ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

7
ಜಿಲ್ಲಾ ಪಂಚಾಯಿತಿ: 10 ದಿನಗಳ ಒಳಗಾಗಿ ಹೊಸ ದಿನಾಂಕ ಪ್ರಕಟ

ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

Published:
Updated:
ಮೈಸೂರು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಸದಸ್ಯರು ವಾಗ್ವಾದ ನಡೆಸಿದರು

ಮೈಸೂರು: ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಗೆ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಗಳಿಗೆ ಶನಿವಾರ ನಡೆಯಬೇಕಿದ್ದ ಚುನಾವಣೆಯನ್ನು ಸದಸ್ಯಬಲದ ಕೊರತೆಯ ಕಾರಣವೊಡ್ಡಿ ಮುಂದೂಡಲಾಯಿತು.

ಈ ಮೊದಲು ನಡೆಯಬೇಕಿದ್ದ ಚುನಾವಣಾ ಸಭೆಯನ್ನು ಕೋರಂ ಕೊರತೆ ಕಾರಣ ಮುಂದೂಡಲಾಗಿತ್ತು. ಹಿಂದೆ ಮುಂದೂಡಿದ್ದ ಸಭೆ ಇದಾಗಿದ್ದರಿಂದ ಕೋರಂನ ಅಗತ್ಯವಿರಲಿಲ್ಲ. ಆದರೂ 48 ಚುನಾಯಿತ ಪ್ರತಿನಿಧಿಗಳಲ್ಲಿ ಅಧ್ಯಕ್ಷರು ಸೇರಿದಂತೆ 24 ಮಂದಿ ಮಾತ್ರ ಹಾಜರಿದ್ದ ಕಾರಣ ಒಮ್ಮತದಿಂದ ಸಭೆಯನ್ನು ಮುಂದೂಡಲು ತೀರ್ಮಾನಿಸಲಾಯಿತು.

ಚುನಾವಣೆ ನಡೆಸುವ ಸಂಬಂಧ ಅಧ್ಯಕ್ಷೆ ನಯೀಮಾ ಸುಲ್ತಾನಾ ನೇತೃತ್ವದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಪಡಿಸಲಾಗಿತ್ತು. ಸದಸ್ಯರು ಬಾರದ ಕಾರಣ ಸಭೆ ಅರ್ಧಗಂಟೆ ತಡವಾಗಿ ಆರಂಭವಾಯಿತು.

ಸಭೆ ಆರಂಭವಾದ ಕೂಡಲೇ ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಕೆ.ಶಿವರಾಮೇಗೌಡ ಅವರು ಸದಸ್ಯಬಲದ ಕೊರತೆಯಿದೆ ಎಂಬುದನ್ನು ಅಧ್ಯಕ್ಷರ ಗಮನಕ್ಕೆ ತಂದರು. ‘ಸಭೆಯನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸುತ್ತೇನೆ’ ಎಂದು ನಯೀಮಾ ಹೇಳಿದರು.

ಈ ವೇಳೆ ಮಾತನಾಡಿದ ಜೆಡಿಎಸ್‌ ಸದಸ್ಯ ಬೀರಿಹುಂಡಿ ಬಸವಣ್ಣ, ಸ್ಥಾಯಿ ಸಮಿತಿಗಳ ಅವಧಿ ಕೊನೆಗೊಂಡು ಮೂರು ತಿಂಗಳುಗಳು ಕಳೆದಿವೆ. ಸಭೆಯನ್ನು ಮತ್ತೆ ಮತ್ತೆ ಮುಂದೂಡುವುದು ಸರಿಯಲ್ಲ. ಮುಂದಿನ ಸಭೆಯ ದಿನಾಂಕವನ್ನು ಈಗಲೇ ನಿಗದಿಮಾಡಬೇಕು ಎಂದರು.

ಇನ್ನೂ ಎಲ್ಲ ಸದಸ್ಯರ ಹಾಜರಾತಿ ತೆಗೆದುಕೊಂಡಿಲ್ಲ. ಸದಸ್ಯರ ಕೊರತೆ ಇದೆ ಎಂಬುದನ್ನು ಹೇಗೆ ನಿರ್ಧರಿಸಿದ್ದೀರಿ ಎಂದೂ ಅವರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಮುಂದಿನ ಸಭೆಯ ದಿನಾಂಕ ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ವರಿಷ್ಠರ ಜತೆ ಚರ್ಚಿಸಬೇಕಿದೆ ಎಂದರು.

ಸಭೆಯನ್ನು ಮುಂದೂಡುವುದಾಗಿ ಅಧ್ಯಕ್ಷರು ತಿಳಿಸಿರುವುದರಿಂದ ಚರ್ಚೆ ಅನಗತ್ಯ ಎಂದು ಕಾಂಗ್ರೆಸ್‌ ಸದಸ್ಯ ಡಿ.ರವಿಶಂಕರ್‌ ಹೇಳಿದರು. ಈ ವೇಳೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಕೆಲಹೊತ್ತು ವಾಗ್ವಾದ ನಡೆಯಿತು. ಆದರೆ ನಯೀಮಾ ತಮ್ಮ ಕುರ್ಚಿಯಿಂದ ಎದ್ದು ಹೊರನಡೆದರು.

ಸಭೆಗೆ ಕೋರಂನ ಅಗತ್ಯವಿಲ್ಲ ಎಂಬುದನ್ನು ಮನಗಂಡ ಉಪಕಾರ್ಯದರ್ಶಿಯವರು, ಅಧ್ಯಕ್ಷರು ಸಭೆಯನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಮತ್ತೆ ಸಭೆ ಆರಂಭವಾದಾಗ ಮಾತನಾಡಿದ ಅವರು, ಈ ಸಭೆಗೆ ಕೋರಂನ ಅವಶ್ಯಕತೆ ಇಲ್ಲ. ಆದರೆ ಐದು ಸ್ಥಾಯಿ ಸಮಿತಿಗಳಿಗೆ 33 ಸದಸ್ಯರು ಆಯ್ಕೆಯಾಬೇಕು. ಇಲ್ಲಿ 24 ಮಂದಿ ಇದ್ದಾರೆ. ತಾಂತ್ರಿಕವಾಗಿ ಸಭೆ ನಡೆಸಲು ಸಾಧ್ಯವೇ ಎಂಬುದನ್ನು ಅಧ್ಯಕ್ಷರು ನಿರ್ಧರಿಸಬೇಕು ಎಂದು ಹೇಳಿದರು.

ಸಾಮಾನ್ಯ ಸ್ಥಾಯಿ ಸಮಿತಿ (6 ಸದಸ್ಯರು), ಹಣಕಾಸು ಮತ್ತು ಯೋಜನೆ (6), ಸಾಮಾಜಿಕ ನ್ಯಾಯ (7), ಶಿಕ್ಷಣ ಮತ್ತು ಆರೋಗ್ಯ (7) ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗಳಿಗೆ (7) ಒಟ್ಟು 33 ಸದಸ್ಯರು ಬೇಕು. ಕೋರಂ ನಿಯಮ ಅನ್ವಯವಾಗುವುದಿಲ್ಲವಾದರೂ ಚುನಾವಣೆ ನಡೆಸುವುದು ಸರಿಯೆನಿಸುವುದಿಲ್ಲ. ಸಭೆಯನ್ನು ಮುಂದೂಡಲಾಗಿದ್ದು, 10 ದಿನಗಳ ಒಳಗಾಗಿ ಹೊಸ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಅಧ್ಯಕ್ಷರು ಪ್ರಕಟಿಸಿದರು.

‘ಈ ವಿಷಯ ಹೇಳಲು ಇಷ್ಟು ಹೊತ್ತು ಕಾಯಿಸಿದ್ದೇಕೆ? ಒಂದು ಪಕ್ಷದವರ ಅಭಿಪ್ರಾಯವನ್ನು ಮಾತ್ರ ಕೇಳಿ ಏಕಾಏಕಿ ಸಭೆ ಮುಂದೂಡುವ ನಿರ್ಧಾರ ತೆಗೆದುಕೊಂಡದ್ದು ಸರಿಯಲ್ಲ. ನಮ್ಮ ಅಭಿಪ್ರಾಯವನ್ನೂ ಕೇಳಿಬೇಳಿತ್ತು’ ಎಂದು ರವಿಶಂಕರ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ‘ಸಭೆ ಮುಂದೂಡಬೇಕು ಎಂಬುದು ನನ್ನ ಅಭಿಪ್ರಾಯ. ನಿಮ್ಮ ಅಭಿಪ್ರಾಯ ತಿಳಿಸಿ. ಎಲ್ಲರ ಒಪ್ಪಿಗೆಯಿದ್ದರೆ ಚುನಾವಣೆ ನಡೆಯಲಿ’ ಎಂದರು. ಆದರೆ ಚುನಾವಣೆಗೆ ಯಾರೂ ಉತ್ಸುಕರಾಗದ ಕಾರಣ ಸಭೆಯನ್ನು ಮುಂದೂಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !