ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಬ್ಯಾಂಡ್‌ ಸಂಗೀತ ರಸದೌತಣ

ಅರಮನೆಯ ಮುಂದೆ ಉಕ್ಕಿ ಹರಿದ ಸಂಗೀತ ಸುಧೆ
Last Updated 5 ಅಕ್ಟೋಬರ್ 2019, 19:28 IST
ಅಕ್ಷರ ಗಾತ್ರ

ಮೈಸೂರು: ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದ ಅರಮನೆಯ ಮುಂದೆ ಅಲೆಅಲೆಯಾಗಿ ತೇಲಿಬಂದ ಸಂಗೀತಕ್ಕೆ ಸಾವಿರಾರು ಮಂದಿ ತಲೆದೂಗಿದರು.

ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಶನಿವಾರ ಇಳಿ ಸಂಜೆಯ ಹೊತ್ತು ಆಯೋಜಿಸಿದ್ದ ಪೊಲೀಸ್‌ ಬ್ಯಾಂಡ್‌ ಸಮೂಹ ವಾದ್ಯಮೇಳ ಅಲ್ಲಿ ನೆರೆದವರ ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸ್ಸಿಗೆ ಮುದ ನೀಡಿತು. ರಾಜ್ಯದ ವಿವಿಧ ಜಿಲ್ಲೆಗಳ 36 ಬ್ಯಾಂಡ್‌ ತಂಡಗಳ 450 ಸದಸ್ಯರು ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಸಂಗೀತದ ಗಾನಸುಧೆ ಹರಿಸಿದರು.

ಸಂಜೆ 6ಕ್ಕೆ ಸರಿಯಾಗಿ ವಾದ್ಯ ಮೇಳಕ್ಕೆ ಚಾಲನೆ ಲಭಿಸಿತು. ಇದೇ ವೇಳೆ ಅರಮನೆಯ ದೀಪಗಳನ್ನು ಬೆಳಗಿಸಲಾಯಿತು. ಆಗಸದಲ್ಲಿ ಮೋಡಗಳು ಬಿಡಿಸಿದ ಚಿತ್ತಾರ, ಗುಂಪಾಗಿ ಹಾರಾಡುತ್ತಿದ್ದ ಪಾರಿವಾಳಗಳು, ಹಿತವಾಗಿ ಬೀಸುತ್ತಿದ್ದ ಗಾಳಿ ಸಂಗೀತ ಸುಧೆಗೆ ಸಾಥ್‌ ನೀಡಿದವು.

ಆರಂಭದಲ್ಲಿ ಎಲ್ಲಾ ಬ್ಯಾಂಡ್‌ ತಂಡಗಳ ಸದಸ್ಯರು ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಆ ಬಳಿಕ 20 ನಿಮಿಷ ವಿವಿಧ ರೀತಿಯ ರಾಗಗಳನ್ನು ನುಡಿಸುತ್ತಾ ತ್ವರಿತ ಹಾಗೂ ನಿಧಾನಗತಿ ನಡಿಗೆ ಮೂಲಕ ಹಲವು ವಿನ್ಯಾಸಗಳನ್ನು ರಚಿಸಿದರು.

ಕರ್ನಾಟಕ ಶಾಸ್ತ್ರೀಯ ಮತ್ತು ಇಂಗ್ಲಿಷ್‌ ವಾದ್ಯವೃಂದ ತಂಡದವರು ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತದ ಜುಗಲ್‌ಬಂದಿ ನಡೆಸಿ ನೆರೆದವರನ್ನು ರಂಜಿಸಿದರು. ಜಯಚಾಮರಾಜ ಒಡೆಯರ್‌ ಅವರ ರಚನೆ ‘ಶ್ರೀ ರಾಜರಾಜೇಶ್ವರಿ’ ‌ರಾಗಮಾಲಿಕೆ ನುಡಿಸಿ ಮೈಸೂರು ರಾಜ ಪರಂಪರೆಯ ಮಧುರ ನೆನಪುಗಳನ್ನು ಹೊರತೆಗೆದರು.

ಇಂಗ್ಲಿಷ್‌ ವಾದ್ಯ ತಂಡದವರು ಪಾಪ್‌ ಗಾಯಕ ಮೈಕಲ್‌ ಜಾಕ್ಸನ್‌ 1983 ರಲ್ಲಿ ರಚಿಸಿ ಸಂಗೀತ ಸಂಯೋಜಿಸಿದ್ದ ‘ಬಿಲ್ಲಿ ಜೀನ್‌’ ಮತ್ತು ‘ಬೀಟ್‌ ಇಟ್‌’ ರಾಗಗಳನ್ನು ಪ್ರಸ್ತುತಪಡಿಸಿದರು. ಆ ಬಳಿಕ ‘ಪೈರೇಟ್ಸ್‌ ಆಫ್‌ ದಿ ಕೆರಿಬಿಯ‌ನ್‌’, ‘ವೈಲ್ಡ್‌ ವೆಸ್ಟ್‌ ಥೀಮ್ಸ್‌’ ಹಾಡುಗಳು ಸುಮಧುರವಾಗಿ ಮೂಡಿಬಂದವು.

ಕರ್ನಾಟಕ ಆರ್ಕೆಸ್ಟ್ರಾ ತಂಡದಿಂದ ಬ್ರಹ್ಮ ಮುರಾರೇ, ಅಯಿಗಿರಿ ನಂದಿನಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು. ಸುಮಾರು 30 ನಿಮಿಷ ನಡೆದ ‘ಜುಗಲ್‌ಬಂದಿ’ ಅಲ್ಲಿ ನೆರೆದಿದ್ದ ಮಕ್ಕಳು, ಹಿರಿಯರಿಗೆ ಮುದ ನೀಡಿತು.

ಅನಂತರ ಇಮ್ಯಾನುಯೆಲ್‌ ಫ್ರಾನ್ಸಿಸ್‌ ಮತ್ತು ಟೋನಿ ಮ್ಯಾಥ್ಯೂ ತಂಡದಿಂದ ವಯೊಲಿನ್‌, ಪಿಯಾನೊ ವಾದನ ನಡೆಯಿತು. ‘ಡ್ರಮ್ಮರ್ಸ್‌ ಡಿಲೈಟ್‌’ ತಂಡದ ಪ್ರದರ್ಶನ ನೆರೆದವರ ಎದೆಬಡಿತದಲ್ಲಿ ಏರಿಳಿತ ಮೂಡಿಸಿತು.

ಒಂದು ಗಂಟೆಗೂ ಹೆಚ್ಚು ಕಾಲ ಶೋತೃಗಳನ್ನು ಹಿಡಿದಿಟ್ಟ ವಾದ್ಯ ಮೇಳ ಗಾಂಧೀಜಿ ಅವರ ಇಷ್ಟದ ಸ್ತೋತ್ರ ‘ಅಬೈಡ್‌ ವಿದ್‌ ಮಿ’ ಪ್ರಸ್ತುತಿಯೊಂದಿಗೆ ತೆರೆಕಂಡಿತು. ಹೆನ್ರಿ ಫ್ರಾನ್ಸಿಸ್‌ ರಚನೆಯ ಈ ಸ್ತೋತ್ರ ಕೇಳುಗರನ್ನು ಭಾವನಾತ್ಮಕವಾಗಿ ಬೆಸೆಯುವಂತೆ ಮಾಡಿತು. ‘ಸಾರೇ ಜಹಾಂಸೆ ಅಚ್ಚಾ’ ಹಾಡಿನೊಂದಿಗೆ ಎಲ್ಲ ತಂಡಗಳು ನಿರ್ಗಮಿಸಿದವು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮೋಹನ ಶಾಂತನಗೌಡರ್, ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT