ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆಯ ನೆನಪು: ಮಹಾರಾಜರ ವಿರುದ್ಧ ಸಮಾಜವಾದಿ ಹೋರಾಟ– ಪ.ಮಲ್ಲೇಶ್‌

Last Updated 17 ಸೆಪ್ಟೆಂಬರ್ 2021, 3:58 IST
ಅಕ್ಷರ ಗಾತ್ರ

ಮೈಸೂರು ದಸರಾದ ಗತ ವೈಭವಗಳಬಗ್ಗೆ ಹೋರಾಟಗಾರಪ.ಮಲ್ಲೇಶ್‌ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತ ನಾಗಿದ್ದೆ. ನಾನು ತಂಗಿದ್ದ ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಶಾಂತವೇರಿ ಗೋಪಾಲ ಗೌಡರು ಉಳಿದುಕೊಳ್ಳುತ್ತಿದ್ದರು. ನಾವೆಲ್ಲ ಅವರ ಪ್ರಭಾವಕ್ಕೆ ಒಳಗಾಗಿದ್ದೆವು.

ಚಿನ್ನದ ಅಂಬಾರಿಯಲ್ಲಿ ಮಹಾರಾಜರು ಕುಳಿತುಕೊಳ್ಳುವುದನ್ನು ವಿರೋಧಿಸಿ 1970ರ ದಶಕದಲ್ಲಿ ಸಮಾಜವಾದಿಗಳಾದ ಟಿ.ವಿ.ಶ್ರೀನಿವಾಸರಾಯ, ವೇದಾಂತ ಹೆಮ್ಮಿಗೆ, ಶ್ರೀಕಂಠಯ್ಯ, ಟಿ.ಎನ್‌.ನಾಗರಾಜ್ ಮೊದಲಾದವರು ಪ್ರತಿಭಟನೆ ನಡೆಸಿದ್ದರು. ದಸರಾ ನಿಲ್ಲಿಸುವಂತೆ ಆಗ್ರಹಿಸಿದ್ದರು. ಆ ಹೋರಾಟದಲ್ಲಿ ನಾನೂ ಭಾಗವಹಿಸಿದ್ದೆ. ಹೋರಾಟದ ನೇತೃತ್ವ ವಹಿಸಿದ್ದ ಮುಖಂಡರನ್ನು ಪೊಲೀಸರು ಬಂಧಿಸಿದ್ದರು.

ನಾನು ಹುಟ್ಟಿದ್ದು ಚಿತ್ರದುರ್ಗದ ಗುಡ್ಡದರಂಗವ್ವನಹಳ್ಳಿಯಲ್ಲಿ. 1946–47ನೇ ಇಸವಿಯಲ್ಲಿ ಲೋಯರ್‌ ಸೆಕೆಂಡರಿ ಓದುತ್ತಿದ್ದಾಗ ರ‍್ಯಾಂಕ್‌ ಪಡೆದೆ ಎಂಬ ಕಾರಣಕ್ಕೆ ಪೋಷಕರು ಮೈಸೂರು ದಸರಾ ನೋಡಲು ನನ್ನನ್ನು ಕಳುಹಿಸಿದ್ದರು. ಖರ್ಚಿಗೆಂದು ₹25 ಕೊಟ್ಟಿದ್ದರು.

ಬಂಬೂಬಜಾರ್‌ ಬಳಿ ಇದ್ದ ಮೆಟ್ಟಿಲುಗಳ ಎದುರಿನ ಬಯಲು ಪ್ರದೇಶದಲ್ಲಿ ನೆಲದ ಮೇಲೆ ಕುಳಿತು ಜಂಬೂಸವಾರಿಯನ್ನು ಕಣ್ತುಂಬಿಕೊಂಡಿದ್ದೆ. ಆನೆಗಳು, ಕುದುರೆಗಳು, ಸೈನಿಕರ ದೊಡ್ಡ ಮೆರವಣಿಗೆಯೇ ನಡೆಯುತ್ತಿತ್ತು. ಕುದುರೆಗಳ ಸಾರೋಟು, ಅಂಬಾರಿ ಮೇಲೆ ಮಹಾರಾಜರು ವಿರಾಜಮಾನರಾಗಿ ಬರುತ್ತಿರುವುದನ್ನು ನೋಡುವುದೇ ಒಂದು ಆನಂದ. ಇಂದಿನ ಜಂಬೂಸವಾರಿಗಿಂತ ಅಂದಿನದೇ ವೈಭವ. ಗಂಟೆಗಟ್ಟಲೆ ಮೆರವಣಿಗೆ ಸಾಗುತ್ತಿತ್ತು.

ಜಂಬೂಸವಾರಿ ಸಾಗುವ ಮಾರ್ಗ ಚಿಕ್ಕದಾಗಿದ್ದರೂ ಲಕ್ಷಾಂತರ ಜನ ಬರುತ್ತಿದ್ದರು. ನಾವು ಕುಳಿತುಕೊಳ್ಳುತ್ತಿದ್ದ ಜಾಗದ ಸಮೀಪದಲ್ಲೇ ನೂರಾರು ಎತ್ತಿನಗಾಡಿಗಳು ನಿಂತಿರುತ್ತಿದ್ದವು. ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾಗಿದ್ದವು.

ಈಗ ಕಣ್ಮುಂದಿನ ದಸರೆಗಿಂತಲೂ ನೆನಪುಗಳೇ ನಮಗೆ ಚೆನ್ನ. ಆ ಲೋಕದಲ್ಲಿ ಮೂಡುವ ದಸರೆಯು ಆಧುನಿಕತೆಯ ಹೆಸರಿನಲ್ಲಿ ಪರಂಪರೆಯನ್ನು ಹಿಂದಿಕ್ಕದೆ ಜೊತೆಗೇ ಸಾಗುತ್ತದೆ. ನಾವೂ ಅದರೊಂದಿಗೆ ಸಾಗುತ್ತೇವೆ.

–ಪ.ಮಲ್ಲೇಶ್‌, ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT