ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ನಾಡಕುಸ್ತಿಗೆ ಚಾಲನೆ: ‘ಮಾರ್ಫಿಟ್‌’ನಲ್ಲಿ ಯುದಿಷ್ಠಿರ್‌ಗೆ ಗೆಲುವು

ಕಾಟೆ–ಕೌಶಿಕ್‌ ಪೈಪೋಟಿ ಸಮಬಲ
Last Updated 29 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಮೈಸೂರು: ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಮನಗೆದ್ದ ಹರಿಯಾಣದ ಯುದಿಷ್ಠಿರ್‌ ಅವರು ದಸರಾ ನಾಡಕುಸ್ತಿಯ ಮೊದಲ ದಿನದಲ್ಲಿ ಮಿಂಚು ಹರಿಸಿದರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಭಾನುವಾರ ನಡೆದ ‘ಮಾರ್ಫಿಟ್‌’ ಕುಸ್ತಿಯಲ್ಲಿ ಬಿಗಿ ಪಟ್ಟುಗಳನ್ನು ಹಾಕಿದ ಯುದಿಷ್ಠಿರ್‌ ಅವರು ಪುಣೆಯ ಜಯದೀಪ್‌ ಗಾಯಕವಾಡ್‌ ಅವರನ್ನು ಮಣಿಸಿದರು. ಆರಂಭದಿಂದಲೇ ಮೇಲುಗೈ ಸಾಧಿಸಿದ ಯುದಿಷ್ಠಿರ್‌ ಏಳು ನಿಮಿಷಗಳಲ್ಲಿ ಎದುರಾಳಿಯನ್ನು ಚಿತ್‌ ಮಾಡಿದರು.

ಮೈಸೂರಿನ ಕುಸ್ತಿಪ್ರೇಮಿಗಳ ನೆಚ್ಚಿನ ಪೈಲ್ವಾನ್‌ ದಾವಣಗೆರೆಯ ಕಾರ್ತಿಕ್‌ ಕಾಟೆ ಮತ್ತು ಪುಣೆಯ ಕೌಶಿಕ್‌ ದಾಘಲೆ ನಡುವೆ ಒಂದು ಗಂಟೆ ನಡೆದ ಹೋರಾಟ ರೋಚಕತೆಯಿಂದ ಕೂಡಿತ್ತು. ಇಬ್ಬರೂ ಪಟ್ಟುಬಿಡದೆ ಕಾದಾಡಿದ್ದರಿಂದ ಸಮಬಲದಲ್ಲಿ ಕೊನೆಗೊಂಡಿತು.

ಮೈಸೂರಿನ ಪ್ರವೀಣ್‌ ಚಿಕ್ಕಹಳ್ಳಿ ಮತ್ತು ಬೆಳಗಾವಿಯ ಕಾರ್ತಿಕ್‌ ಇಂಗ್ಳಿ ನಡುವಿನ 30 ನಿಮಿಷಗಳ ಹೋರಾಟ ಕೂಡಾ ಸಮಬಲದಲ್ಲಿ ಮುಕ್ತಾಯಗೊಂಡಿತು.

ಮೈಸೂರಿನ ಜಾನಿ ಜಮೀಲ್‌, ಬೆಳಗಾವಿಯ ಶರತ್‌ ವಿರುದ್ಧ; ಹಂಪಾಪುರದ ನಾಗೇಶ್‌, ದಾವಣಗೆರೆಯ ಯೋಗೇಶ್‌ ವಿರುದ್ಧ; ಕೆ.ಜಿ.ಕೊಪ್ಪಲುವಿನ ಕಿರಣ್‌, ಗಂಜಾಂನ ಮಂಜು ಕೆಂಚ ವಿರುದ್ಧ; ಗಂಜಾಂನ ತೇಜಸ್‌, ರಮ್ಮನಹಳ್ಳಿಯ ರಾಘವೇಂದ್ರ ವಿರುದ್ಧ; ಮೈಸೂರಿನ ಶಕ್ತಿ ರಮೇಶ್‌, ಕೆಆರ್‌ಎಸ್‌ನ ಕಿರಣ್‌ ಕುಮಾರ್‌ ವಿರುದ್ಧ; ಮೆಲ್ಲಹಳ್ಳಿಯ ರಮೇಶ್, ಅಶೋಕಪುರಂನ ನಾರಾಯಣ ವಿರುದ್ಧ ಜಯ ಪಡೆದರು.

ಮಹಿಳೆಯರ ಒಂದು ಜೊತೆ ಕುಸ್ತಿಯಲ್ಲಿ ಮಂಡ್ಯದ ಎನ್‌.ಸಿ.ಯಶಸ್ವಿ ಅವರು ಕೆಆರ್‌ಎಸ್‌ನ ಪೂಜಾಶ್ರೀ ವಿರುದ್ಧ ಜಯ ಸಾಧಿಸಿದರು.

ಸಮಬಲ: ಮೈಸೂರಿನ ಮುಖೇಶ್‌ ಗೌಡ– ಲಕ್ಷ್ಮಿಪುರದ ಶ್ರೇಯಸ್‌ ಗೌಡ, ತುಮಕೂರಿನ ಜಯಸಿಂಹ– ಹೊಸಹಳ್ಳಿಯ ಸ್ಟಾರ್‌ ಮುರುಳಿ, ರಮ್ಮನಹಳ್ಳಿಯ ರವಿ– ಸಾಂಗ್ಲಿಯ ಪರಶುರಾಮ್, ಪಾಲಹಳ್ಳಿಯ ಗಿರೀಶ್– ಮೈಸೂರಿನ ತಬಸೀರ್‌ ಪಠಾಣ್, ಪಾಂಡವಪುರದ ಸುಜೇಂದ್ರ–ಮಹದೇವಪುರದ ವಿಕಾಸ್, ಕನಕಪುರದ ಸ್ವರೂಪ್‌ಗೌಡ– ನಜರಬಾದ್‌ನ ಚೇತನ್‌ ಗೌಡ, ಪಡುವಾರಹಳ್ಳಿಯ ಚಂದ್ರು– ತೊಣಚಿಕೊಪ್ಪಲಿನ ಗೋಪಿ ನಡುವಿನ ಹಣಾಹಣಿ ಸಮಬಲದಲ್ಲಿ ಕೊನೆಗೊಂಡವು.

ಕುಸ್ತಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕ ಎಲ್‌.ನಾಗೇಂದ್ರ, ಮೇಯರ್‌ ಪುಷ್ಪಲತಾ ಜಗನ್ನಾಥ್, ಕುಸ್ತಿ ಉಪಸಮಿತಿ ಉಪವಿಶೇಷಾಧಿಕಾರಿ ಸ್ನೇಹಾ, ಕಾರ್ಯದರ್ಶಿ ಡಿ.ರವಿಕುಮಾರ್, ಕುಸ್ತಿ ಉಪಸಮಿತಿ ಅಧ್ಯಕ್ಷ ದೊರೆಸ್ವಾಮಿ, ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT