ಶುಕ್ರವಾರ, ಅಕ್ಟೋಬರ್ 18, 2019
20 °C
ದಸರಾ ಕವಿಗೋಷ್ಠಿ

ಹೆಣ್ಣಿನ ಸುತ್ತಲೇ ಚರ್ಚೆ ಏಕೆ?: ಕವಯತ್ರಿ ಎಚ್‌.ಎಲ್‌. ಪುಷ್ಪಾ ಪ್ರಶ್ನೆ

Published:
Updated:
Prajavani

ಮೈಸೂರು: ‘ಪ್ರಸ್ತುತ ದಿನಗಳಲ್ಲಿ ಹೆಣ್ಣಿನ ಸುತ್ತಲೇ ವಿಪರೀತ ಚರ್ಚೆ ಗಳು ನಡೆಯುತ್ತಿವೆ. ಅವಳನ್ನೇ ಕೇಂದ್ರೀಕರಿಸ ಲಾಗುತ್ತಿದೆ. ಏಕೆ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕವಯತ್ರಿ ಎಚ್‌.ಎಲ್‌.ಪುಷ್ಪಾ ಪ್ರಶ್ನಿಸಿದರು.

ಜಗನ್ಮೋಹನ ಅರಮನೆಯಲ್ಲಿ ಭಾನುವಾರ ನಡೆದ ದಸರಾ ‘ವಿಖ್ಯಾತ’ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪುರುಷರು, ಮಹಿಳೆಯರು ಸರಿಸ ಮನಾಗಿ ಜೀವನ ನಡೆಸಿಕೊಂಡು ಬರುತ್ತಿದ್ದರು. ಇದ್ದಕ್ಕಿದ್ದಂತೆ ಏಕೆ ಹೆಣ್ಣಿನ ಮುಟ್ಟು, ಶೀಲ, ನಡೆ-ನುಡಿ, ವಸ್ತ್ರದ ಬಗ್ಗೆ ಚರ್ಚೆಯಾಗುತ್ತಿದೆ? ಮಹಿಳಾ ಉದ್ಧಾರದ ಬಗ್ಗೆ ಗಾಂಧೀಜಿ ಮಾತನಾಡಿದ್ದರು. 12ನೇ ಶತಮಾನದ ಶರಣರು ಉದಾರಿಗಳಾಗಿದ್ದರು. ಹೆಣ್ಣಿನ ಅಭಿವ್ಯಕ್ತಿಗೆ ಮುಕ್ತ ಸ್ವಾತಂತ್ರ್ಯನೀಡಿದ್ದರು. ಈಗ ಮಹಿಳೆ ತನ್ನ ಅಸ್ತಿತ್ವ, ಅಸ್ಮಿತೆಗಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ’ ಎಂದು ವಿಷಾದಿಸಿದರು.

‘ನಾವು ದ್ವಂದ್ವ ಹಾಗೂ ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದು, ನಂಬಿಕೆಗಳೇ ನಮ್ಮನ್ನು ನುಂಗುತ್ತಿವೆ. ಸ್ವಾತಂತ್ರ್ಯಕ್ಕಾಗಿ ಗಾಂಧಿ ರೂಪಿಸಿದ್ದ ಸತ್ಯ, ಅಹಿಂಸೆ, ಸತ್ಯಾಗ್ರಹದಂಥ ಅಸ್ತ್ರಗಳನ್ನೇ ಇಂದು ಅವಮಾನಿಸುತ್ತಿದ್ದು, ಅದರ ವಿರುದ್ಧವೇ ಪ್ರಶ್ನೆ ಏಳುತ್ತಿವೆ. ಇವತ್ತಿನ ಯುವಕರಿಗೆ ಯಾವ ಆದರ್ಶ ಕಟ್ಟಿಕೊಡಬೇಕಿದೆ? ಇಂಥ ಸಮಯದಲ್ಲಿ ಕವಿ ಎಲ್ಲಿ ನಿಲ್ಲಬೇಕು, ಯಾವ ವಿಷಯ ಕುರಿತು ಬರೆಯಬೇಕು, ಏನು ಮಾತನಾಡಬೇಕು ಎಂಬುದು ಸವಾಲಾಗಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ, ‘ಬರಹ ಅಥವಾ ಇನ್ನಿತರ ರೂಪದಲ್ಲಿ ಸಮಾಜಕ್ಕೆ ತಲುಪು ವಾಗ ಜನರ ಮನಸ್ಸು ಕಲಕದಂತೆ ಇರಬೇಕು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ನಮ್ಮ ಲೇಖನಿ ಕೂಡ ಅನುಪಯುಕ್ತ. ಪ್ರಾದೇಶಿಕ ಸಮ ತೋಲನ, ಸಾಮಾಜಿಕ ನ್ಯಾಯ ಅವ ಶ್ಯಕ. ಪರಧರ್ಮ, ಪರವಿಚಾರವನ್ನು ಸಹಿಸಬೇಕು’ ಎಂದರು.

ಗೀತೆ ರಚನೆಕಾರ ವಿ.ನಾಗೇಂದ್ರ ಪ್ರಸಾದ್, ‘ಫೇಸ್‌‍ಬುಕ್‌ ಬಂದ ಮೇಲೆ ಎಡ, ಬಲ, ಮಧ್ಯ ಪಂಥಗಳ ಅಬ್ಬರ ಜೋರಾಗಿವೆ. ಯಾವುದೇ ಪದ್ಯ ಹೇಳಿದರೂ ಒಂದು ಪಂಥಕ್ಕೆ ಸೀಮಿತಗೊಳಿಸುವ ಅಪಾಯ ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕವಿಗೋಷ್ಠಿಯಲ್ಲಿ 36 ಕವಿಗಳು ಕವಿತೆಗಳನ್ನು ವಾಚಿಸಿ ಗಮನ ಸೆಳೆದರು.

Post Comments (+)