ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡುಗಟ್ಟಿದ ನೋವು ಕಾವ್ಯವಾಗಿ ಹರಿದು...

ವಿಶಿಷ್ಟ ಕವಿಗೋಷ್ಠಿ: ಪೌರಕಾರ್ಮಿಕ, ಕೈದಿ, ಅಂಗವಿಕಲರಿಂದ ಕವನ ವಾಚನ
Last Updated 5 ಅಕ್ಟೋಬರ್ 2019, 17:03 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಪಂಚ ಕವಿಗೋಷ್ಠಿಯಲ್ಲಿ ಪೌರಕಾರ್ಮಿಕ, ತೃತೀಯ ಲಿಂಗಿ, ಕೈದಿ, ಕೂಲಿ, ಅಂಗವಿಕಲರು ಶನಿವಾರ ಕವನ ವಾಚಿಸಿದರು.

ಜಗನ್ಮೋಹನ ಅರಮನೆಯಲ್ಲಿ ನಡೆದ ‘ವಿಶಿಷ್ಟ ಕವಿಗೋಷ್ಠಿ’ಯಲ್ಲಿ ಈ ಪ್ರತಿಭೆಗಳ ಕಾವ್ಯವಾಚನ ಭಾವುಕ ಲೋಕಕ್ಕೆ ಕೊಂಡೊಯ್ಯಿತು. ತಾವು ಎದುರಿಸುತ್ತಿರುವ ನೋವನ್ನು ಕಾವ್ಯದ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟರೆ, ಸಭಿಕರಿಂದ ಚಪ್ಪಾಳೆ ಮೂಲಕ ಸಾಂತ್ವನ ಲಭಿಸಿತು.

ತೃತೀಯ ಲಿಂಗಿ ಚಾಂದಿನಿ, ‘ನಾನು ನಿಮ್ಮಂತೆಯೇ’ ಶೀರ್ಷಿಕೆ ಮೂಲಕ ತಮ್ಮೊಡಲಿನ ನೋವು ತೆರೆದಿಟ್ಟರು.
‘ಒಪ್ಪದೇ ಹೊರಹಾಕಿತ್ತು ಮನೆಮಂದಿ; ಅಂದು ನಾ ನೊಂದಿದ್ದೆ, ನನ್ನ ಭಾವನೆಯ ಒಡಲನ್ನು ಹೇಗೆ ಬಗೆದು ತೋರಿಸಲಿ ಅವರಿಗೆ? ಒಪ್ಪಿ ಅಪ್ಪಿಕೊಂಡಿದ್ದು ನನ್ನವರು ನೆಲೆ ಇಲ್ಲದ ಅಲೆಮಾರಿ ಬಾಂಧವರು... ಅನ್ನಕ್ಕಾಗಿ ನಾ ಬೇಡಲಿಲ್ಲ ಭಿಕ್ಷೆ; ನಾ ಕೇಳಿದ್ದು ಬದುಕಿಗಾಗಿ…’ ಎಂದಾಗ ಸಭಾಂಗಣದಲ್ಲಿ ಮೌನ.

ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ, ಚಾಮರಾಜನಗರದ ಮಣಿಕಂಠ ವಾಚಿಸಿದ ‘ಮುಟ್ಟು’ ಶೀರ್ಷಿಕೆಯ ಕವನ, ಮಹಿಳೆಯರ ಅಭಿನಂದನೆಗೆ ಪಾತ್ರವಾಯಿತು.

‘ಅವಳಾಗದೆ ಮುಟ್ಟು ನಾವು ಹೋಗಬೇಕಿತ್ತು ಈ ಲೋಕವನ್ನು ಬಿಟ್ಟು... ನನಗೆ ಆಕೆಯ ಮುಟ್ಟಿನ ಬಗೆಗೆ ಮಾತನಾಡಲು ಚೂರೂ ಸಂಕೋಚವಿಲ್ಲ, ಆಕೆಯ ಮುಟ್ಟು ನನಗೆ ಚೆಲುವು, ಒಲವು, ಮಂದಹಾಸ... ಅದುವೇ ಈ ಜಗತ್ತಿನಲ್ಲಿ ನಾ ಬಂದ ವಿಳಾಸ’ ಎಂದು ಮಹಿಳೆ ಪರ ದನಿ ಎತ್ತಿದರು.

ಪೌರಕಾರ್ಮಿಕ ಶಂಕರ ಅಂಕನಶೆಟ್ಟಿಪುರ ವಾಚಿಸಿದ ಕವನ ಆಳುವ ವರ್ಗದವರನ್ನು ಅಣುಕಿಸುವಂತಿತ್ತು.

‘ಪಾದ ತೊಳೆಯುವ ಬದಲು ಸಮಾನತೆಯನ್ನಾದರೂ ತೋರಿದ್ದರೆ ಜಾತೀಯತೆ ಹೋಗುತ್ತಿತ್ತು... ನೊಂದವರೊಂದಿಗೆ ಏಕೆ ಈ ಸರಸ ಸಲ್ಲಾಪ? ಶಾಶ್ವತ ಪರಿಹಾರಕ್ಕೆ ರೂಪುರೇಷೆ ಹಾಕುವ ಬದಲು ಪಾಪ ಮಾಡಿದವರಂತೆ ಪಾದ ತೊಳೆದು ಪೂಜೆ ಮಾಡಿದರಲ್ಲ ಇದು ಸರಿಯೇ’ ಎಂಬ ಪ್ರಶ್ನೆ ಅವರೊಳಗಿನ ನೋವನ್ನು ಸ್ಫೋಟಗೊಳಿಸಿದಂತಿತ್ತು.

ಮೈಸೂರಿನ ಕೇಂದ್ರೀಯ ಕಾರಾಗೃಹದ ಕೈದಿ ಮನುಕುಮಾರ್‌ ವಾಚಿಸಿದ ‘ಶುದ್ಧವಿರಲಾರದ ನಮ್ಮ ಹುಚ್ಚು ಮನ, ನಾಲಿಗೆ ಶುದ್ಧವಿಡದ ನಮ್ಮ ಮನ, ಕ್ರೂರತನವ ತೋರಿಸುವ ನಮ್ಮ ಮನ... ಕೀಚಕತನಕ್ಕೆ ಸೆರಗೊಡ್ಡುವ ನಮ್ಮ ಮನ’ ಎಂಬ ಕವನವು ಮನಸ್ಸಿನ ಗೊಂದಲವನ್ನು ತೆರೆದಿಟ್ಟಿತು.

ಅಂಗವಿಕಲರಾದ ಸಲ್ಮಾ ಬಾನು, ಚರಣ್‌ ಕುಮಾರ್‌, ಅಭಿಲಾಷ್‌, ಪುಟಾಣಿ ಕಮ್‌ಸಾಂಗ್‌ ಕವನ ವಾಚಿಸಿ ಗಮನ ಸೆಳೆದರು. ಅಂಧರು ಬ್ರೈಲ್‌ ಲಿಪಿಯಲ್ಲಿ ಬರೆದುಕೊಂಡು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT