ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ | ವೈಭವದ ಜಂಬೂಸವಾರಿ; ಜನರ ಪ್ರೀತಿಯ ಧಾರೆ

Last Updated 8 ಅಕ್ಟೋಬರ್ 2019, 12:39 IST
ಅಕ್ಷರ ಗಾತ್ರ

ಮೈಸೂರು: ರಾಜಪಥದಲ್ಲಿ ಜನರಾಶಿ ನಡುವೆ ವಿಜಯದಶಮಿ ಮೆರವಣಿಗೆ ಸಾಗುತ್ತಿದ್ದರೆ ಭಕ್ತಿಯ ಧಾರೆ ಹರಿದ ಅನುಭವ. ಒಂದೆಡೆ ಆನೆಗಳ ವಯ್ಯಾರದ ನಡಿಗೆ, ಮತ್ತೊಂದೆಡೆ ಜಂಬೂಸವಾರಿಯ ವೈಭೋಗ. ಸಾಂಸ್ಕೃತಿಯ ನಗರಿಯ ತುಂಬೆಲ್ಲಾ ಪ್ರೀತಿಯ ಸಿಂಚನ.

ನೆತ್ತಿ ಮೇಲೆ ಬಿಸಿಲಿನ ತಾಪ ಕುಕ್ಕುತ್ತಿದ್ದರೂ ಮನಸ್ಸು, ಹೃದಯಕ್ಕೆ ಹಿತಾನುಭವ. ಅರ್ಜುನ ಆನೆಯ ಮೇಲಿನ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ನಾಲ್ಕು ದಿಕ್ಕುಗಳಿಂದಲೂ ಉಘೇ ಉಘೇ.

ಮಂಗಳವಾರ ಮಧ್ಯಾಹ್ನ ಅರಮನೆ ಆವರಣದಲ್ಲಿ ಚಿನ್ನದ ಅಂಬಾರಿಯ ವೈಭೋಗ ಗಜಪಡೆ ಮೇಲೆ ವಿಜೃಂಭಿಸಿತು. ಲಕ್ಷಾಂತರ ಪ್ರೇಕ್ಷಕರು ಭಾವಪರವಶವಾದರು. 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್‌ ಅರ್ಜುನ ಸತತ ಎಂಟನೇ ಬಾರಿ ಯಶಸ್ವಿಯಾಗಿ ಹೆಜ್ಜೆ ಇರಿಸಿತು.

ಅಂಬಾರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಂಜೆ 4.17ಕ್ಕೆ ಕನಕಾಂಬರ ಹಾಗೂ ಮಲ್ಲಿಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಆನೆಗಳು ಘೀಳಿಟ್ಟವು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಇತರ ಗಣ್ಯರು ಪುಷ್ಪಾರ್ಚನೆ ಮಾಡಿದರು. ಸೊಂಡಿಲು ಎತ್ತಿ ನಮಸ್ಕರಿಸಿದ ಅರ್ಜುನ ಆನೆ ರಾಜ ಗಾಂಭೀರ್ಯದಿಂದ ಹೆಜ್ಜೆ ಇಟ್ಟಿತು.

ನಂದಿಧ್ವಜಕ್ಕೆ ಪೂಜೆ: ನಿಗದಿತ ಸಮಯಕ್ಕಿಂತ ಮೊದಲೇ ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದರು. ಅಲ್ಲಿಂದ ತೆರೆದ ಜೀಪಿನಲ್ಲಿ ಅರಮನೆ ಆವರಣಕ್ಕೆ ಬಂದು ಎರಡು ತಾಸು ಬಿರುಬಿಸಿಲಿನಲ್ಲೇ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಂಡರು.

39 ಸ್ತಬ್ಧಚಿತ್ರಗಳು ಗಮನ ಸೆಳೆದವು. ಪ್ರಮುಖವಾಗಿ ಎಲ್ಲರ ಮನ ಸೆಳೆದಿದ್ದು ಇಸ್ರೊ ಚಂದ್ರಯಾಣ–2. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವತಿಯಿಂದ ರಚಿಸಿದ್ದ ಈ ಸ್ತಬ್ಧಚಿತ್ರವನ್ನು ಜನರು ಎದ್ದು ನಿಂತು ಸ್ವಾಗತಿಸಿದರು. ಜೊತೆಗೆ ಚಪ್ಪಾಳೆಯ ಸುರಿಮಳೆ.

ಜೊತೆಗೆ ಕೇಂದ್ರ ಸರ್ಕಾರಮಯವಾಗಿತ್ತು. ‍ಪ್ರಧಾನಿ ಮೋದಿ ಅವರ ಜನಪ್ರಿಯ ಘೋಷಣೆ, ಯೋಜನೆಗಳ ಪ್ರಚಾರಕ್ಕೆ ದಸರೆ ವೇದಿಕೆಯಾಯಿತು. ಆಯುಷ್ಮಾನ್‌ ಭಾರತ, ಬೇಟಿ ಪಡಾವೋ ಬೇಟಿ ಬಚಾವೋ, ಫಸಲ್‌ ಬಿಮಾ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅದರಲ್ಲಿ ಸೇರಿದ್ದವು.

ಸಿದ್ಧಗಂಗಾ, ಆದಿಚುಂಚನಗಿರಿ, ಸುತ್ತೂರು ಮಠಗಳ ಶ್ರೀಗಳನ್ನು ಒಂದೇ ವೇದಿಕೆಯಲ್ಲಿ ಸ್ತಬ್ಧಚಿತ್ರಗಳ ಮೂಲಕ ಕಣ್ತುಂಬಿಕೊಳ್ಳುವ ಅವಕಾಶ ಭಕ್ತರಿಗೆ ಲಭಿಸಿತು. ಜೊತೆಗೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಲಾ ತಂಡಗಳ ನೀಡಿದ ಪ್ರದರ್ಶನ ಗಮನ ಸೆಳೆಯಿತು. ಇದರೊಂದಿಗೆ 10 ದಿನ ನಾಡಿನ ಸಂಸ್ಕೃತಿ ಸಾರಿದ 409 ನೇ ದಸರಾ ಮಹೋತ್ಸವದ ವೈಭವ ಸಂಪನ್ನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT