ಶುಕ್ರವಾರ, ಜನವರಿ 21, 2022
29 °C
ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: ಹಣ, ಜಾತಿ ಸಮೀಕರಣ, ಅಧಿಕಾರ ಬಲ

ಮೈಸೂರು–ಚಾಮರಾಜನಗರ ಪರಿಷತ್ | ಕಾಂಗ್ರೆಸ್‌, ಬಿಜೆಪಿ ಹುಮಸ್ಸು; ಜೆಡಿಎಸ್‌ಗೆ ಸವಾಲು

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಅಭ್ಯರ್ಥಿಗಳು

ಮೈಸೂರು: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸತತ ಗೆಲುವಿನ ಇತಿಹಾಸದ ಬಲ, ಬಿಜೆಪಿಗೆ ಅಧಿಕಾರದ ಬಲವಿದ್ದು, ಎರಡೂ ಪಕ್ಷಗಳು ಗೆಲ್ಲುವ ಹುಮ್ಮಸ್ಸಿನಲ್ಲಿ ಪ್ರಚಾರ ನಡೆಸಿವೆ. ಜೆಡಿಎಸ್‌ಗೆ ಇತಿಹಾಸದ ಬಲವಿದ್ದರೂ ಶಾಸಕ ಜಿ.ಟಿ.ದೇವೇಗೌಡರಂಥ ಪ್ರಮುಖ ಮುಖಂಡರು ದೂರ ಸರಿದಿರುವುದು ಸವಾಲಾಗಿ ಪರಿಣಮಿಸಿದೆ.

ಕ್ಷೇತ್ರದ 33 ವರ್ಷಗಳ ಇತಿಹಾಸದಲ್ಲಿ ಜನತಾ ಪರಿವಾರ ಹಾಗೂ ಕಾಂಗ್ರೆಸ್‌ನದ್ದೇ ಪಾರುಪಥ್ಯ. ಬಿಜೆಪಿ ಒಮ್ಮೆ ಮಾತ್ರ ಗೆಲುವಿನ ರುಚಿ ಕಂಡಿದೆ.

ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಎರಡು ಬಾರಿ ಗೆದ್ದಿದ್ದ ಸಂದೇಶ್‌ ನಾಗರಾಜ್‌ ಹಾಗೂ ಆರ್‌.ಧರ್ಮಸೇನ ಅವರನ್ನು ಕೈಬಿಟ್ಟು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕ್ರಮವಾಗಿ ಹೊಸಮುಖಗಳಾದ ಸಿ.ಎನ್‌.ಮಂಜೇಗೌಡ ಹಾಗೂ ಡಾ.ಡಿ.ತಿಮ್ಮಯ್ಯ ಅವರಿಗೆ ಮಣೆ ಹಾಕಿದ್ದರೆ, ಕಳೆದ ಸಲ ಸೋತಿದ್ದ ಆರ್‌.ರಘು (ಕೌಟಿಲ್ಯ) ಅವರಿಗೆ ಬಿಜೆಪಿ ಮತ್ತೊಂದು ಅವಕಾಶ ನೀಡಿದೆ.

ಪಕ್ಷದೊಳಗೇ ಅಸಮಾಧಾನ ಎದ್ದಿದ್ದರಿಂದ ಕಾಂಗ್ರೆಸ್‌ ಮೊದಲ ಬಾರಿ ಎನ್‌.ರಾಚಯ್ಯ ಕುಟುಂಬದ ಹೊರಗಿನ ಸದಸ್ಯರನ್ನು ಕಣಕ್ಕಿಳಿಸಿದೆ. ಆರೋಗ್ಯಾಧಿಕಾರಿಯಾಗಿ ಮೈಸೂರು–ಚಾಮರಾಜನಗರ ಅವಳಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿರುವ ಡಾ.ತಿಮ್ಮಯ್ಯ, ಸಿದ್ದರಾಮಯ್ಯ ಹೆಸರು ಜಪಿಸುತ್ತಲೇ ಪ್ರಚಾರ ನಡೆಸುತ್ತಿದ್ದಾರೆ. ತವರು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ, ಸಭೆ ಮೇಲೆ ಸಭೆ ನಡೆಸುವುದರ ಜೊತೆಗೆ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಬೇಕೆಂದು ಸ್ಥಳೀಯ ಮುಖಂಡರಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ.

‘2009ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವಿದ್ದಾಗ ಈ ಕ್ಷೇತ್ರ ಬಿಜೆಪಿಗೆ ಒಲಿದಿತ್ತು. ಈಗಲೂ ಬಿಜೆಪಿ ಸರ್ಕಾರವಿದ್ದು, ಈ ಬಾರಿ ಗೆಲುವು ತಮ್ಮದೇ’ ಎನ್ನುತ್ತಿದ್ದಾರೆ ಈ ಪಕ್ಷದ ಅಭ್ಯರ್ಥಿ ರಘು. ಹಿಂದೆ ಈ ಭಾಗದಲ್ಲಿ ದುರ್ಬಲ ಎನಿಸಿಕೊಂಡಿದ್ದ ಬಿಜೆಪಿ ಸಂಘಟನೆಯು ಈಗ ಬಹಳಷ್ಟು ಸುಧಾರಿಸಿದೆ.

ಜೆಡಿಎಸ್‌ ಪಾಲಿಗೆ ಸದ್ಯದ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಜಿ.ಟಿ.ದೇವೇಗೌಡ ತಟಸ್ಥವಾಗಿದ್ದಾರೆ. ಸಂದೇಶ್‌ ನಾಗರಾಜ್‌ ಬಿಜೆಪಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಚಾಮರಾಜನಗರದಲ್ಲಿ ಈ ಪಕ್ಷದ ಸಂಘಟನೆ ಇಲ್ಲ. ಹೀಗಾಗಿ, ಪಕ್ಷದ ಅಭ್ಯರ್ಥಿ ಮಂಜೇಗೌಡ ಬಹಳಷ್ಟು ‘ಕಸರತ್ತು’ ನಡೆಸಬೇಕಿದೆ. ಅವರು ಕಾಂಗ್ರೆಸ್‌ ಟಿಕೆಟ್‌ ಸಿಗದೆ ಜೆಡಿಎಸ್‌ ಸೇರಿದ ದಿನವೇ ಟಿಕೆಟ್‌ ಗಿಟ್ಟಿಸಿಕೊಂಡಿದ್ದರು.

‘ಕೆಲವರು ಪಕ್ಷದ ಹೆಸರು ಹೇಳಿಕೊಂಡು ಗೆದ್ದು, ಬೆನ್ನಿಗೆ ಚೂರಿ ಹಾಕಿದ್ದಾರೆ. ಈ ಎಲ್ಲಾ ಸವಾಲನ್ನು ಮೆಟ್ಟಿ ನಿಂತು ಅಭ್ಯರ್ಥಿ ಗೆಲ್ಲಿಸಿಕೊಡುವ ವಿಶ್ವಾಸವಿದೆ’ ಎನ್ನುತ್ತಾರೆ ಶಾಸಕ ಸಾ.ರಾ.ಮಹೇಶ್‌.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಸ್ಪರ್ಧಾ ಕಣದಲ್ಲಿದ್ದು, ‌‘ಹೋರಾಟ’ವೊಂದೇ ಅವರಿಗೆ ಶ್ರೀರಕ್ಷೆ!

ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದು, ಜಾತಿ ಸಮೀಕರಣದ ಜೊತೆ ‘ಧನಶಕ್ತಿ’ ಮಹಿಮೆಯೂ ಜೋರಾಗಿದೆ. ಪ್ರತಿ ವೋಟಿನ ರೇಟು ₹ 30 ಸಾವಿರದಿಂದ ₹ 50 ಸಾವಿರಕ್ಕೇರಿರುವ ಬಗ್ಗೆ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಮತ ಲೆಕ್ಕಾಚಾರದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್, ಜೆಡಿಎಸ್‌ ಮುಂಚೂಣಿಯಲ್ಲಿದ್ದರೂ, ಬಿಜೆಪಿ ಅಧಿಕಾರ ಬಲವು ನಿದ್ದೆಗೆಡಿಸಿದೆ.

ತ್ರಿಕೋನ ಸ್ಪರ್ಧೆಯ ಚುನಾವಣಾ ಪ್ರಚಾರ ಕಾವೇರಿದ್ದು, ಅಭ್ಯರ್ಥಿಗಳಿಗೆ ಮಾತ್ರವಲ್ಲ; ಮೂರೂ ಪಕ್ಷದ ಸ್ಥಳೀಯ ನಾಯಕರಿಗೆ ಪ್ರತಿಷ್ಠೆ ಹಾಗೂ ಸವಾಲಾಗಿ ಪರಿಣಮಿಸಿದೆ. ಕ್ಷೇತ್ರ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯಿಂದ ಒಬ್ಬರೂ ಸ್ಪರ್ಧಿಗಳಿಲ್ಲ. ಈ ಬಗ್ಗೆ ಆ ಭಾಗದಲ್ಲಿ ಅಸಮಾಧಾನವೂ ಇದೆ. ಅಲ್ಲಿ ಹೆಚ್ಚಿನ ರಾಜಕೀಯ ಚಟುವಟಿಕೆಗಳು ಕಂಡು ಬಂದಿಲ್ಲ.

ಗೆದ್ದ ಮೇಲೆ ತಿರುಗಿಯೂ ನೋಡಲ್ಲ!

‘ಗ್ರಾಮೀಣಾಭಿವೃದ್ಧಿಯೇ ಗುರಿ ಎಂದು ಬೊಬ್ಬಿಡುತ್ತಾರೆ. ಗೆದ್ದ ಮೇಲೆ ಪಂಚಾಯಿತಿಯತ್ತ ತಿರುಗಿಯೂ ನೋಡಲ್ಲ. ಎಷ್ಟು ಅನುದಾನ ತರುತ್ತಾರೆ? ಯಾವ ಕೆಲಸಕ್ಕೆ ಕೊಡುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ’!

–ಚಿಲ್ಕುಂದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಅಸಮಾಧಾನದಿಂದ ಹೀಗೆ ನುಡಿದರು. ಕ್ಷೇತ್ರದ ಬಹುತೇಕ ಪಂಚಾಯ್ತಿಗಳಲ್ಲಿ ಇಂಥ ಅಭಿಪ್ರಾಯಗಳೇ ದಟ್ಟವಾಗಿವೆ.

ಮೂರೂ ಪಕ್ಷದ ಅಭ್ಯರ್ಥಿಗಳು ಸದ್ಯ ‘ಅಭಿವೃದ್ಧಿ’ ಬಗ್ಗೆ ತಲೆಕೆಡಿಸಿಕೊಳ್ಳದೆ ಗ್ರಾಮ ಪಂಚಾಯಿತಿ ಸದಸ್ಯರ ‘ಸಬಲೀಕರಣ’ದ ಬಗ್ಗೆ ಮಾತನಾಡುತ್ತಾ ‘ಮತ ಬೇಟೆ’ ಮುಂದುವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು