ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬಾರಿ’ ಏರಲು ನೀರಸ ಪ್ರತಿಕ್ರಿಯೆ: 6 ಡಬಲ್ ಡೆಕ್ಕರ್ ಬಸ್‌ಗಳಲ್ಲಿ 2 ಮಾತ್ರ ಬಳಕೆ

Last Updated 2 ಜುಲೈ 2022, 19:30 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ವೃದ್ಧಿಸುವ ಭಾಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಆಕರ್ಷಕವಾಗಿ ವಿನ್ಯಾಸಗೊಳಿಸಿರುವ ‘ಡಬಲ್‌ ಡೆಕ್ಕರ್‌ ಬಸ್‌’ನಲ್ಲಿ ಸಂಚಾರಕ್ಕೆ ಜನರು ಮತ್ತು ಪ್ರವಾಸಿಗರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 6ರಲ್ಲಿ 2 ಬಸ್‌ಗಳನ್ನಷ್ಟೆ ರಸ್ತೆಗಿಳಿಸಲಾಗುತ್ತಿದೆ.

ಪ್ರವಾಸಿಗರು, ಸಾಂಸ್ಕೃತಿಕ ನಗರಿಯ ಪಾರಂಪರಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ತಾಣಗಳನ್ನು ಬಸ್‌ನಲ್ಲಿ ಕುಳಿತು ವೀಕ್ಷಿಸಲು ಅನುಕೂಲ ಆಗುವಂತೆ ರೂಪಿಸಿರುವ ಯೋಜನೆ ಇದು. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆರು ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅದಕ್ಕೆ ಮೈಸೂರಿನ ಬ್ರ್ಯಾಂಡ್‌ ಆಗಿರುವ ‘ಅಂಬಾರಿ’ ಎಂದು ಹೆಸರಿಡಲಾಗಿದೆ. 2021ರ ಮಾರ್ಚ್‌ 2ರಂದು ಚಾಲನೆ ನೀಡಲಾಗಿತ್ತು.

ಸದ್ಯ ವಾರದ ದಿನಗಳಲ್ಲಿ ಕೇವಲ ಒಂದು ಹಾಗೂ ವಾರಾಂತ್ಯದಲ್ಲಿ 2 ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರವಾಸಿಗರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಬಾರದಿದ್ದರಿಂದಾಗಿ ಎಲ್ಲ ಬಸ್‌ಗಳನ್ನೂ ಬಳಸಲಾಗುತ್ತಿಲ್ಲ. ಪರಿಣಾಮ, ಉಳಿದ ಬಸ್‌ಗಳನ್ನು ಬನ್ನಿಮಂಟಪದಲ್ಲಿರುವ ನಿಗಮದ ಡಿಪೊದಲ್ಲಿ ನಿಲ್ಲಿಸಲಾಗಿದೆ. ಎಲ್ಲವುಗಳನ್ನೂ ಕಾರ್ಯಾಚರಣೆ ನಡೆಸಿದರೆ ಡೀಸೆಲ್‌ ವೆಚ್ಚ ಹೊರೆಯಾಗುತ್ತಿದೆ. ವೆಚ್ಚ ಸರಿದೂಗಿಸುವಷ್ಟು ಆದಾಯವನ್ನು ‘ಅಂಬಾರಿ’ ತಂದುಕೊಡುತ್ತಿಲ್ಲ.

‘ಸದ್ಯ ಎರಡು ‘ಅಂಬಾರಿ’ ಬಸ್‌ಗಳನ್ನು ಮಾತ್ರವೇ ಕಾರ್ಯಾಚರಿಸಲಾಗುತ್ತಿದೆ. ಜನರನ್ನು ಆಕರ್ಷಿಸುವುದಕ್ಕಾಗಿ ಪ್ರಯಾಣ ದರದಲ್ಲಿ ₹ 100 ಇಳಿಕೆ ಮಾಡಲಾಗಿದೆ. ವಾರಾಂತ್ಯದಲ್ಲಿ 80ರಿಂದ 140 ಮಂದಿ ಬಳಸುತ್ತಿದ್ದಾರೆ. ಮೇಲಿನ ಡೆಕ್‌ನಲ್ಲಿ 20 ಸೀಟುಗಳಿದ್ದು, ಅವುಗಳಿಗೆ ಆದ್ಯತೆ ಕೊಡುತ್ತಾರೆ. ಕೆಳಗಿನ ಡೆಕ್‌ಗೆ ಬೇಡಿಕೆ ಕಂಡುಬರುತ್ತಿಲ್ಲ’ ಎಂದು ಕೆಎಸ್‌ಟಿಡಿಸಿ ಮೈಸೂರು ಕಚೇರಿಯ ವ್ಯವಸ್ಥಾಪಕ ಚೇತನ್‌ಕುಮಾರ್‌ ಪ್ರತಿಕ್ರಿಯಿಸಿದರು.

‘ಸಂಜೆ ವೇಳೆಯಷ್ಟೆ ಜನರು ಬರುತ್ತಾರೆ. ದಸರಾ ದಿನಗಳಲ್ಲಿ ಉತ್ತಮ ‍ಪ್ರತಿಕ್ರಿಯೆ ಇತ್ತು. ಜನರನ್ನು ಆಕರ್ಷಿಸುವುದಕ್ಕಾಗಿ ಅರಮನೆ ಸುತ್ತಮುತ್ತಲೇ ಅಂಬಾರಿ ನಿಲುಗಡೆ ಮಾಡಿ ಅಲ್ಲಿಂದಲೇ ಕಾರ್ಯಾಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರತಿಕ್ರಿಯೆ ದೊರೆಯಬಹುದು’ ಎನ್ನುತ್ತಾರೆ ಅವರು.

ದರ ಇಳಿಸಿದರೂ...

ಈ ಬಸ್‌ನಲ್ಲಿ ಸಂಚರಿಸಿ, ನಗರವನ್ನು ವೀಕ್ಷಿಸಲು ಆರಂಭದಲ್ಲಿ ಒಬ್ಬರಿಗೆ ₹ 250 ದರ ನಿಗದಿಪಡಿಸಲಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕ್ರಿಯೆ ಬಾರದಿದ್ದರಿಂದ ಹಾಗೂ ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ಉದ್ದೇಶದಿಂದ ₹ 150ಕ್ಕೆ ಇಳಿಸಲಾಗಿದೆ. ಕೋವಿಡ್‌–19 ಸಾಂಕ್ರಾಮಿಕ, ಲಾಕ್‌ಡೌನ್‌ ಮೊದಲಾದ ಕಾರಣಗಳಿಂದ ನಗರದಲ್ಲಿ ಕಳೆಗುಂದಿದ್ದ ಪ್ರವಾಸೋದ್ಯಮಕ್ಕೆ ‘ಬೂಸ್ಟರ್‌ ಡೋಸ್’ ಆಗಿ ‘ಅಂಬಾರಿ’ಯು ಕಾರ್ಯನಿರ್ವಹಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯು ಲೆಕ್ಕಾಚಾರ ಹಾಕಿತ್ತು. ಆದರೆ, ಅವು ವರಮಾನ ತಂದುಕೊಡುವ ಬದಲಿಗೆ, ನಿರ್ವಹಣೆಯ ಹೊಣೆಯು ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ. ಕೆಲವೇ ಟ್ರಿಪ್‌ ಸಂಚರಿಸುತ್ತಿರುವುದು ಇದಕ್ಕೆ ಕಾರಣ.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಸಂದರ್ಭದಲ್ಲಿ ವೃತ್ತಗಳು, ರಸ್ತೆಗಳು ಹಾಗೂ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. ಅದನ್ನು ಕಣ್ತುಂಬಿಕೊಳ್ಳಲು ಬಯಸುವವರು ‘ಅಂಬಾರಿ’ಯಲ್ಲಿ ಸಂಚರಿಸಿದ್ದರು. ನಂತರದ ದಿನಗಳಲ್ಲಿ ಪ್ರತಿಕ್ರಿಯೆ ಕ್ಷೀಣಿಸಿದೆ. ಈಚೆಗೆ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಲವು ದಿನಗಳು ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಆ ವೇಳೆ, ಕೆಲವರು ‘ಅಂಬಾರಿ’ಯಲ್ಲಿ ಸುತ್ತಾಡಿದ್ದರು.

ಏನಿದು ‘ಅಂಬಾರಿ’?

ಡಬಲ್ ಡೆಕ್ಕರ್ ಹೊಂದಿರುವ ಈ ಬಸ್‌ ಸಂಚರಿಸುತ್ತಿರುವಾಗ ನಗರದಲ್ಲಿನ ಪ್ರಖ್ಯಾತ ಸ್ಥಳದ ಮಾಹಿತಿಯನ್ನು ಆಡಿಯೊ–ವಿಡಿಯೊ ಮೂಲಕ ಪ್ರಯಾಣಿಕರಿಗೆ ವಿವರಿಸುವ ವ್ಯವಸ್ಥೆಯನ್ನು ಒಳಗೊಂಡಿದೆ. 25 ಅಡಿ ಎತ್ತರ ಹೊಂದಿರುವ ಬಸ್ ಇದು.

ನಾಡಹಬ್ಬ ದಸರಾ ಸಂದರ್ಭದಲ್ಲಿ ಪ್ರವಾಸಿಗರಿಂದ ಪ್ರತಿಕ್ರಿಯೆ ಹೆಚ್ಚಾಗಬಹುದು ಎನ್ನುವುದು ಇಲಾಖೆಯ ನಿರೀಕ್ಷೆಯಾಗಿದೆ.

ಇಲ್ಲಿರುವ ಆರು ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಎರಡನ್ನು ಹೊಸಪೇಟೆಯ ಹಂಪಿಗೆ ನೀಡುವುದಕ್ಕೆ ಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT