ್ಯಕ್ಷೆಯಾಗಿದ್ದರೆ, ಬಿಜೆಪಿಯ ನಟರಾಜ್‌ ಉಪಾಧ್ಯಕ್ಷರಾಗಿದ್ದಾರೆ.

ಜೆಡಿಎಸ್‌–ಬಿಜೆಪಿ ಅಧಿಕಾರಕ್ಕೇರುವ ವೇಳೆ ಮಾಡಿಕೊಂಡ ಒಪ್ಪಂದದಂತೆ ನಯೀಮಾ ಅವರ ಅಧಿಕಾರಾವಧಿ ಕೊನೆಗೊಂಡಿದೆ. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯಾದರೆ ಜಿಲ್ಲಾ ಪಂಚಾಯಿತಿಯಲ್ಲಿ ಇನ್ನುಳಿದ ಅವಧಿಗೆ ಹೊಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇಮಕ ನಡೆಯಲಿದೆ.

ಶಾಸಕ ಸಿ.ಅನಿಲ್‌ ಕುಮಾರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಡಿ.ರವಿಶಂಕರ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !