ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮೈಸೂರು ಭೇಟಿಗೆ ₹ 20 ಕೋಟಿ ವೆಚ್ಚ: ಇದರಿಂದ ಜಿಲ್ಲೆಗೆ ಸಿಕ್ಕಿದ್ದೇನು?

ಹುಸಿಯಾದ ಯೋಗ ವಿಶ್ವವಿದ್ಯಾಲಯದ ಘೋಷಣೆ ನಿರೀಕ್ಷೆ
Last Updated 21 ಜೂನ್ 2022, 19:30 IST
ಅಕ್ಷರ ಗಾತ್ರ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ನಗರಕ್ಕೆ ಮಹತ್ವದ ಯಾವುದೇ ಘೋಷಣೆಗಳು ಹೊರಬೀಳಲಿಲ್ಲ. ಅವರು ಬರುತ್ತಾರೆ ಎಂಬ ಕಾರಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಬಿಟ್ಟರೆ, ವಿಶಿಷ್ಟ ಎನಿಸುವಂತಹ ಕೊಡುಗೆಗಳೇನೂ ಸಿಕ್ಕಿಲ್ಲ.

ಅಂತರರಾಷ್ಟ್ರೀಯ ಯೋಗ ದಿನಾಚರಣೆಯು ಇಲ್ಲೇ ನಡೆದಿದ್ದರಿಂದ ಸಾಂಸ್ಕೃತಿಕ ನಗರಿಗೆ ಯೋಗ ವಿಶ್ವವಿದ್ಯಾಲಯ ದೊರೆಯಬಹುದೇ ಎಂಬ ಯೋಗಾಭ್ಯಾಸಿಗಳ ನಿರೀಕ್ಷೆಗೆ ತಕ್ಕಂತೆ ಯಾವುದೇ ಬೆಳವಣಿಗೆಗೆಳು ನಡೆಯಲಿಲ್ಲ.

ಮೈಸೂರಿನಲ್ಲಿ ಹಲವು ಯೋಗ ಸಂಸ್ಥೆಗಳಿವೆ. ನಿತ್ಯವೂ ನೂರಾರು ಮಂದಿ ಯೋಗಾಭ್ಯಾಸದ ತರಬೇತಿಗೆ, ತರಗತಿಗೆ ಹಾಜರಾಗುತ್ತಾರೆ. ಯೋಗವನ್ನು ಹಣ ಗಳಿಕೆಯ ಮಾಧ್ಯಮವನ್ನಾಗಿ ಮಾಡಿಕೊಂಡವರೂ ಇದ್ದಾರೆ. ಗೋಕುಲಂ ಮೊದಲಾದ ಕಡೆಗಳಲ್ಲಿ ಯೋಗ ತರಬೇತುದಾರರ ಬಳಿಗೆ ವಿದೇಶಿಯರೂ ಕೂಡ ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಯೋಗ ಪ್ರವಾಸೋದ್ಯಮವೂ ಇಲ್ಲಿ ನಡೆಯುತ್ತಿದೆ. ಇಷ್ಟೆಲ್ಲ ಪೂರಕವಾದ ವಾತಾವರಣದ ಹಿನ್ನೆಲೆಯಲ್ಲಿ ಪಾರಂಪರಿಕ ನಗರದಲ್ಲಿ ಯೋಗಕ್ಕೆ ‘ಬೂಸ್ಟರ್‌ ಡೋಸ್’ ಕೊಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಕೊಡುಗೆಯನ್ನು ಜನರು ಪ್ರಧಾನಿಯಿಂದ ನಿರೀಕ್ಷಿಸಿದ್ದರು. ಆದರೆ, ಈ ವಿಷಯದಲ್ಲಿ ಪ್ರಧಾನಿಯು ಪ್ರಸ್ತಾಪ ಮಾಡಲಿಲ್ಲ. ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ, ವೇಳೆ ಅಂತರರಾಷ್ಟ್ರೀಯ ಯೋಗ ದಿನವನ್ನು ಮೈಸೂರಿನಲ್ಲಿ ನಡೆಸಿದ್ದಕ್ಕೆ ಖುಷಿಯೂ ವ್ಯಕ್ತವಾಗಿದೆ.

ಪ್ರಶ್ನೆಗಳಿಗೆ ಉತ್ತರಿಸಲಿಲ್ಲ:ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಮೋದಿ ಮೈಸೂರನ್ನು, ಮೈಸೂರಿನ ಪರಂಪರೆಯನ್ನು ಸ್ಮರಿಸಿದರು; ಮುಕ್ತ ಕಂಠದಿಂದ ಶ್ಲಾಘಿಸಿದರು. ಈವರೆಗೆ ತಾವು ಮಾಡಿರುವ ಕೆಲಸಗಳ ಬಗ್ಗೆ ಹೇಳಿಕೊಂಡರೇ ಹೊರತು, ಎಲ್ಲಿಯೂ ಯಾವುದೇ ಹೊಸ ಘೋಷಣೆಗಳನ್ನು ಮಾಡಲಿಲ್ಲ. ‘ಮೈಸೂರನ್ನು ಪ್ಯಾರಿಸ್ ಮಾದರಿಯ ನಗರವನ್ನಾಗಿ ಮಾಡುತ್ತೇವೆ ಎಂದು ನೀವು ಕೊಟ್ಟಿದ್ದ ಭರವಸೆ ಏನಾಯಿತು’ ಎಂಬ ಎಡ ಪಕ್ಷಗಳು, ದಲಿತ ಸಂಘರ್ಷ ಸಮಿತಿ, ರೈತ ಸಂಘದವರ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆಯನ್ನೂ ಮೋದಿ ಕೊಡಲಿಲ್ಲ!

₹ 20 ಕೋಟಿ ವೆಚ್ಚ!

ಚಾಮರಾಜ ಜೋಡಿ ರಸ್ತೆ, ಅರಮನೆ ಸುತ್ತಮುತ್ತ, ಜೆಎಲ್‌ಬಿ ರಸ್ತೆ, ಚಾಮುಂಡಿಬೆಟ್ಟದ ರಸ್ತೆ, ಆಯಿಷ್ ಸಂಪರ್ಕಿಸುವ ಮಾರ್ಗ ಸೇರಿದಂತೆ ಹಲವು ರಸ್ತೆಗಳನ್ನು ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ದುರಸ್ತಿಪಡಿಸಲಾಗಿದೆ. ಕೋವಿಡ್–19 ಸೃಷ್ಟಿಸಿದ್ದ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಎರಡು ವರ್ಷಗಳಿಂದ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿರಲಿಲ್ಲ. ‍ರಸ್ತೆಗಳ ಸ್ಥಿತಿ ಸುಧಾರಿಸುವುದಕ್ಕಾಗಿ ಮಹಾನಗರಪಾಲಿಕೆಯಿಂದ ₹ 10 ಕೋಟಿ ವಿನಿಯೋಗಿಸಲಾಗಿದೆ.

ಪರಿಸರ ಪ್ರೇಮಿಗಳ ವಿರೋಧದ ನಡುವೆಯೂ ಚಾಮುಂಡಿಬೆಟ್ಟದ ಮಾರ್ಗದ ಬದಿಯಲ್ಲಿ ವಿದ್ಯುತ್‌ ದೀಪಗಳ ಅಳವಡಿಕೆ ಮಾಡಲಾಗಿದೆ. ಇದಲ್ಲದೇ, ಯೋಗ ಕಾರ್ಯಕ್ರಮ ನಡೆದ ಮೈಸೂರು ಅರಮನೆ ಸುತ್ತಮುತ್ತಲಿನ ರಸ್ತೆ ಹಾಗೂ ವೃತ್ತಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿತ್ತು. ಬ್ಯಾರಿಕೇಡಿಂಗ್‌, ಮಹಾರಾಜ ಕಾಲೇಜು ಮೈದಾನದಲ್ಲಿ ಮಳೆ ಬಂದಲ್ಲಿ ಸೋರದಂತಹ ವ್ಯವಸ್ಥೆ ಇಲ್ಲದ ಬೃಹತ್‌ ಪೆಂಡಾಲ್‌ ಸಿದ್ಧಪಡಿಸುವುದು ಮೊದಲಾದ ಕೂಡ ನಡೆದಿತ್ತು. ಗಣ್ಯರು, ಹಿರಿಯ ಅಧಿಕಾರಿಗಳು–ಸಿಬ್ಬಂದಿಯ ಊಟ, ಉಪಾಹಾರ ಮತ್ತು ವಾಸ್ತವ್ಯ ಮೊದಲಾದವುಗಳಿಗಾಗಿ ಹೆಚ್ಚಿನ ಪ್ರಮಣದಲ್ಲಿ ಹಣ ಖರ್ಚಾಗಿದೆ. ಒಟ್ಟಾರೆ ಅಂದಾಜು ₹ 20 ಕೋಟಿ ವೆಚ್ಚವಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಪ್ರಧಾನಿಯ ಕೆಲವೇ ಗಂಟೆಗಳ ಪ್ರವಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗಿದೆ. ಕೆಲವು ಅಭಿವೃದ್ಧಿ ಕಾಮಗಾರಿಗಳೂ ನಡೆದಿವೆ. ಪ್ರಧಾನಿ ಸಂಚರಿಸುವ ಮಾರ್ಗಗಳನ್ನಷ್ಟೆ ಅಭಿವೃದ್ಧಿಪಡಿಸಿದ್ದಕ್ಕೆ ಅಸಮಾಧಾನವೂ ಇದೆ. ಎಲ್ಲ ರಸ್ತೆಗಳಿಗೂ ಅಭಿವೃದ್ಧಿ ಭಾಗ್ಯ ದೊರೆಯಲಿ ಎನ್ನುವುದು ನಾಗರಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT