ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ | ಕಲಾಮಂದಿರ ಪ್ರಾಂಗಣಕ್ಕೆ ಕಲಾ ಮೆರುಗು!

ದಸರಾ ಅಂಗವಾಗಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ
Last Updated 4 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ದಸರಾ ಅಂಗವಾಗಿ ಇಲ್ಲಿನ ಕಲಾಮಂದಿರದ ಆವರಣಕ್ಕೆ ಕರಕುಶಲ ಕಲೆಯ ಮೆರುಗು ನೀಡಿ, ಪ್ರವಾಸಿಗರು ಮತ್ತು ಸಾರ್ವಜನಿಕರನ್ನು ಆಕರ್ಷಿಸಲು ಲಲಿತಕಲೆ ಉಪಸಮಿತಿ ಕಾರ್ಯಕ್ರಮ ರೂಪಿಸಿದೆ.

ಈ ಬಾರಿ 4 ವಿವಿಧ ಪ್ರಕಾರಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಯೋಜಿಸಲಾಗಿದೆ. ಉಪ ಸಮಿತಿಯಿಂದ ಸೆ.16ರಿಂದಲೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕಲಾಮಂದಿರದ ಆವರಣದಲ್ಲಿ ಶಿಲ್ಪಕಲಾ ಶಿಬಿರವನ್ನು ಅ.16ರಿಂದ 10 ದಿನಗಳವರೆಗೆ ನಡೆಸಲಾಗುವುದು. ಸೆ.23ರಿಂದ ಚಿತ್ರಕಲಾ ಶಿಬಿರ ಮೇಳೈಸಲಿದೆ. ಸ್ಥಳೀಯರೊಂದಿಗೆ ರಾಜ್ಯದ ವಿವಿಧ ಭಾಗಗಳ ಪ್ರಖ್ಯಾತ, ಉದಯೋನ್ಮುಖ ಹಾಗೂ ಆಸಕ್ತ ಕಲಾವಿದರು ಶಿಬಿರಗಳಲ್ಲಿ ಪಾಲ್ಗೊಂಡು ಕಲಾಕೃತಿಗಳಿಗೆ ರೂಪ ನೀಡಲಿದ್ದಾರೆ. ತಮ್ಮ ಕೌಶಲದ ಮೂಲಕ ಸಾರ್ವಜನಿಕರ ಗಮನ ಸೆಳೆಯಲಿದ್ದಾರೆ.ಶ್ರಮ ಸಂಸ್ಕೃತಿಯ ಮಹತ್ವದ ಮೇಲೆ ಇದು ಬೆಳಕು ಚೆಲ್ಲಲಿದ್ದಾರೆ.

ಪ್ರಾತ್ಯಕ್ಷಿಕೆ:ಅ.1ರಿಂದ 3ರವರೆಗೆ ಹಮ್ಮಿಕೊಂಡಿರುವ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ರಾಜ್ಯದ ಪ್ರದೇಶವಾರು ವಿವಿಧ ಕಲೆಗಳ ಹಾಗೂ ಅವುಗಳಿಗೆ ಬೇಕಾದ ಕೌಶಲ ಮತ್ತು ಶ್ರಮವನ್ನು ಬಿಂಬಿಸಲಿದೆ. ಚರಕದಿಂದ ನೂಲು ತೆಗೆಯುವುದು, ಕೈಮಗ್ಗಗಳಲ್ಲಿ ಬಟ್ಟೆ ನೇಯುವುದು, ಕುಂಬಾರಿಕೆ ಕಲೆ, ಬಿದಿರಿನಿಂದ ಬುಟ್ಟಿ ಮಾಡುವುದು, ಕಿನ್ನಾಳ ಕಲೆ, ಕೌದಿ ಕಲೆ, ಚನ್ನಪಟ್ಟಣದ ಬೊಂಬೆ ತಯಾರಿಕೆ, ಮೈಸೂರು ಭಾಗದ ವಿಶೇಷವಾದ ಇನ್‌ಲೇ ಕಲೆ, ಮದರಂಗಿ ಮತ್ತು ವರ್ಲಿ ಕಲೆಗಳ ಪ್ರಾತ್ಯಕ್ಷಿಕೆಯು ಅನಾವರಣಗೊಳ್ಳಲಿದೆ. ಒಂದೇ ಕಡೆಯಲ್ಲಿ ಹಲವು ಕಲೆಗಳ ದರ್ಶನದ ಅವಕಾಶ ಸಾರ್ವಜನಿಕರಿಗೆ ದೊರೆಯಲಿದೆ.

ಒಂದೆಡೆ ಚರಕದಲ್ಲಿ ನೂಲು ತಯಾರಾದರೆ, ಇನ್ನೊಂದೆಡೆ ನೇಕಾರರು ಮಗ್ಗದಿಂದ ಬಟ್ಟೆ ಸಿದ್ಧಗೊಳಿಸುತ್ತಿರುತ್ತಾರೆ. ಮತ್ತೊಂದೆಡೆ ಬುಟ್ಟಿಗಾಗಿ ಬಿದಿರು ಸಜ್ಜಾಗುತ್ತಿರುತ್ತದೆ; ಸಮೀಪದಲ್ಲೇ ಆಕರ್ಷಕವಾದ ಕೌದಿಯು ರೂಪ ಪಡೆಯುತ್ತಿರುತ್ತದೆ. ಅದ್ಭುತ ಕಲಾಲೋಕವೊಂದು ಅಲ್ಲಿ ತೆರೆದುಕೊಳ್ಳಲಿದೆ. ಕಲಾಮಂದಿರದ ಜಗುಲಿಯು ವಿವಿಧ ಕಲೆಗಳ ಮೇಳೈಸುವಿಕೆಗೆ ಸಾಕ್ಷಿಯಾಗಲಿದೆ. ಸಾಂಪ್ರದಾಯಿಕ ಕಲೆಗಳ ವಿಶೇಷವನ್ನು ಪ್ರದರ್ಶಿಸಲಾಗುತ್ತದೆ. ಪ್ರತಿ ಕಲೆಗೆ ಸಂಬಂಧಿಸಿದಂತೆ ತಲಾ ಮೂರರಿಂದ ನಾಲ್ವರು ಭಾಗವಹಿಸಲಿದ್ದಾರೆ.

ಸೆ.26ರಿಂದ ಪ್ರದರ್ಶನ:ಕರ್ನಾಟಕದಾದ್ಯಂತ ಕಲಾವಿದರಿಂದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್, ಅನ್ವಯ ಕಲೆ, ಛಾಯಾಚಿತ್ರಗಳನ್ನು ಆಹ್ವಾನಿಸಲಾಗುತ್ತಿದೆ. ಚಿತ್ರಕಲಾ ಹಾಗೂ ಶಿಲ್ಪಕಲಾ ಶಿಬಿರದಲ್ಲಿ ರೂಪ ಪಡೆಯಲಿರುವ ಕಲಾಕೃತಿಗಳನ್ನು ಕೂಡ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಸೆ.26ರಿಂದ ಅ.3ರವರೆಗೆ ಪ್ರದರ್ಶಿಸಲಾಗುವುದು. ಸಾಂಪ್ರದಾಯಿಕ ಶಿಲ್ಪ ಹಾಗೂ ಚಿತ್ರಕಲಾ ಕೃತಿಗಳು ಇರಲಿವೆ. ಉದಯೋನ್ಮುಖ ಕಲಾವಿದರಿಗೆ ಅವಕಾಶ ಕೊಡಲು ಯೋಜಿಸಲಾಗಿದೆ.

ಮಕ್ಕಳಿಗೆ ಸ್ಥಳದಲ್ಲೇ ಚಿತ್ರಬಿಡಿಸುವ ಸ್ಪರ್ಧೆಯನ್ನೂ ನಡೆಸಲಾಗುವುದು.

ಮರ ಕೆತ್ತನೆ ಕಲಾ ಪ್ರಕಾರವು ಈ ಬಾರಿಯ ವಿಶೇಷ ಆಕರ್ಷಣೆಯಾಗಿರಲಿದೆ. ಕೊರಡಿಗೆ ಆಕರ್ಷಕ ರೂಪವನ್ನು ಕಲಾವಿದರು ನೀಡಲಿದ್ದಾರೆ.

ಶಿಬಿರಗಳಿಗೆ ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಯೋಗ ಪಡೆಯಲು ಯೋಜಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸಿದ್ಧತೆ ನಡೆದಿದೆ
ಈ ಬಾರಿಯ ಶಿಬಿರಗಳು ಹಾಗೂ ಕಾರ್ಯಕ್ರಮಗಳು ಸಾರ್ವಜನಿಕರ ಗಮನಸೆಳೆಯುವಂತೆ ಇರಲಿವೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
–ರಶ್ಮಿ, ಕಾರ್ಯದರ್ಶಿ, ಲಲಿತ ಕಲೆ ಉಪ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT