ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪ್ಲಾಸ್ಟಿಕ್‌ ಮುಕ್ತವಾಗದ ದಸರಾ

ಅರಮನೆ, ಮೃಗಾಲಯ ಹೊರ ಆವರಣ ಸೇರಿದಂತೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಹಾವಳಿ
Last Updated 6 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮೈಸೂರು: ಪ್ಲಾಸ್ಟಿಕ್‌ಮುಕ್ತ ದಸರಾ ಆಚರಣೆಗೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ತಿಂಗಳಿನಿಂದ ಅವಿರತ ಪ್ರಯತ್ನ ಮಾಡುತ್ತಿದ್ದರೂ ಮತ್ತೊಂದೆಡೆ ಎಗ್ಗಿಲ್ಲದೇ ಜನ ಪ್ಲಾಸ್ಟಿಕ್‌ ಬಳಸುತ್ತಿದ್ದು, ಪರಿಸರಕ್ಕೆ ಕಂಟಕವಾಗಿ ಪರಿಣಮಿಸಿದೆ.

ಮಹಾನಗರ ಪಾಲಿಕೆ ಮುಂಭಾಗದ ಅರಮನೆ ಕರಿಕಲ್ಲು ತೊಟ್ಟಿ ಗೇಟ್‌ ಹಾಗೂ ಕಾರು ಪಾರ್ಕಿಂಗ್‌ ಆವರಣದಲ್ಲೇ ಪ್ಲಾಸ್ಟಿಕ್‌ ಚೀಲಗಳು, ನೀರಿನ ಬಾಟಲಿಗಳು ಹಾಗೂ ತಿಂಡಿಪೊಟ್ಟಣಗಳ ಕವರ್‌ಗಳು ಎಲ್ಲೆಂದರಲ್ಲಿ ಬಿದ್ದು ಅರಮನೆ ಸೌಂದರ್ಯವನ್ನೇ ಹಾಳುಮಾಡಿವೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಾಗೂ ಕೆಲ ತಳ್ಳುಗಾಡಿಗಳ ವ್ಯಾಪಾರಿಗಳು 50 ಮೈಕ್ರಾನ್‌ಗಿಂತ ತೆಳುವಾದ ಪ್ಲಾಸ್ಟಿಕ್‌ ಕವರ್‌ಗಳನ್ನು ಬಳಸುತ್ತಿದ್ದಾರೆ. ಇನ್ನೂ ಕೆಲ ಮಾಂಸದ ಅಂಗಡಿಗಳಲ್ಲೂ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿದೆ.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣದ ದಸರಾ ಆಹಾರ ಮೇಳದಲ್ಲಿ ಕೆಲ ಮಳಿಗೆಗಳಲ್ಲಿ ಅಡಿಕೆ ತಟ್ಟೆಗಳನ್ನು ಉಪಯೋಗಿಸಲಾಗುತ್ತಿದೆ, ಆದರೆ ನೀರಿನ ಬಾಟಲಿಗಳು, ಸಿದ್ಧಆಹಾರ ಪೊಟ್ಟಣಗಳು, ಚಾಕೊಲೇಟ್‌, ಐಸ್‌ಕ್ರೀಂ ಕವರ್‌ಗಳು ಕಸದ ಬುಟ್ಟಿ ತುಂಬುತ್ತಿವೆ. ಪ್ಲಾಸ್ಟಿಕ್‌ ಆಟಿಕೆಗಳು, ಬಲೂನ್‌ಗಳು ಸಹ ಪರಿಸರಕ್ಕೆ ಮಾರಕವಾಗಿವೆ.

ಪ್ರಮುಖ ರಸ್ತೆ ಬದಿ, ಕಾಲೇಜು, ದೇವಾಲಯಗಳ ಆವರಣಗಳಲ್ಲೂ ಪ್ಲಾಸ್ಟಿಕ್‌ ಚೀಲದೊಳಗೆ ಕಸವನ್ನು ತುಂಬಿ ಎಸೆದಿರುತ್ತಾರೆ. ಪ್ಲಾಸ್ಟಿಕ್‌ ಮಾರಿ ಎಲ್ಲೆಡೆ ತಂಡಾವವಾಡುತ್ತಿದೆ. ಪಾಲಿಕೆ ಅಧಿಕಾರಿಗಳ ಮಾಹಿತಿ ಪ್ರಕಾರ ನಗರದಲ್ಲಿ ದಿನವೊಂದಕ್ಕೆ ಸುಮಾರು 500 ಕೆ.ಜಿ.ಯಿಂದ ಒಂದು ಟನ್‌ವರೆಗೂ ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿದೆಯಂತೆ. ಹಸಿ ಹಾಗೂ ಒಣ ಕಸದಿಂದ ಬೇರ್ಪಡಿಸಿದ ಪ್ಲಾಸ್ಟಿಕ್‌ಅನ್ನು ವೈಜ್ಞಾನಿಕ ವಿಧಾನದಲ್ಲಿ ಸಿಮೆಂಟ್‌ ಕಾರ್ಖಾನೆಗಳಲ್ಲಿ ಸುಡಲಾಗುತ್ತಿದೆ. ಪ್ಲಾಸ್ಟಿಕ್‌ನಿಂದ ಟೈಲ್ಸ್‌ಗಳನ್ನು ತಯಾರಿಸುವ ಪ್ರಾಜೆಕ್ಟ್‌ ಪ್ರಗತಿಯಲ್ಲಿದೆ.

ಕಸದ ತೊಟ್ಟಿ ಹಾಗೂ ರಸ್ತೆ ಬದಿಗಳಲ್ಲಿ ಎಸೆಯುವ ಪ್ಲಾಸ್ಟಿಕ್‌ಅನ್ನು ದನಕರುಗಳು ತಿಂದು ಜೀವಕ್ಕೆ ಹಾನಿಮಾಡಿಕೊಳ್ಳುತ್ತಿವೆ. ಪ್ಲಾಸ್ಟಿಕ್ ವಸ್ತುಗಳು, ಥರ್ಮಕೋಲ್, ಉಪಕರಣಗಳ ತ್ಯಾಜ್ಯವೂ ಸುತ್ತಲಿನ ಪರಿಸರ ಕಲುಷಿತ ಗೊಳ್ಳುಲು ಕಾರಣವಾಗುತ್ತಿದೆ.

ನಗರದ ಕೆಲ ಉದ್ಯಾನಗಳಲ್ಲಿ ರಾತ್ರಿವೇಳೆ ಕಿಡಿಗೇಡಿಗಳು ಮದ್ಯಪಾನ ಮಾಡಿ ಕವರ್‌ ಹಾಗೂ ನೀರಿನ ಬಾಟಲಿಗಳನ್ನು ಎಸೆದು ಹೋಗುತ್ತಾರೆ.

ಉತ್ಪಾದನೆಯೇ ನಿಲ್ಲಲಿ
‘ಪ್ಲಾಸ್ಟಿಕ್‌ ಬಳಕೆ ಮಾಡಬೇಡಿ ಎಂದು ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಸರ್ಕಾರ ಮೂಲದಲ್ಲೇ ಕಡಿವಾಣ ಹಾಕಬೇಕು, ಅಂದರೆ ನಿಷೇಧಿತ ಪ್ಲಾಸ್ಟಿಕ್‌ ಉತ್ಪಾದಿಸುವ ಕಾರ್ಖಾನೆಗಳನ್ನು ಮುಚ್ಚಬೇಕು, ಅಂಥ ಕಠಿಣ ಕಾನೂನು ಜಾರಿಯಗಬೇಕು’ ಎಂದು ಹೇಳುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಎಂ.ಎಸ್‌.ಜಯಂತ್‌.

ದೇವರಾಜ ಮಾರುಕಟ್ಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಮಾರುತ್ತಿದ್ದ ಅಂಗಡಿ ಮೇಲೆ ಈಚೆಗೆಪಾಲಿಕೆಯವರು ದಾಳಿ ನಡೆಸಿ ಕ್ರಮ ಕೈಗೊಂಡಿದ್ದಾರೆ.

‘ತಿಳಿವಳಿಕೆ ಇರುವ, ಇಲ್ಲದಿರುವ ಎಲ್ಲರೂ ನಿಷೇಧಿತ ಪ್ಲಾಸ್ಟಿಕ್‌ ಬಳಸುತ್ತಿದ್ದಾರೆ. ಬೀದಿ ವ್ಯಾಪಾರಿಗಳನ್ನು ಪ್ಲಾಸ್ಟಿಕ್‌ ಬಳಸದಂತೆ ತಡೆಗಟ್ಟಲು ನಮಗೂ ದೊಡ್ಡ ಸವಾಲಾಗಿದೆ. ಮೊದಲು ಅರಿವು ಮೂಡಿಸುವ ಕೆಲಸ ಮಾಡಿ ನಂತರ ಕಾನೂನಿನ ಅನ್ವಯ ಕ್ರಮ ಕೈಗೊಳ್ಳುತ್ತೇವೆ. ಈಚೆಗೆ ಚಾಮರಾಜ ಮೊಹಲ್ಲಾದಲ್ಲಿ ಪ್ಲಾಸ್ಟಿಕ್‌ ಗೋದಾಮನ್ನು ವಶಪಡಿಸಿಕೊಂಡು ನೋಟೀಸ್‌ ಅಂಟಿಸಿದ್ದೇವೆ. ಆ ಗೋದಾಮಿನ ಮಾಲೀಕ ಇಲ್ಲಿಯವರೆಗೂ ಬಂದಿಲ್ಲ. ಆತನ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಯಂತ್‌ ಪ್ರತಿಕ್ರಿಯಿಸಿದರು.

ಮೊದಲು ಸಗಟು ವ್ಯಾಪಾರ ತಡೆಗಟ್ಟಬೇಕು, ಕಾರ್ಖಾನೆ ಉತ್ಪಾದನೆ ನಿಲ್ಲಬೇಕು. ಸರ್ಕಾರ ಕಠಿಣ ಕಾನೂನು ರೂಪಿಸಬೇಕು ಎಂದು ಸಲಹೆ ನೀಡಿದರು.

ನಗರದಲ್ಲಿ ಒಂದು ಸುತ್ತು ಬಂದರೆ ಪ್ಲಾಸ್ಟಿಕ್ ಸಮಸ್ಯೆ ಅರಿವಾಗುತ್ತದೆ. ‘ಸ್ವಚ್ಛ ನಗರ’ವನ್ನು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸುವ ಸಂಕಲ್ಪದ ನಡುವೆಯೂ ಪ್ಲಾಸ್ಟಿಕ್‌ ಬಳಕೆ ಅವ್ಯಾಹತವಾಗಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT