ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಐಟಿ ಬಲವರ್ಧನೆಗೆ ತಂತ್ರಾಂಶ: ಡಾ.ಪಿ. ರವೀಂದ್ರನಾಥ್ ಹೇಳಿಕೆ

ನಿರ್ಗಮನ ಪಥಸಂಚಲನದಲ್ಲಿ ಡಿಜಿಪಿ (ತರಬೇತಿ) ಡಾ.ಪಿ. ರವೀಂದ್ರನಾಥ್ ಹೇಳಿಕೆ
Last Updated 2 ಜುಲೈ 2022, 12:39 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯ ಪೊಲೀಸ್ ಮಾಹಿತಿ ತಂತ್ರಜ್ಞಾನ(ಐಟಿ) ವಿಭಾಗದ ಬಲವರ್ಧನೆಗೆ ಕ್ರಮ ವಹಿಸಲಾಗಿದೆ’ ಎಂದು ಡಿಜಿಪಿ (ತರಬೇತಿ) ಡಾ.ಪಿ. ರವೀಂದ್ರನಾಥ್ ತಿಳಿಸಿದರು.

ಇಲ್ಲಿನ ಜ್ಯೋತಿ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಪೊಲೀಸ್ ತರಬೇತಿ ಶಾಲೆಯಿಂದ ಶನಿವಾರ ಆಯೋಜಿಸಿದ್ದ 7ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್‌, ರೈಲ್ವೆ ಮತ್ತು ಕೆಎಸ್‌ಐಎಸ್‌ಎಫ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಉತ್ತಮ ಸಾಧನೆ ತೋರಿದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಐಟಿ ವಿಭಾಗಕ್ಕೆ ತಂತ್ರಾಂಶಗಳನ್ನು ಅಳವಡಿಸುವುದಕ್ಕಾಗಿ ಮತ್ತು ಉನ್ನತೀಕರಿಸಲು ಮೈಕ್ರೋಸಾಫ್ಟ್‌ ಕಂಪನಿಗೆ ವಹಿಸಲಾಗಿದೆ. ಇದು ಒಂದೆರಡು ವರ್ಷಗಳಲ್ಲಿ ಅನುಷ್ಠಾಗುವ ಸಾಧ್ಯತೆ ಇದೆ. ಸುಧಾರಿತ ವ್ಯವಸ್ಥೆ ಜಾರಿಯಾದಲ್ಲಿ, ‍ಪ್ರಕರಣದ ಮಾಹಿತಿಯು ದೂರು ನೀಡಿದವರ ಮೊಬೈಲ್‌ ಫೋನ್‌ಗೆ ಬರಲಿದೆ. ದೂರು ದಾಖಲಿಸುವುದು, ಅಧಿಕಾರಿಗಳ ಕ್ರಮ ಸೇರಿದಂತೆ ಹಲವು ವ್ಯವಸ್ಥೆಯಲ್ಲಿ ಸುಧಾರಣೆ ಆಗಲಿದೆ. ಕಾನ್‌ಸ್ಟೆಬಲ್‌ಗಳು ಕೂಡ ಐಟಿ ತಜ್ಞರಾಗಬಹುದಾಗಿದೆ’ ಎಂದು ಹೇಳಿದರು.

‘ಸಿಸಿಟಿಎನ್‌ಎಸ್ (ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್‌ ಹಾಗೂ ಸಿಸ್ಟಮ್ಸ್) ಮೂಲಕ ಅಪರಾಧಿಯ ಮಾಹಿತಿಯನ್ನು ಪೊಲೀಸ್, ನ್ಯಾಯಾಲಯ ಮತ್ತು ಕಾರಾಗೃಹದ ಅಧಿಕಾರಿಗಳು ನಿಗಾ ವಹಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ’ ಎಂದರು.

‘ಕಾನ್‌ಸ್ಟೆಬಲ್‌ಗಳು ಬಡವರು, ನಿರ್ಗತಿಕರು, ಶೋಷಿತರು, ಮಹಿಳೆಯರು, ಮಕ್ಕಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಉತ್ತಮವಾಗಿ ಕೆಲಸ ಮಾಡಿದರೆ ಉನ್ನತ ಸ್ಥಾನಗಳಿಗೆ ಹೋಗಬಹುದು’ ಎಂದು ತಿಳಿಸಿದರು.

‘ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ’ ಎಂದರು.

ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ಎ.ಅಗರ್‌ವಾಲ್‌, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಡಾ.ಎಚ್.ಟಿ. ಶೇಖರ್ ಪಾಲ್ಗೊಂಡಿದ್ದರು.

ಎಸ್‌ಐ ಲಕ್ಷ್ಮಿ ಮತ್ತು ಆಕಾಶವಾಣಿಯ ಮಂಜುನಾಥ್ ನಿರೂಪಿಸಿದರು. ಡಿವೈಎಸ್ಪಿ ಶಂಕರೇಗೌಡ ವಂದಿಸಿದರು.

ಪ್ರಿಯಾಂಕಾ ಅತ್ಯುತ್ತಮ ಪ್ರಶಿಕ್ಷಣಾರ್ಥಿ

7ನೇ ತಂಡದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳ ಬುನಾದಿ ತರಬೇತಿಯಲ್ಲಿ 116 ಪ್ರಶಿಕ್ಷಣಾರ್ಥಿಗಳು ಬುನಾದಿ ತರಬೇತಿ ಪಡೆದಿದ್ದಾರೆ. ಇವರಲ್ಲಿ ಆರ್. ಪ್ರಿಯಾಂಕಾ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಬಹುಮಾನ ಗಳಿಸಿದರು.

ವಿವಿಧ ವಿಭಾಗಗಳಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿ ಪ್ರಶಸ್ತಿಗೆ ಭಾಜನವಾದವರು ಇಂತಿದ್ದಾರೆ.

* ಒಳಾಂಗಣ: ಆರ್. ಪ್ರಿಯಾಂಕಾ, ಎಚ್.ಎನ್. ಸೌಜನ್ಯಾ, ಪ್ರೇಮ ಉದಯ್ ನಾಯಕ್.

* ಹೊರಾಂಗಣ: ಶ್ರೀದೇವಿ, ದೀಪಾ ಈರಣ್ಣ ಕಂಬಾರ, ಪ್ರೇಮಾ.

* ಫೈರಿಂಗ್ ವಿಭಾಗ: ಡಿ. ಮಂಜುಳಾ, ಎಂ.ಎನ್. ಭಾರ್ಗವಿ, ಕೆ.ಎಸ್. ಅರ್ಚನಾ.

ಸ್ಪಂದನೆ ಸಿಗಲಿ

ಅನ್ಯಾಯ ಅಥವಾ ಏನೇ ಸಮಸ್ಯೆಯಾದರೂ ಜನರು ಮೊದಲು ಬರುವುದು ಪೊಲೀಸ್ ಠಾಣೆಗೆ. ಅವರಿಗೆ ಸ್ಪಂದನೆ ಸಿಗುವಂತೆ ಕಾನ್‌ಸ್ಟೆಬಲ್‌ಗಳು ಕಾರ್ಯನಿರ್ವಹಿಸಬೇಕು.

–ಡಾ.ಪಿ. ರವೀಂದ್ರನಾಥ್, ಡಿಜಿಪಿ (ತರಬೇತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT