ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ರಸ್ತೆ ಗುಂಡಿ ಮುಚ್ಚದೇ ದೀಪಾಲಂಕಾರಕ್ಕೆ ಆದ್ಯತೆ!

ಸರ್ಕಾರ, ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 21 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಮಹೋ‌ತ್ಸವದ ಹಿನ್ನೆಲೆಯಲ್ಲಿ ನಗರದಾದ್ಯಂತ ರಸ್ತೆಗಳಲ್ಲಿನ ಗುಂಡಿಗಳನ್ನೇ ಮುಚ್ಚದೆ ಮತ್ತು ಡಾಂಬರೀಕರಣಕ್ಕೆ ಆದ್ಯತೆ ನೀಡದೇ ವಿದ್ಯುತ್ ದೀಪಾಲಂಕಾರಕ್ಕೆ ಒತ್ತು ನೀಡಿರುವ ಸರ್ಕಾರದ ಕ್ರಮವು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ದೀಪ ಸೌಂದರ್ಯ’ ಕಣ್ತುಂಬಿಕೊಳ್ಳುವ ಭರದಲ್ಲಿ ಸವಾರರು ಗುಂಡಿಗಳಲ್ಲಿ ಬಿದ್ದು ಗಾಯಗೊಳ್ಳುವ ಅಥವಾ ಅಪಘಾತ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುವುದು ಪ್ರಜ್ಞಾವಂತರ ಆತಂಕವಾಗಿದೆ.

ನಗರದ ಹೃದಯ ಭಾಗದಲ್ಲೇ ಇರುವ ಡಿ.ದೇವರಾಜ ಅರಸು ರಸ್ತೆಯ ಒಂದು ಬದಿಯನ್ನು ಒಳಚರಂಡಿ (ಯುಜಿಡಿ) ಕಾಮಗಾರಿಗಾಗಿ ಇತ್ತೀಚೆಗೆ ಅಗೆಯಲಾಗಿತ್ತು. ಆ ಕಾರಣದಿಂದಾಗಿ ಅಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹಲವು ದಿನಗಳವರೆಗೆ ಕಾಮಗಾರಿ ನಡೆಯಿತು. ಬಳಿಕ ಗುಂಡಿಗಳನ್ನು ಮಣ್ಣಿನಿಂದ ಮುಚ್ಚಲಾಗದೆ. ಇಂದಿಗೂ ಡಾಂಬರೀಕರಣ ನಡೆದಿಲ್ಲ. ಇದರಿಂದಾಗಿ ಆ ರಸ್ತೆಯ ಒಂದು ಬದಿಯು ಇಂದಿಗೂ ದುಃಸ್ಥಿತಿಯಲ್ಲೇ ಇದೆ. ಕೆ.ಆರ್‌.ವೃತ್ತದ ಕಡೆಯಿಂದ ಪ್ರವೇಶಿಸುವ ಸ್ಥಳದಲ್ಲಿ ಬಹಳ ಹಾಳಾಗಿದೆ.

ಅರಸು ರಸ್ತೆಯಲ್ಲ ದೂಳಿನ ಮಜ್ಜನ!:

ಅಲ್ಲಿ ಸಂಚರಿಸುವವರಿಗೆ ನಿತ್ಯವೂ ದೂಳಿನ ಮಜ್ಜನವಾಗುತ್ತಿದೆ! ಪ್ರಮುಖವಾದ ಈ ರಸ್ತೆಯನ್ನು ದಸರಾ ಸಮೀಪಿಸುತ್ತಿದ್ದರೂ ದುರಸ್ತಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಜನಪ್ರತಿನಿಧಿಗಳೂ ಕಾಳಜಿ ವಹಿಸಿಲ್ಲ. ಪರಿಣಾಮ ಜನರಿಗೆ ಹಾಗೂ ಅಲ್ಲಿನ ಅಂಗಡಿಕಾರರಿಗೆ ದೂಳಿನಿಂದ ತೊಂದರೆ ಅನುಭವಿಸುವುದು ನಿವಾರಣೆಯಾಗಿಲ್ಲ. ಆ ರಸ್ತೆಯಲ್ಲಿ ಸಾಗಿ ಬಂದು ಕೂಡುವ ಕೃಷ್ಣವಿಲಾಸ ರಸ್ತೆಯಲ್ಲೂ ಅಲ್ಲಲ್ಲಿ ಗುಂಡಿಗಳು ಉಂಟಾಗಿವೆ. ನಿತ್ಯವೂ ಶಾಲಾ–ಕಾಲೇಜುಗಳ ಮಕ್ಕಳು ಸಂಚರಿಸುವ ಮಾರ್ಗವಿದು. ಆದರೆ, ಪರಿಸ್ಥಿತಿ ಸುಧಾರಿಸಿಲ್ಲ. ಅಕ್ಕಪಕ್ಕದ ರಸ್ತೆಗಳ ಸ್ಥಿತಿಯೂ ಆಡಳಿತದ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತಿದೆ!

ಓದುಗರಿಂದ:

‘ಗೋಕುಲಂನ ನಿರ್ಮಲಾ ಕಾನ್ವೆಂಟ್ ರಸ್ತೆ, ಅಶೋಕ ರಸ್ತೆಯ 12 ಹಾಗೂ 13ನೇ ಕ್ರಾಸ್ ಬಹಳ ಹಾಳಾಗಿದೆ. ರಸ್ತೆಗಳು ದುಃಸ್ಥಿತಿಯಲ್ಲಿರುವುದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದೇವೆ. ಸಂಬಂಧಿಸಿದವರು ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಆ ಭಾಗದ ನಿವಾಸಿಗಳು ಒತ್ತಾಯಿಸಿದರು.

‘ವಿಜಯನಗರ 1ನೇ ಹಂತದ ಕನ್ನಡ ಸಾಹಿತ್ಯ ಭವನದ ರಸ್ತೆಯೂ ಗುಂಡಿಗಳಿಂದ ಕೂಡಿದೆ. ವರ್ಷದಿಂದಲೂ ಸುಗಮ ಸಂಚಾರಕ್ಕೆ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಸಮಸ್ಯೆ ಪರಿಹರಿಸಬೇಕು’ ಎಂದು ನಿವಾಸಿಯೊಬ್ಬರು ಕೋರಿದರು.

ತೀವ್ರ ಹಾಳಾಗಿದೆ:

ಗುಂಡಿಗಳ ದುಃಸ್ಥಿತಿ ಬಗ್ಗೆ ಪ್ರೊ.ಎಂ.ಎಸ್.ಎಸ್.ಶರ್ಮ ಹೇಳುವುದು ಹೇಳುವುದು ಹೀಗೆ. ‘ವಾರ್ಡ್‌ ನಂ.23ರ ವೀಣೆ ಶೇಷಣ್ಣ ರಸ್ತೆಯ ಅನಾಥಾಲಯ ಹಾಸ್ಟೆಲ್‌ ಸಮೀಪ ದೊಡ್ಡ ಗುಂಡಿ ಉಂಟಾಗಿದೆ. ಹೋದ ವರ್ಷ ಮಳೆಯಲ್ಲಿ ಇದೇ ಗುಂಡಿಯಲ್ಲಿ ನಾವು ಸ್ಕೂಟರ್‌ನಿಂದ ಬಿದ್ದು ಗಾಯಗೊಂಡಿದ್ದೆವು. ಕ್ಷೇತ್ರಯ್ಯ ರಸ್ತೆ, ಗಾಣಿಗರ ಬೀದಿ, ಆಯಿಲ್ ಮಿಲ್ ರಸ್ತೆ, ಗುಪ್ತ ಫಾರ್ಮ ಎದುರು, ಕಾಲೇಜು ರಸ್ತೆ, ಚಾಮುಂಡಿ ಹೆರಿಗೆ ಆಸ್ಪತ್ರೆಯ ಎದುರಿನ ರಸ್ತೆಯೂ ತೀವ್ರ ಹಾಳಾಗಿದೆ’ ಎಂದು ಮಾಹಿತಿ ನೀಡಿದರು.

‘ಕನಕಗಿರಿ ಪ್ರದೇಶದಲ್ಲಿನ ರಸ್ತೆಯು ಗುಂಡಿಗಳಿಂದಲೇ ಕೂಡಿದೆ. ಮಳೆಯಾದಾಗ ಕೆಸರು ಗದ್ದೆಯಂತಾಗುತ್ತದೆ. ಗುಂಡಿಗಳಲ್ಲಿ ನೀರು ಸಂಗ್ರಹವಾಗುವುದರಿಂದಾಗಿ ವಾಹನಗಳ ಸಂಚಾರ ಸರ್ಕಸ್‌ನಂತಾಗುತ್ತದೆ. ವಿದ್ಯಾರಣ್ಯಪುರಂನ ಹಲವು ರಸ್ತೆಗಳಲ್ಲಿನ ಸ್ಥಿತಿಯು ಹೀಗೆಯೇ ಇದೆ. ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಅನುಕೂಲ ಕಲ್ಪಿಸಲಿ

ಶ್ರೀರಾಂಪುರ ಸಮೀಪದ ವರ್ತುಲ ರಸ್ತೆ ಸಮೀಪದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ರಸ್ತೆಗಳು ಬಹಳಷ್ಟು ಹಾಳಾಗಿವೆ. ದುರಸ್ತಿಪಡಿಸಿ ಅನುಕೂಲ ಕಲ್ಪಿಸಲಿ.

–ಜಿ.ಪುನೀತ್, ನಿವಾಸಿ,ಮೂಕಾಂಬಿಕಾ ಸಮೃದ್ಧಿ ಬಡಾವಣೆ

ಗಾಯಗೊಂಡವರು ಹಲವರು

ವಿದ್ಯಾರಣ್ಯಪುರಂನ ಸೇಂಟ್ ಥಾಮಸ್ ಶಾಲೆ ಎದುರಿನ ರಸ್ತೆ ದುಃಸ್ಥಿತಿಯಲ್ಲಿದೆ. ಗುಂಡಿಗಳಿಂದಲೇ ಕೂಡಿರುವುದರಿಂದ ಹಲವರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ತ್ವರಿತವಾಗಿ ದುರಸ್ತಿ ಮಾಡಿಕೊಡಲಿ.

–ರೋಷಿತಾ ಮೇರಿ ಡಿಸೋಜಾ, ನಿವಾಸಿ, ವಿದ್ಯಾರಣ್ಯಪುರಂ

ವರ್ಷದಿಂದಲೂ ದುಃಸ್ಥಿತಿ

ಜಯನಗರದ ಮೊದಲನೇ ಮುಖ್ಯ ರಸ್ತೆಯು ಒಂದು ವರ್ಷದಿಂದಲೂ ಹಾಳಾಗಿದೆ. ದುರಸ್ತಿಗೆ ಕ್ರಮವಾಗಿಲ್ಲ. ಇದರಿಂದ ನಾವು ತೊಂದರೆ ಅನುಭವಿಸುವುದು ತಪ್ಪಿಲ್ಲ.

–ರಮೇಶ್, ಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT